ಖತರ್ನಾಕ್ ಕೆಲಸದಾಕೆ ಸೆರೆ ೫೧.೪೦ ಲಕ್ಷ ಮೌಲ್ಯದ ಚಿನ್ನ ಬೆಳ್ಳಿ ಜಪ್ತಿ

ಬೆಂಗಳೂರು, ಅ.೨೯-ಉಂಡ ಮನೆಗೆ ದ್ರೋಹ ಬಗೆದು ಕೆಲಸ ಮಾಡುತ್ತಿದ್ದ ಮನೆಯಲ್ಲಿಯೇ ಕಳವು ಮಾಡಿದ್ದ ಖತರ್ನಾಕ್ ಮನೆ ಕೆಲಸದಾಕೆಯನ್ನು ಬಂಧಿಸಿರುವ ಜೆ.ಪಿ ನಗರ ಪೊಲೀಸರು ೫೧.೪೦ ಲಕ್ಷ ಮೌಲ್ಯದ ಚಿನ್ನ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.


ಜೆಪಿ ನಗರದ ೨ನೇ ಹಂತದ ೧೪ನೇ ಮುಖ್ಯ ರಸ್ತೆಯ ಮಂಗಳ ಎಂ(೩೨) ಬಂಧಿತ ಆರೋಪಿಗಳಾಗಿದ್ದಾಳೆ,ಆಕೆಯಿಂದ ೫೧.೪೦ ಲಕ್ಷ ಮೌಲ್ಯದ ೪೫೮ ಗ್ರಾಂ ಚಿನ್ನಾಭರಣ ಹಾಗೂ ೩ ಕೆಜಿ ೮೬೮ ಗ್ರಾಂ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.


ಜೆ.ಪಿ ನಗರದ ೨ನೇ ಹಂತದಲ್ಲಿ ೧೪ನೇ ಮುಖ್ಯರಸ್ತೆಯ ಆಶಾಜಾದವ್ ಅವರು ಸಂಬಂಧಿಕರ ಮನೆಯಲ್ಲಿ ಪೂಜೆಯಿದ್ದ ಕಾರಣ ಚಿನ್ನಾಭರಣಗಳನ್ನು ಧರಿಸುವ ಸಲುವಾಗಿ ಕೊಠಡಿಯ ಬೀರುವನ್ನು ತೆರೆದು ನೋಡಿದಾಗ ಚಿನ್ನ ಬೆಳ್ಳಿಯ ಆಭರಣಗಳು ೧ ಲಕ್ಷ ನಗದು ನಾಪತ್ತೆಯಾಗಿತ್ತು


ಕೀಯನ್ನು ಬೀರುವಿನ ಮೇಲೆ ಇಟ್ಟಿದ್ದು,ಅವರ ಮನೆಯಲ್ಲಿ ೧೦ ವರ್ಷಗಳಿಂದ ಕೆಲಸ ಮಾಡಿಕೊಂಡಿದ್ದ ಮಹಿಳೆಯು, ಕಳೆದ ೨೦ ದಿನಗಳಿಂದ ಕೆಲಸಕ್ಕೆ ಬಂದಿರುವುದಿಲ್ಲ. ಬೀರುವಿನಲ್ಲಿದ್ದ ಚಿನ್ನಾಭರಣಗಳು, ಬೆಳ್ಳಿಯ ವಸ್ತುಗಳು ಹಾಗೂ ನಗದನ್ನು ಮನೆಕೆಲಸದಾಕೆಯೇ ಕಳವು ಮಾಡಿರಬೇಕೆಂದು ಅನುಮಾನ ವ್ಯಕ್ತಪಡಿಸಿ, ಜೆಪಿನಗರ ಪೊಲೀಸರಿಗೆ ದೂರು ನೀಡಿದ್ದರು.


ದೂರಿನ ಸಂಬಂಧ ದಾಖಲಿಸಿದ ಪ್ರಕರಣದ ತನಿಖೆಯನ್ನು ಮುಂದುವರೆಸಿದ ಪೊಲೀಸರು, ಖಚಿತ ಮಾಹಿತಿ ಕಳೆದ ಅ.೧೧ ಮನೆಕೆಲಸದಾಕೆಯನ್ನು ಪುಟ್ಟೇನಹಳ್ಳಿಯ ಕಾಲೇಜ್‌ವೊಂದರ ಬಳಿಯಿರುವ ಅಕ್ಕನ ವಾಸದ ಮನೆಯ ಬಳಿ ಬಂಧಿಸಿ ವಿಚಾರಣೆ ನಡೆಸಿದಾಗ ಕಳವು ಮಾಡಿರುವುದಾಗಿ ತಪ್ಪೊಪ್ಪಿಕೊಂಡಿರುತ್ತಾಳೆ.


ಆರೋಪಿಯನ್ನು ಸುದೀರ್ಘ ವಿಚಾರಣೆ ನಡೆಸಿದಾಗ ಕಳವು ಮಾಡಿದ ಚಿನ್ನಾಭರಣಗಳು, ಬೆಳ್ಳಿಯ ವಸ್ತುಗಳನ್ನು ಜಯನಗರದಲ್ಲಿರುವ ೨ ಜ್ಯೂವೆಲರಿ ಅಂಗಡಿಗಳಲ್ಲಿ ಮತ್ತು ರಾಮೂರ್ತಿನಗರದಲ್ಲಿರುವ ೧ ಜ್ಯೂವೆಲರಿ ಅಂಗಡಿಯಲ್ಲಿ ಅಡಮಾನ ಇಟ್ಟಿರುವುದಾಗಿ ತಿಳಿಸಿದ್ದು,ಅವುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.


ಈ ಕಾರ್ಯಾಚರಣೆಯನ್ನು ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್.ಬಿ ಜಗಲಾಸರ್ ಜಯನಗರ ಉಪ ವಿಭಾಗದ ಎಸಿಪಿ ನಾರಾಯಣಸ್ವಾಮಿ ಅವರ ಮಾರ್ಗದರ್ಶನದಲ್ಲಿ ಜೆಪಿ ನಗರ ಪೊಲೀಸ್ ಇನ್ಸ್‌ಪೆಕ್ಟರ್ ಹರೀಶ್ ವಿ ಮತ್ತವರ ಸಿಬ್ಬಂದಿ ಕೈಗೊಂಡಿತ್ತು ಎಂದು ಹೇಳಿದರು.