
ವಾಣಿಜ್ಯ ಸಿಲಿಂಡರ್ ನೋಂದಣಿ ಕಡ್ಡಾಯ
ಬೆಂಗಳೂರು,ಮಾ.೨೩-ಪಶ್ವಿಮ ಏಷ್ಯಾ ಸಂಘರ್ಷ ಹಿನ್ನೆಲೆಯಲ್ಲಿ ವಾಣಿಜ್ಯ ಬಳಕೆಯ ಸಿಲಿಂಡರ್ ಅಭಾವ ಎದುರಾದ ಹಿನ್ನೆಲೆಯಲ್ಲಿ ಪ್ರತಿ ನಿತ್ಯ ೧೦ ಸಾವಿರ ಸಿಲಿಂಡರ್ ಪೂರೈಕೆಗೆ ಸರ್ಕಾರ ಅಗತ್ಯ ಕ್ರಮ ಕೈಗೊಂಡಿದ್ದು ಹೀಗಾಗಿ ವಾಣಿಜ್ಯ ಬಳಕೆದಾರರು ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್ ಮುನಿಯಪ್ಪ ಇಂದಿಲ್ಲಿ ಹೇಳಿದ್ದಾರೆ.
ಕಳೆದ ವಾರ ಒಂದು ಸಾವಿರ ಸಿಲಿಂಡರ್ ಹೊಟೇಲ್ ಗೆ ನೀಡಲಾಗುತ್ತಿದೆ. ಸದ್ಯ ಹೊಟೇಲ್, ಡಾಬಾ, ಹಾಸ್ಟೆಲ್, ಇಂದಿರಾ ಕ್ಯಾಂಟೀನ್, ಆಸ್ಪತ್ರೆ ಗಳಿಗೆ ಪೂರೈಕೆ ಮಾಡಲು ಪ್ರತಿ ನಿತ್ಯ ೧೦,೦೦೦ ಕಮರ್ಷಿಯಲ್ ಸಿಲಿಂಡರ್ ಪೂರೈಕೆ ಮಾಡಲಾಗುವುದು ಹೀಗಾಗಿ ಗೇಲ್ ಕಂಪನಿಯೊಂದಿಗೆ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗಿದೆ ಎಂದಿದ್ದಾರೆ.
ಭಾರತೀಯ ತೈಲ ನಿಗಮ, ಹಿಂದೂಸ್ತಾನ ಪೆಟ್ರೋಲಿಯಂ, ಗೇಲ್, ಹಾಗೂ ಭಾರತ್ ಪೆಟ್ರೋಲಿಯಂ ಅಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ಮಾಹಿತಿ ನೀಡಿದ ಅವರು ವಾಣಿಜ್ಯ ಬಳಕೆಯ ಸಿಲಿಂಡರ್ ಬಳಸುವ ಮಂದಿ ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ.
ಭಾರತೀಯ ಅನಿಲ ಪೂರೈಕೆ ಪ್ರಾಧಿಕಾರ – ಗೇಲ್ ಕಂಪನಿಯಲ್ಲಿ ಒಂದು ವಾರದೊಳಗೆ ವಾಣಿಜ್ಯ ಸಿಲಿಂಡರ್ ಬಳಕೆದಾರರು ನೋಂದಣಿ ಮಾಡಿಕೊಳ್ಳಬೇಕು ಎಲ್ಲರೂ ಸಹಕಾರ ನೀಡಿದರೆ ಅಡುಗೆ ಅನಿಲ ಸಮಸ್ಯೆ ಬಗೆಹರಿಯಲಿದೆ ಎಂದು ಮಾಹಿತಿ ನೀಡಿದ್ದಾರೆ.
ಗೇಲ್ ಕಂಪನಿ ಜತೆ ನೋಂದಣಿ ಕಡ್ಡಾಯ
ವಾಣಿಜ್ಯ ಸಿಲಿಂಡರ್ ಬಳಕೆದಾರರು ನೊಂದಣಿ ಮಾಡಿಕೊಳ್ಳದಿದ್ದರೆ ವಾಣಿಜ್ಯ ಬಳಕೆಯ ಸಿಲಿಂಡರ್ ಸಿಗುವುದಿಲ್ಲ. ಈ ಹಿನ್ನೆಲೆಯಲ್ಲಿ ಯಾರು ಎಷ್ಟು ಬಳಕೆ ಮಾಡ್ತಿದ್ದಾರೆ ಎನ್ನುವ ಮಾಹಿತಿಗಾಗಿ ಮುಂದಿನ ಶನಿವಾರದೊಳಗೆ ನೊಂದಣಿ ಕಡ್ಡಾಯವಾಗಿದೆ ಎಂದಿದ್ದಾರೆ.
ಹೊಟೇಲ್ ಮಾಲೀಕರು ಪ್ರತಿ ಯೂನಿಟ್ ಗೆ ೨ ರೂಪಾಯಿ ವಿದ್ಯುತ್ ಬಿಲ್ ಕಡಿಮೆ ಮಾಡುವ ವಿಚಾರ ತಮ್ಮ ಗಮನಕ್ಕೆಬಂದಿಲ್ಲ ಈ ವಿಷಯದ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು ಎಂದು ಮಾಹಿತಿ ನೀಡಿದರು
ಸಿಎಂ ಎರಡನೇ ಪತ್ರಕ್ಕೆ ಸ್ಪಂದನೆ;
ಕೇಂದ್ರ ಸರ್ಕಾರ ನೀಡುತ್ತಿದ್ದ ೯೦೦೦ ಸಿಲಿಂಡರ್ ಸಂಖ್ಯೆ ಏರಿಕೆ ಮಾಡಿದ್ದು ಪ್ರತಿನಿತ್ಯ ರಾಜ್ಯಕ್ಕೆ ೧೦,೦೦೦ ಸಿಲಿಂಡರ್ ನೀಡಲಿದೆ. ವಿನಾಕಾರಣ ಅನಿಲ ವಿತರಣೆ ಮಾಡುವವರ ಮೇಲೆ ಯಾರು ಒತ್ತಡ ಏರಬಾರದು. ಸದ್ಯ ಎದುರಾಗಿರುವ ಸಮಸ್ಯೆಗೆ ಎಲ್ಲರ ಸಹಕಾರ ಅಗತ್ಯ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಿಲಿಂಡರ್ ಅ ಭಾವದ ಕುರಿತು ಕೇಂದ್ರಕ್ಕೆ ಎರಡನೇ ಪತ್ರ ಬರೆದ ಬಳಿಕ ಇದೀಗ ಕೇಂದ್ರ ಸರ್ಕಾರ ಸ್ಪಂದನೆ ನೀಡಿದ್ದು, ಇದುವರೆಗೂ ೯,೦೦೦ ಸಿಲಿಂಡರ್ ಪೂರೈಕೆ ಮಾಡುತ್ತಿದ್ದು ಇದೀಗ ಹೆಚ್ಚುವರಿ ಶೇ. ೨೦ ರಷ್ಟು ಸಿಲಿಂಡರ್ ಕೊಡಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ ಎಂದರು.
ನಿತ್ಯ ರಾಜ್ಯಕ್ಕೆ ೧೦,೦೦೦ ಕಮರ್ಷಿಯಲ್ ಸಿಲಿಂಡರ್ ಸಿಗಲಿದೆ. ಮುಂದಿನ ಸೋಮವಾರ ಮತ್ತೊಮ್ಮೆ ಸಭೆ ಸೇರಿ ಪರಾಮರ್ಶೆ ನಡೆಸಲಾಗುವುದು ಗೃಹ ಬಳಕೆ ಅನಿಲ ಸಿಲಿಂಡರ್ ಗೆ ೨೫ ದಿನ ಅವಕಾಶ ಕೊಟ್ಟಿದ್ದೇವೆ ಎಂದು ತಿಳಿಸಿದರು.
ಹೋಟೆಲ್ ಉದ್ಯಮಕ್ಕೆ ನಿರಾಸೆ
ಬೇಡಿಕೆ ಇಟ್ಟಷ್ಟು ಪೂರೈಕೆ ಆಗಿಲ್ಲ ಕಳೆದ ಬಾರಿ ೭ ಸಾವಿರ ವಾಣಿಜ್ಯ ಸಿಲಿಂಡರ್ ಗೆ ಅನುಮೋದನೆ ನೀಡಲಾಗಿತ್ತು. ಈ ಬಾರಿ ೧೬ ಸಾವಿರದ ೧೦೫ ಸಿಲಿಂಡರ್ ಪೂರೈಕೆ ಮಾಡಲಾಗಿದ್ದು ಈ ಪೈಕಿ ಶಿಕ್ಷಣ ಸಂಸ್ಥೆಗಳಿಗೆ / ಆಸ್ಪತ್ರೆಗೆ ೪೨೦೦ ಸಿಲಿಂಡರ್ ನೀಡಲಾಗಿದೆ
ವಿಮಾನ ನಿಲ್ದಾಣ ,ರೈಲ್ವೆ ಕ್ಯಾಂಟಿನ್ ಸರ್ಕಾರಿ ಸಂಸ್ಥೆಗಳಿಗೆ ೧೨೦೦, ಹೋಟೆಲ್, ಡಾಬಾ ರೆಸ್ಟೋರೆಂಟ್, ಇಂಡಸ್ಟ್ರಿಯಲ್ ಕ್ಯಾಂಟಿನ್ ,ಕೆಎಂಫ್, ಇಂದಿರಾ ಕ್ಯಾಂಟೀನ್ , ಪಿಜಿ , ಕಾರ್ಪೊರೇಟ್ ಕ್ಯಾಂಟಿನ್ , ಸ್ಪೋರ್ಟ್ ಹಾಸ್ಟೆಲ್ ಸೇರಿದಂತೆ ಇತರೆ ೧೦ ಸಾವಿರ ಸಿಲಿಂಡರ್ ನೀಡಲಾಗಿದೆ.































