
ಬೆಂಗಳೂರು,ಮಾ.೧೫-ವಾಣಿಜ್ಯ ಎಲ್ಪಿಜಿ ಸಿಲಿಂಡರ್ಗಳ ಕೊರತೆಯಿಂದ ನಗರದ ಹೋಟೆಲ್ ಹಾಗೂ ರೆಸ್ಟೋರೆಂಟ್ ಉದ್ಯಮ ಕುಂಠಿತವಾಗಿದ್ದು, ಅದರ ನೇರ ಪರಿಣಾಮವಾಗಿ ಮೀನಿನ ಮಾರುಕಟ್ಟೆಗಳಲ್ಲಿ ವ್ಯಾಪಾರ ಕುಸಿತ ಕಂಡುಬಂದಿದೆ. ದಿನನಿತ್ಯ ಹೋಟೆಲ್ಗಳಿಗೆ ಸರಬರಾಜಾಗುತ್ತಿದ್ದ ಮೀನುಗಳಿಗೆ ಈಗ ಬೇಡಿಕೆ ಕಡಿಮೆಯಾಗಿರುವುದರಿಂದ ವ್ಯಾಪಾರಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.
ನಗರದ ಪ್ರಮುಖ ಮಾರುಕಟ್ಟೆಯಾಗಿರುವ ಶಿವಾಜಿನಗರದ ರಸೆಲ್ ಮೀನು ಮಾರುಕಟ್ಟೆಯಲ್ಲಿಯೂ ಈ ಸಮಸ್ಯೆಯ ಹೊಡೆತ ಸ್ಪಷ್ಟವಾಗಿ ಗೋಚರಿಸುತ್ತಿದೆ. ಇಲ್ಲಿ ಇರುವ ಸುಮಾರು ೧೫೦ ಕ್ಕೂ ಹೆಚ್ಚು ಮೀನಿನ ವ್ಯಾಪಾರಿಗಳು ವ್ಯಾಪಾರ ಇಲ್ಲದೆ ಸಂಕಷ್ಟ ಎದುರಿಸುತ್ತಿದ್ದಾರೆ. ಹೋಟೆಲ್ ಹಾಗೂ ರೆಸ್ಟೋರೆಂಟ್ಗಳು ಸಾಮಾನ್ಯವಾಗಿ ಹೆಚ್ಚಿನ ಪ್ರಮಾಣದಲ್ಲಿ ಮೀನು ಖರೀದಿ ಮಾಡುತ್ತಿದ್ದರೆ, ಈಗ ಖರೀದಿ ಪ್ರಮಾಣವನ್ನು ಬಹಳ ಮಟ್ಟಿಗೆ ಕಡಿಮೆ ಮಾಡಿರುವುದಾಗಿ ವ್ಯಾಪಾರಿಗಳು ತಿಳಿಸಿದ್ದಾರೆ.
ಹೋಟೆಲ್ಗಳು ಮೊದಲು ೧೦ ಕೆಜಿ, ೨೦ ಕೆಜಿ, ೩೦ ಕೆಜಿ ಮೀನುಗಳನ್ನು ಖರೀದಿ ಮಾಡುತ್ತಿದ್ದರೆ, ಈಗ ೩ ರಿಂದ ೪ ಕೆಜಿ ಮಾತ್ರ ತೆಗೆದುಕೊಳ್ಳುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರ ಪರಿಣಾಮವಾಗಿ ಮಾರುಕಟ್ಟೆಯಲ್ಲಿ ಮೀನು ಮಾರಾಟ ಕುಂಠಿತಗೊಂಡಿದ್ದು, ವ್ಯಾಪಾರಿಗಳು ತಂದಿರುವ ಸ್ಟಾಕ್ ಬಹುತೇಕ ಉಳಿದು ಹೋಗುತ್ತಿದೆ.
ಇನ್ನೊಂದೆಡೆ ಬೇಸಿಗೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಮೀನಿನ ಬೆಲೆಗಳೂ ಏರಿಕೆಯಾಗಿವೆ. ಮಾರುಕಟ್ಟೆಯಲ್ಲಿ ಎಲ್ಲಾ ರೀತಿಯ ಮೀನುಗಳ ಬೆಲೆಯಲ್ಲಿ ಶೇಕಡಾ ೪೦ ರಷ್ಟು ಹೆಚ್ಚಳ ಕಂಡುಬಂದಿದ್ದು, ಇದರಿಂದ ಗ್ರಾಹಕರ ಮೇಲೂ ಹೆಚ್ಚುವರಿ ಹೊರೆ ಬಿದ್ದಿದೆ.
ಸಾಮಾನ್ಯವಾಗಿ ರಸೆಲ್ ಮಾರುಕಟ್ಟೆಯಲ್ಲಿ ದಿನನಿತ್ಯ ಸುಮಾರು ೨೦ ಟನ್ ಮೀನು ವ್ಯಾಪಾರ ನಡೆಯುತ್ತಿತ್ತು. ಆದರೆ ಈಗ ವ್ಯಾಪಾರ ಕುಸಿತಗೊಂಡಿರುವುದರಿಂದ ಮಾರುಕಟ್ಟೆಯಲ್ಲಿರುವ ಸುಮಾರು ೨೨೦ ಅಂಗಡಿಗಳು ಖಾಲಿ ಖಾಲಿ ಕಾಣಿಸುತ್ತಿವೆ. ವ್ಯಾಪಾರ ಇಲ್ಲದೆ ಬೇಸರ ವ್ಯಕ್ತಪಡಿಸಿದ ವ್ಯಾಪಾರಿಗಳು, ಖರೀದಿ ಮಾಡಿರುವ ಮೀನುಗಳು ಮಾರಾಟವಾಗದೆ ಉಳಿಯುತ್ತಿರುವುದರಿಂದ ನಷ್ಟದ ಭೀತಿ ಎದುರಿಸುತ್ತಿದ್ದೇವೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಿಲಿಂಡರ್ ಕೊರತೆ ಸಮಸ್ಯೆ ಶೀಘ್ರದಲ್ಲೇ ಬಗೆಹರಿಯದಿದ್ದರೆ, ಹೋಟೆಲ್ ಉದ್ಯಮದ ಜೊತೆಗೆ ಮೀನಿನ ವ್ಯಾಪಾರಕ್ಕೂ ಇನ್ನಷ್ಟು ಹೊಡೆತ ಬೀಳುವ ಸಾಧ್ಯತೆ ಇದೆ ಎಂದು ವ್ಯಾಪಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ



























