
ಕಲಬುರಗಿ,ಆ.19 : ನ್ಯಾಯಮೂರ್ತಿ ಶಿವರಾಜ ವಿ. ಪಾಟೀಲ ಪ್ರತಿಷ್ಠಾನ ಮತ್ತು ಸರ್ವಜ್ಞ ಹಾಗೂ ಜಸ್ಟಿಸ್ ಶಿವರಾಜ ಪಾಟೀಲ ಕಾಲೇಜು ಸಂಯುಕ್ತಾಶ್ರಯದಲ್ಲಿ ಯುವ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕಾಗಿ ನ್ಯಾಯಮೂರ್ತಿ ನಾಡೋಜ ಡಾ. ಶಿವರಾಜ ವಿ. ಪಾಟೀಲ ವಿರಚಿತ ಮುಂಜಾವಿಗೊಂದು ನುಡಿಕಿರಣಗಳ ದರ್ಶನ ಶ್ರಾವಣ ಮಾಸದ 11 ದಿನಗಳ ವಿಶೇಷ ಉಪನ್ಯಾಸ ಕಾರ್ಯಕ್ರಮದ ಅಂಗವಾಗಿ ಪ್ರವಚನಯೋಗಿ ಪೂಜ್ಯ ಮಹಾಂತ ಸ್ವಾಮಿಗಳು ಮುದಗಲ್ ಅವರು ಪ್ರವಚನ ನೀಡಿದರು
ಆಧ್ಯಾತ್ಮಿಕತೆಯ ಲೇಪವಿರುವ ಮಾನವನ ಎಲ್ಲಾ ಚಟುವಟಿಕೆಗಳು ದೇವರಿಗೆ ಪ್ರಿಯವಾಗುತ್ತವೆ ಆಧ್ಯಾತ್ಮ ಮಾನವ ಚಟುವಟಿಕೆಯ ಬಹುದೊಡ್ಡ ಸಂಪತ್ತು. ಆಧ್ಯಾತ್ಮಿಕತೆಯ ಸ್ಪರ್ಶ ಇದ್ದವರಲ್ಲಿ ಜೀವನದ ಸರಿ ತಪ್ಪುಗಳ ವಿವೇಚನೆ ಇರುತ್ತದೆ. ಆಧ್ಯಾತ್ಮ ಅರಿವಿನ ಸಂಸ್ಕøತಿಯಾಗಿದೆ. ಸೃಷ್ಠಿಗೆ ವಿರುದ್ಧವಾದ ಕೆಲಸದಲ್ಲಿ ತೊಡಗಬಾರದು ಎಂಬ ಅರಿವೆ ಆಧ್ಯಾತ್ಮ. ಬದುಕಿಗೆ ಬೇಕಾಗಿರುವ ಜೀವನ ಮೌಲ್ಯಗಳನ್ನು ತಿಳಿಸಿಕೊಡುವುದೇ ಆಧ್ಯಾತ್ಮ. ಬಹಿರಂಗದ ಶೃಂಗಾರಕ್ಕಿಂತ ಅಂತರಂಗದ ಜ್ಞಾನ ಸಂಪತ್ತು ಶ್ರೇಷ್ಠ ಎಂದು ತಿಳಿಸುವುದೇ ಆಧ್ಯಾತ್ಮ. ಈ ಜಗತ್ತಿನಲ್ಲಿ ನಾನು ಮಾಡಬೇಕಾದ ಕಾರ್ಯವೇನು ಎಂಬ ವಿವೇಚನೆ ನಮ್ಮಲ್ಲಿ ಹುಟ್ಟಬೇಕು. ಮನುಷ್ಯ ಮತ್ತು ಪ್ರಾಣಿಗಳಿಗಿರುವ ವ್ಯತ್ಯಾಸವನ್ನು ಅರಿವುದೇ ಆಧ್ಯಾತ್ಮ. ಭೌತಿಕ ಆಸ್ತಿಮಾಡಿ ಮನೆಕಟ್ಟುವುದು ಸಾಧನೆಯಲ್ಲ. ಪ್ರಾಣಿಪಕ್ಷಿಗಳು ಕೂಡ ತಮ್ಮ ರಕ್ಷಣೆಗಾಗಿ ಗೂಡುಕಟ್ಟಿಕೊಳ್ಳುತ್ತವೆ. ಆದರೆ ಮನುಷ್ಯ ಸಾರ್ಥಕವಾದ ಬದುಕಿಗಾಗಿ ಮಾನವೀಯ ಮೌಲ್ಯಗಳನ್ನು ಒಳಗೊಂಡ ತತ್ವಗಳ ಆಧಾರದ ಮೇಲೆ ಎಂತಹ ಬದುಕು ಕಟ್ಟಿಕೊಳ್ಳಬೇಕೆಂದು ಹೇಳುವ ಮೂಲಭೂತ ವಿಚಾರಗಳೇ ಆಧ್ಯಾತ್ಮ. ದೇವರಿಗೆ ಪ್ರೀಯವಾಗುವ ಉತ್ತಮ ವಿಚಾರಗಳಿಂದ ಕೂಡಿದ ತತ್ವವನ್ನು ಬದುಕಿನಲ್ಲಿ ಅರ್ಥಪೂರ್ಣವಾಗಿ, ಆದರ್ಶವಾಗಿ ಬಳಸಿಕೊಂಡು ನಿನ್ನೊಳಗಿನ ಆತ್ಮದ ಅರಿವನ್ನು ಮಾಡಿಕೊಳ್ಳುವುದೇ ಆಧ್ಯಾತ್ಮ. ಇದು ಬದುಕಿಗೆ ಬೆಳಕನ್ನು ನೀಡುತ್ತದೆ. ಆತ್ಮಕ್ಕೆ ಆತ್ಮಾನಂದವನ್ನು ಉಂಟು ಮಾಡುತ್ತದೆ. ಅರ್ಥಪೂರ್ಣವಾದ ಬದುಕು ಕಟ್ಟಿಕೊಡುತ್ತದೆ. ನಮ್ಮೊಳಗಿರುವ ಆತ್ಮವೇ ಪರಮಾತ್ಮ, ನಮ್ಮೊಳಗಿರುವ ಅರಿವೇ ನಮಗೆ ಗುರುವಾಗುತ್ತದೆ. ಅದಕ್ಕಾಗಿ ಧ್ಯಾನ, ಪ್ರಾರ್ಥನೆ, ಪೂಜೆ, ಸತ್ಸಂಗ ಅವಶ್ಯಕವಾಗಿದೆ. ಆಧ್ಯಾತ್ಮದ ಪರಿಭಾಷೆಯಲ್ಲಿ ಜ್ಞಾನವೆಂದರೆ ಅರಿವಿನ ಬಂಗಾರ. ಮನುಷ್ಯನಲ್ಲಿನ ಕಲೆ, ಸಾಹಿತ್ಯ, ಸಂಗೀತ, ವಿಜ್ಞಾನ, ತಂತ್ರಜ್ಞಾನದ ಅರಿವಿನ ಅಧ್ಬುತವಾದ ಬೆಳಕು, ಬುದ್ದಿ, ಜ್ಞಾನ, ವಿಕಾಸವಾಗುವುದೇ ಆಧ್ಯಾತ್ಮ. ಮಾನವ ತನ್ನ ಅರಿವನ್ನು ವಿಕಸನ ಮಾಡಿಕೊಳ್ಳುವುದೇ ನಿಜವಾದ ಬದುಕಿನ ಸಾಧನೆ ಎಂದು ನುಡಿದರು.
ನ್ಯಾಯಮೂರ್ತಿ ನಾಡೋಜ ಡಾ. ಶಿವರಾಜ ವಿ. ಪಾಟೀಲ ವಿರಚಿತ ಮುಂಜಾವಿಗೊಂದು ನುಡಿಕಿರಣ-365 ಪುಸ್ತಕದಲ್ಲಿ ಸುಲಲಿತವಾದ ಕನ್ನಡದ ನುಡಿಗಳಲ್ಲಿ ತಾವು ಬದುಕಿನಲ್ಲಿ ಅನುಭವಿಸಿದ ಅಪರೂಪದ ಅರ್ಥಪೂರ್ಣವಾದ ಬದುಕನ್ನು ಬೆಳಗುವ ನುಡಿಗಳನ್ನು ನಮಗೆ ನೀಡಿದ್ದಾರೆಎಂದು ಪ್ರವಚನದಲ್ಲಿ ತಿಳಿಸಿದರು.