
ಸಂಜೆವಾಣಿ ವಾರ್ತೆ,
ವಿಜಯಪುರ, ಮಾ.೨೬:ಕೃಷಿ ಪ್ರಧಾನವಾದ ನಮ್ಮ ದೇಶದಲ್ಲಿ ಗ್ರಾಹಕರ ಪರಿಹಾರ ವೇದಿಕೆ ಕಾಯ್ದೆ ಕುರಿತು ರೈತರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಆನಂದ ಕೆ. ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಗ್ರಾಹಕರ ದೂರು ಪರಿಹಾರ ವೇದಿಕೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ, ಕಾನೂನು ಮಾಪನ ಶಾಸ್ತ್ರ ಇಲಾಖೆ, ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಪ್ರಾಧಿಕಾರ, ಕೆಎಫ್ ಸಿಎಸ್ಸಿ ನಿಗಮ ವಿಜಯಪುರ, ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರ ನ್ಯೂ ಸಂಸ್ಥೆಯ ಸಹಯೋಗದಲ್ಲಿ ಬುಧವಾರ ಜಿಲ್ಲಾ ಪಂಚಾಯತಿಯ ಸಭಾಂಗಣದಲ್ಲಿ ನಡೆದ ವಿಶ್ವ ಗ್ರಾಹಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ದಿನನಿತ್ಯದ ಕಾರ್ಯ ಚಟುವಟಿಕೆಗಳಿಗೆ ಅಗತ್ಯ ವಸ್ತುಗಳನ್ನು ಖರೀದಿಸುತ್ತಿದ್ದು, ಖರೀದಿಸಿದ ವಸ್ತುವಿಗೆ ನಾವು ಗ್ರಾಹಕರಾಗುತ್ತೇವೆ. ನಮಗೆ ಖರೀದಿಸಿದ ವಸ್ತುವಿನಲ್ಲಿ ಮೋಸವಾಗಿದೆ ಎಂದು ತಿಳಿದಾಗ ನಾವು ಪರಿಹಾರಕ್ಕಾಗಿ ಈ ವೇದಿಕೆಗೆ ದೂರು ಸಲ್ಲಿಸಿ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದರು.
ರೈತರು ಸೇರಿದಂತೆ ಈ ಕಾಯ್ದೆ ಎಲ್ಲರಿಗೂ ಅನುಕೂಲವಾಗಿದೆ. ಈ ಕಾಯ್ದೆಯಡಿ ಪರಿಹಾರ ಒದಗಿಸುವಲ್ಲಿ ಸಹಕಾರಿಯಾಗಲಿದೆ ಎಂದು ಹೇಳಿದರು.
ಕಮಲ ಕಿಶೋರ ಜೋಶಿ ಮಾತನಾಡಿ, ಮಾರುಕಟ್ಟೆಯಲ್ಲಿ ನಾವು ಖರೀದಿಸುವ ಪ್ರತಿಯೊಂದು ವಸ್ತುವಿನ ನಿಖರ ಮಾಹಿತಿ ಪಡೆದುಕೊಳ್ಳಬೇಕು. ಪ್ರತಿ ವಸ್ತುವಿನ ಮೇಲೆ ಕನಿಷ್ಟ ದರ, ಮುಕ್ತಾಯದ ದಿನಾಂಕ ಹಾಗೂ ಉತ್ಪಾದನೆ ಕುರಿತ ಮಾಹಿತಿ ನಮೂದಿಸಲಾಗಿರುತ್ತದೆ. ಒಂದು ವೇಳೆ ಇದು ಯಾವುದು ಇಲ್ಲದಿದ್ದಲ್ಲಿ ಗ್ರಾಹಕರಾದ ನಾವು ಅಂಗಡಿ ಮಾಲಿಕರನ್ನು ಪ್ರಶ್ನಿಸಿ ಅವರಿಂದ ಸಮರ್ಪಕ ಮಾಹಿತಿ ಪಡೆದುಕೊಳ್ಳಬೇಕು ಎಂದರು.
ಮಾಹಿತಿ ನೀಡಲು ನಿರಾಕರಿಸಿದ್ದಲ್ಲಿ ದೂರು ದಾಖಲಿಸಿ ಪರಿಹಾರ ಕಂಡುಕೊಳ್ಳಲು ಈ ವೇದಿಕೆ ಬಹಳ ಉಪಯುಕ್ತವಾಗಿದೆ. ಯಾವುದೇ ನ್ಯಾಯವಾದಿಗಳ ಸಹಾಯ ಪಡೆಯದೆ ಮಧ್ಯವರ್ತಿಗಳಿಲ್ಲದೆ ನೇರವಾಗಿ ಈ ವೇದಿಕೆಗೆ ಬಂದು ದೂರು ನೀಡಬಹುದಾಗಿದೆ ಎಂದರು.
ಹಿರಿಯ ನ್ಯಾಯವಾದಿ ಎಂ.ಜಿ ಮಠಪತಿ ಉಪನ್ಯಾಸ ನೀಡಿ, ಯಾವುದೇ ವಸ್ತು ಖರೀದಿಸಿದಲ್ಲಿ ಅದರ ಗುಣಮಟ್ಟ, ಸುರಕ್ಷತೆ ನಾವು ಮೊದಲು ಅರಿಯಬೇಕು. ಅಂದಾಗ ನಾವು ಗ್ರಾಹಕರಾಗುತ್ತೇವೆ. ಅದು ನಮ್ಮ ಹಕ್ಕು ಕೂಡ ಆಗಿದೆ. ಖರೀದಿಸಿದ ವಸ್ತುವಿನಲ್ಲಿ ಮೋಸ ಹಾಗೂ ತೊಂದರೆಗಳಾದಲ್ಲಿ ಪರಿಹಾರಕ್ಕಾಗಿ ಈ ಗ್ರಾಹಕರ ವೇದಿಕೆಯ ಮೂಲಕ ಪರಿಹಾರ ಪಡೆಯಲು ಅವಕಾಶವಿದೆ. ಹಾಗಾಗಿ ಗ್ರಾಹಕರು ಈ ವೇದಿಕೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಗಲಗಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಪ್ರಕಾಶ ವಡ್ಡರ, ಕಾನೂನು ಮಾಪನ ಶಾಸ್ತ್ರ ಸಹಾಯಕ ನಿಯಂತ್ರಕ ಡಿ .ಆರ್ . ಚೌಗಲಾ, ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಉಪನಿರ್ದೇಶಕ ವಿನಯ ಕುಮಾರ್ ಪಾಟೀಲ, ಕೆ. ಎಫ್ .ಸಿ ಎಸ್ ಸಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಡಿ .ಆರ್ .ನಾಯ್ಕೋಡಿ, ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರ ಹಾಗೂ ನ್ಯೂ ಸಂಸ್ಥೆ ಅಧ್ಯಕ್ಷ ಡಾ. ಎಸ್.ಎಂ. ಕರೇಕಲ್ ಸೇರಿದಂತೆ ಅಧಿಕಾರಿ, ಸಿಬ್ಬಂದಿಗಳು ಉಪಸ್ಥಿತರರಿದ್ದರು.
ಆಹಾರ ಸುರಕ್ಷತಾ ಅಧಿಕಾರಿ ಆರ್.ಎಸ್. ಬಿರಾದಾರ ವಂದಿಸಿದರು.
ಎಚ್. ಎ. ಮಮದಾಪುರ ಕಾರ್ಯಕ್ರಮವನ್ನು ನಿರೂಪಣೆ ಮಾಡಿದರು.




























