
ಗುರುಮಠಕಲ್:ಮಾ.೨೬: ತಮ್ಮ ಮತಕ್ಷೇತ್ರದ ರೈತರ ಜೀವನಾಡಿಯಾಗಿರುವ ಹತ್ತಿಕುಣಿ ಮತ್ತು ಸೌದಾಗರ ಜಲಾಶಯಗಳ ನಾಲೆಗಳ ಆಧುನಿಕರಣಕ್ಕೆ ಸರ್ಕಾರ ಕೂಡಲೇ ಸೂಕ್ತ ಕ್ರಮ ಜರುಗಿಸಬೇಕೆಂದು ಶಾಸಕ ಶರಣಗೌಡ ಕಂದಕೂರ ಒತ್ತಾಯಿಸಿದರು.
ಅಧಿವೇಶನದಲ್ಲಿ ಮಂಗಳವಾರ ಮಾತನಾಡಿದ ಅವರು,
ಈ ಎರಡು ಜಲಾಶಯಗಳು ಹಲವು ದಶಕಗಳ ಹಿಂದೆ ನಿರ್ಮಾಣಗೊಂಡಿದ್ದು, ರೈತರಿಗೆ ಪ್ರಮುಖ ನೀರಾವರಿ ಮೂಲಗಳಾಗಿವೆ. ಹತ್ತಿಕುಣಿ ಜಲಾಶಯ ಸುಮಾರು ೦.೩೫೨ ಟಿಎಂಸಿ ನೀರು ಸಂಗ್ರಹಿಸುವ ಸಾಮರ್ಥ್ಯ ಹೊಂದಿದೆ. ಆದರೆ ೨೦೨೫-೨೬ನೇ ಸಾಲಿನಲ್ಲಿ ಕೇವಲ ನಿರ್ವಹಣೆಗಾಗಿ ೧೨.೮೭ ಲಕ್ಷ ರೂ. ಮಾತ್ರ ಅನುದಾನ ನೀಡಲಾಗಿದೆ ಎಂದು ತಿಳಿಸಿದರು.
ಅದೇ ರೀತಿ ಸೌದಾಗರ್ ಡ್ಯಾಂ ಸುಮಾರು ೦.೨೮೮ ಟಿಎಂಸಿ ಸಾಮರ್ಥ್ಯ ಹೊಂದಿದ್ದು, ಅದರ ನಿರ್ವಹಣೆಗೆ ಕೇವಲ ೮ .೫೦ಲಕ್ಷ ರೂ.ಮಾತ್ರ ನೀಡಲಾಗಿದೆ.ಈ ಎರಡೂ ಯೋಜನೆಗಳ ಮೂಲಕ ಸುಮಾರು ೫,೩೦೦ ಎಕರೆ ಹಾಗೂ ೩,೫೦೦ ಎಕರೆ ಸೇರಿದಂತೆ ಒಟ್ಟು ಸುಮಾರು ೯,೦೦೦ ಎಕರೆ ಕೃಷಿಭೂಮಿಗೆ ನೀರು ಒದಗಿಸಲಾಗುತ್ತದೆ. ಜೊತೆಗೆ ೧೨ ಗ್ರಾಮಗಳ ರೈತರಿಗೆ ಈ ಯೋಜನೆಗಳಿಂದ ಪ್ರಯೋಜನವಾಗುತ್ತಿದೆ ಎಂದು ವಿವರಿಸಿದರು.
ಹತ್ತಿಕುಣಿ ಜಲಾಶಯದ ನಾಲೆಗಳ ಉದ್ದ ಸುಮಾರು ೧೪ ಕಿಲೋಮೀಟರ್ ಇದ್ದು, ಸೌದಾಗರ್ ಡ್ಯಾಂ ನಾಲೆಗಳ ಉದ್ದ ಸುಮಾರು ೧೧ ಕಿಲೋಮೀಟರ್ ಇದೆ. ಇಂತಹ ಪ್ರಮುಖ ಯೋಜನೆಗಳಿಗೆ ಕೇವಲ ೨೦ ಲಕ್ಷ ರೂ. ರಿಪೇರಿಗಾಗಿ ಅನುದಾನ ನೀಡಿರುವುದು ಸಾಕಾಗುವುದಿಲ್ಲ ಎಂದು ಅವರು ಸರ್ಕಾರದ ಗಮನ ಸೆಳೆದರು.ಹತ್ತಿಕುಣಿ ಜಲಾಶಯದ ಆಧುನೀಕರಣಕ್ಕಾಗಿ ಕೇಂದ್ರ ಸರ್ಕಾರದ ಎಂ-ಕ್ಯಾಡ್ ಯೋಜನೆಯಡಿ ೭೨ ಕೋಟಿ ರೂ. ಅನುದಾನ ಮಂಜೂರಾಗಿದ್ದು, ಇದಕ್ಕೆ ರಾಜ್ಯ ಸರ್ಕಾರ ಕ್ಯಾಬಿನೆಟ್ ಅನುಮೋದನೆ ನೀಡಬೇಕು ಎಂದು ಅವರು ಮನವಿ ಮಾಡಿದರು. ಈ ಕುರಿತು ಉಪಮುಖ್ಯಮಂತ್ರಿ ಮತ್ತು ಸಂಬAಧಪಟ್ಟ ಸಚಿವರೊಂದಿಗೆ ಹಲವು ಬಾರಿ ಚರ್ಚೆ ನಡೆಸಿರುವುದಾಗಿ ಹೇಳಿದರು.
ಇದೇ ವೇಳೆ ಸೌದಾಗರ್ ಡ್ಯಾಂ ಆಧುನೀಕರಣಕ್ಕೂ ಅಂದಾಜು ವೆಚ್ಚದ ವರದಿ ಸಿದ್ಧಪಡಿಸಲಾಗಿದ್ದು, ಇದಕ್ಕೂ ಸರ್ಕಾರ ಅನುಮೋದನೆ ನೀಡಬೇಕು ಎಂದು ಶಾಸಕ ಶರಣಗೌಡ ಕಂದಕೂರು ಮನವಿ ಮಾಡಿದರು. ಈ ಎರಡೂ ಯೋಜನೆಗಳ ಆಧುನೀಕರಣದಿಂದ ಸುಮಾರು ೯,೦೦೦ ಎಕರೆ ಪ್ರದೇಶ ಮತ್ತು ೧೨ ಗ್ರಾಮಗಳಿಗೆ ದೊಡ್ಡ ಪ್ರಯೋಜನವಾಗುತ್ತದೆ ಎಂದು ಅವರು ಹೇಳಿದರು.
ಸಚಿವ ಪ್ರಿಯಾಂಕ್ ಖರ್ಗೆ ಭರವಸೆ
ಎರಡು ಜಲಾಶಯಗಳ ಅಭಿವೃದ್ಧಿಗೆ ಸರ್ಕಾರ
ಯಾದಗಿರಿ ಶಾಸಕರ ಪ್ರಶ್ನೆಗೆ ಉತ್ತರಿಸಿದ ಸಚಿವ ಪ್ರಿಯಾಂಕ್ ಖರ್ಗೆ, ಹತ್ತಿಕುಣಿ ಮತ್ತು ಸೌದಾಗರ್ ಜಲಾಶಯಗಳು ಹಿಂದೆ ಮಲ್ಲಿಕಾರ್ಜುನ ಖರ್ಗೆ ಸಾಹೇಬರು ಜನರ ಹಿತದೃಷ್ಟಿಯಿಂದ ಮಾಡಿಸಿದ ಯೋಜನೆಗಳಾಗಿದ್ದು, ಗುರುಮಠಕಲ್ ಭಾಗದ ಅಭಿವೃದ್ಧಿಯನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷಿಸುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.
ಹತ್ತಿಕುಣಿ ಡ್ಯಾಂ ಆಧುನೀಕರಣಕ್ಕೆ ಸಂಬAಧಿಸಿದAತೆ ೭೨ ಕೋಟಿ ರೂ. ಅನುದಾನಕ್ಕಾಗಿ ಡೀಟೈಲ್ಡ್ ಡಿಸೈನ್ ರಿಪೋರ್ಟ್ ಈಗಾಗಲೇ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದೆ. ರಾಜ್ಯ ಸರ್ಕಾರವೂ ಯೋಜನೆಗೆ ಬದ್ಧವಾಗಿದ್ದು, ಸೂಕ್ತ ಸಮಯದಲ್ಲಿ ಕ್ಯಾಬಿನೆಟ್ಗೆ ತಂದು ಅನುಮೋದನೆ ನೀಡಲಾಗುತ್ತದೆ ಎಂದು ಅವರು ಭರವಸೆ ನೀಡಿದರು.
ಇದೇ ವೇಳೆ ಸೌದಾಗರ್ ಡ್ಯಾಂ ಕುರಿತು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ, ವೆಚ್ಚದ ಅಂದಾಜು ಪಡೆದು ಉಪಮುಖ್ಯಮಂತ್ರಿಗಳಿಗೆ ವೈಯಕ್ತಿಕವಾಗಿ ವರದಿ ಸಲ್ಲಿಸುವುದಾಗಿ ಸಚಿವರು ಹೇಳಿದರು. ಜೊತೆಗೆ ಶಾಸಕ ಶರಣಗೌಡ ಕಂದಕೂರು ಅವರ ಸಲಹೆಗಳನ್ನೂ ಪರಿಗಣಿಸಲಾಗುತ್ತದೆ ಎಂದು ಸಚಿವರು ಹೇಳಿದರು.
ಸಚಿವರ ಒಂದು ಕಣ್ಣು ಗುರುಮಠಕಲ್ ಅಭಿವೃದ್ಧಿಯತ್ತ ಇರಲಿ
ಈ ಬಗ್ಗೆ ಸುಧೀರ್ಘವಾಗಿ ವಿವರಣೆ ನೀಡಿದ ಶಾಸಕ ಕಂದಕೂರ ಅವರು, ಸಚಿವ ಪ್ರಿಯಾಂಕ್ ಖರ್ಗೆ ಅವರು ಇದಕ್ಕಾಗಿ ಬಲವಾದ ಒಲವು ತೊರಬೇಕು. ಅವರು ಮನಸ್ಸು ಮಾಡಿದರೇ ಒಂದೇ ಸಲಕ್ಕೆ ಕೆಲಸ ಆಗುತ್ತದೆ. ಕಾರಣ, ಗುರುಮಠಕಲ್ ಕ್ಷೇತ್ರ ಅವರ ತಂದೆಯವರು ಪ್ರತಿನಿಧಿಸಿರುವ ಕ್ಷೇತ್ರವಾಗಿದೆ. ತಮಗೂ ಇಲ್ಲಿಯ ಬಗ್ಗೆ ಎಲ್ಲವೂ ಗೊತ್ತಿದೆ. ತಮ್ಮ ಒಂದು ಕಣ್ಣು ನಮ್ಮ ಕ್ಷೇತ್ರದ ಅಭಿವೃದ್ಧಿಯತ್ತ ಬೀಳಲಿ ಎಂದು ಮಾರ್ಮಿಕವಾಗಿ ಹೇಳಿದರು.
ಅಭಿವೃದ್ಧಿಗಾಗಿ ಐ ವಿಥ್ ಯೂ ಶರಣಗೌಡ
ಗುರುಮಿಟ್ಕಲ್ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರ ಸಂಪೂರ್ಣ ಬದ್ಧವಾಗಿದೆ. ಈ ಎರಡೂ ಯೋಜನೆಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸುವ ಕುರಿತು ನೂರಕ್ಕೆ ನೂರರಷ್ಟು ಭರವಸೆ ತಾವು ನೀಡುವುದಾಗಿ ಹೇಳಿದ ಸಚಿವ ಪ್ರಿಯಾಂಕ್ ಖರ್ಗೆ, ಅಭಿವೃದ್ಧಿಗಾಗಿ ಐ ವಿಥ್ ಯೂ ಶರಣಗೌಡ ಎಂದು ಸ್ಪಷ್ಟವಾಗಿ ಭರವಸೆ ನೀಡಿದರು.
ಸಚಿವರ ಭರವಸೆಯಿಂದ ನಿರೀಕ್ಷೆ ಹೆಚ್ಚಾಗಿದೆ
ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಶರಣಗೌಡ ಕಂದಕೂರು, ಗುರುಮಿಟ್ಕಲ್ ಕ್ಷೇತ್ರದ ಅಭಿವೃದ್ಧಿಗೆ ವಿಶೇಷ ಗಮನ ಹರಿಸಬೇಕೆಂದು ಮತ್ತೊಮ್ಮೆ ಮನವಿ ಮಾಡಿ, ಸಚಿವರಿಗೆ ಧನ್ಯವಾದಗಳನ್ನು ಸಲ್ಲಿಸಿದರು. ಸಚಿವರು ನೀಡಿದ ಭರವಸೆಯಿಂದ ಕ್ಷೇತ್ರದ ಜನರಲ್ಲಿ ನಿರೀಕ್ಷೆ ಹೆಚ್ಚಾಗಿದೆ ಎಂದು ಹೇಳಿದರು.


























