
ಆಳಂದ,ಮಾ.25-ಪಟ್ಟಣದಲ್ಲಿ ಅಡಿಗೆ ಅನಿಲ (ಎಲ್‍ಪಿಜಿ) ಗ್ಯಾಸ್ ಸಿಲಿಂಡರ್‍ಗಳ ಕೊರತೆ ತೀವ್ರವಾಗಿ ಹೆಚ್ಚಾಗುತ್ತಿದ್ದು, ಗ್ರಾಹಕರು ದಿನನಿತ್ಯ ದೀರ್ಘ ಸರಣಿಗೆ ನಿಂತು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಪಟ್ಟಣದ ಮುಖ್ಯ ಗ್ಯಾಸ್ ಪೂರೈಕೆ ಏಜೆನ್ಸಿಯಾದ ಸೋನಾ ಗ್ಯಾಸ್ ಏಜೆನ್ಸಿ ಗೊದಾಮಿನ ಮುಂದೆ ಬುಧವಾರ ಬೆಳಗ್ಗೆಯಿಂದಲೇ ನೂರಾರು ಗ್ರಾಹಕರು ಸರಣಿಯಲ್ಲಿ ನಿಂತಿದ್ದಾರೆ. ಸಕಾಲಕ್ಕೆ ಗ್ಯಾಸ್ ಸಿಲಿಂಡರ್‍ಗಳು ದೊರೆಯದ ಕಾರಣ ಜನಜಂಗುಳಿ ಹೆಚ್ಚಾಗಿ ಪೆÇಲೀಸ್ ಬಂದೋಬಸ್ತ್‍ನಲ್ಲಿ ಗ್ಯಾಸ್ ವಿತರಣೆ ಮಾಡುವಂತಹ ಅಪಾಯಕಾರಿ ಸ್ಥಿತಿ ಉಂಟಾಗಿದೆ.
ಗ್ರಾಹಕರ ಪ್ರಕಾರ, ಏಜೆನ್ಸಿ ಟೋಕನ್ ವ್ಯವಸ್ಥೆಯನ್ನು ಪಾಲಿಸುತ್ತಿಲ್ಲ ಎಂದು ಆರೋಪಿಸಲಾಗಿದೆ. “ಟೋಕನ್ ನೀಡಿ ಸರಣಿಯಂತೆ ಗ್ಯಾಸ್ ವಿತರಿಸುತ್ತಿಲ್ಲ. ಟೋಕನ್ ಇಲ್ಲದೆಯೂ ಬ್ಲಾಕ್‍ನಲ್ಲಿ ತಮಗೆ ಬೇಕಾದವರಿಗೆ, ಪರಿಚಿತರಿಗೆ ಗ್ಯಾಸ್ ನೀಡುತ್ತಿದ್ದಾರೆ” ಎಂದು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಲವು ಗ್ರಾಹಕರು “ನಾವು ಬೆಳಗ್ಗೆ 4 ಗಂಟೆಯಿಂದಲೇ ಪಾಳಿ ನಿಂತಿದ್ದೇವೆ. ಆದರೆ ಇನ್ನೂ ಗ್ಯಾಸ್ ಸಿಗುತ್ತಿಲ್ಲ. ಮನೆಯಲ್ಲಿ ಗ್ಯಾಸ್ ಮುಗಿದು ಹೋಗಿದೆ, ಊಟವೇ ಮಾಡಲು ಆಗುತ್ತಿಲ್ಲ” ಎಂದು ದೂರಿದ್ದಾರೆ.
ಏಜೆನ್ಸಿ ಮುಂದೆ ಜನಸಮೂಹ ಹೆಚ್ಚಾಗುತ್ತಿದ್ದಂತೆ ಸ್ಥಳೀಯ ಪೆÇಲೀಸರು ಬಂದೋಬಸ್ತ್ ನೀಡಿ ಜನರನ್ನು ನಿಯಂತ್ರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಗ್ರಾಹಕರ ಆಕ್ರೋಶ ತಣಿಸುವಲ್ಲಿ ಅಧಿಕಾರಿಗಳು ವಿಫಲರಾಗುತ್ತಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ. ಗ್ಯಾಸ್ ಕೊರತೆಯಿಂದಾಗಿ ಸಣ್ಣ ವ್ಯಾಪಾರಿಗಳು, ಮನೆಗೆಲಸದ ಮಹಿಳೆಯರು ಮತ್ತು ವೃದ್ಧರು ಹೆಚ್ಚು ತೊಂದರೆಗೆ ಒಳಗಾಗುತ್ತಿದ್ದಾರೆ.
ಈ ಕುರಿತು ಸೋನಾ ಗ್ಯಾಸ್ ಏಜೆನ್ಸಿ ಅಧಿಕಾರಿಗಳ ಪ್ರತಿಕ್ರಿಯೆ ಪಡೆಯಲು ಪ್ರಯತ್ನಿಸಿದರೂ ಅವರು ಯಾವುದೇ ಸ್ಪಷ್ಟ ಉತ್ತರ ನೀಡಲಿಲ್ಲ. ಜಿಲ್ಲಾ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ಈ ವಿಷಯದಲ್ಲಿ ತನಿಖೆ ನಡೆಸಿ ತ್ವರಿತ ಕ್ರಮ ಕೈಗೊಳ್ಳುವಂತೆ ಗ್ರಾಹಕರು ಒತ್ತಾಯಿಸಿದ್ದಾರೆ.
ಆಳಂದ ಪಟ್ಟಣದಲ್ಲಿ ಗ್ಯಾಸ್ ಕೊರತೆ ಇನ್ನೂ ಕೆಲವು ದಿನಗಳವರೆಗೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಗ್ರಾಹಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಹಿಡಿಯುವಂತೆ ಸ್ಥಳೀಯ ಜನಪ್ರತಿನಿಧಿಗಳು ಮತ್ತು ಜಿಲ್ಲಾ ಆಡಳಿತದಿಂದ ಮನವಿ ಮಾಡಲಾಗುತ್ತಿದೆ.
ಘಟನಾ ಸ್ಥಳಕ್ಕೆ ಪಿಎಸ್‍ಐ ಸಂಜೆಯ ರೆಡ್ಡಿ ಹಾಗೂ ಹೆಡ್ ಕಾನ್ಸ್ಟೇಬಲ್ ಮಹಬೂಬ್ ಶೇಕ್ ಸಿಬ್ಬಂದಿಗಳೊಂದಿಗೆ ಪರಿಸ್ಥಿತಿ ನಿಯಂತ್ರಿಸಲು ಹರಸಾಹಸ ಪಡುತ್ತಿದ್ದಾರೆ.




























