ಕಾಂಗ್ರೆಸ್- ಬಿಜೆಪಿ ಕಾರ್‍ಯಕರ್ತರ ಮಾರಾಮಾರಿ

ಮೋದಿ ವಿರುದ್ಧ ಅವಾಚ್ಯ ಪದ ಬಳಕೆ

ನವದೆಹಲಿ/ ಪಾಟ್ನಾ, ಆ.೨೯- ಬಿಹಾರದಲ್ಲಿ ವಿಧಾನಸಭೆ ಚುನಾವಣೆಗೆ ಮುನ್ನ ಲೋಕಸಭೆ ವಿರೋದ ಪಕ್ಷದ ನಾಯಕ ರಾಹುಲ್ ಗಾಂಧಿ ಹಮ್ಮಿಕೊಂಡಿರುವ ’ಮತದಾರ ಅಧಿಕಾರ ಯಾತ್ರೆ’ಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ತಾಯಿಯ ವಿರುದ್ಧ ಬಳಸಿದ ಅವಾಚ್ಯ ಶಬ್ದ ಬಳಕೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿದೆ.

ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ,ಗೃಹ ಸಚಿವ ಅಮಿತ್ ಶಾ,ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಸೇರಿದಂತೆ ಹಲವು ನಾಯಕರು ತೀವ್ರವಾಗಿ ಖಂಡಿಸಿದ್ದು ಕ್ಷಮೆಯಾಚನೆಗೆ ಆಗ್ರಹಿಸಿದ್ದಾರೆ.

ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಯಾತ್ರೆಯಲ್ಲಿ ಎರಡು ಪಕ್ಷಗಳ ಕಾರ್ಯಕರ್ತರು ತಮ್ಮ ತಮ್ಮ ಪಕ್ಷದ ಧ್ವಜಗಳಿಂದ ಪರಸ್ಪರ ದಾಳಿ ಮಾಡಿಕೊಳ್ಳುತ್ತಿರುವುದನ್ನು ವೀಡಿಯೊ ತೋರಿಸಿದ್ದು ಪರಸ್ಪರ ಘರ್ಷಣೆ ಆರೋಪ ಪ್ರತ್ಯಾರೋಪ ನಡೆದಿದ್ದು ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

ಬಿಜೆಪಿ ಪ್ರಕರಣ ದಾಖಲಿಸಿ ಕಾಂಗ್ರೆಸ್ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದೆ. ಪಾಟ್ನಾದಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ

ಅಮಿತ್ ಶಾ ಖಂಡನೆ

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಬಳಸಿದ ಭಾಷೆಯನ್ನು
ಕೇಂದ್ರ ಗೃಹ ಸಚಿವ ಅಮಿತ್ ಶಾ ಖಂಡಿಸಿ ಈ ಘಟನೆಯನ್ನು ದೇಶದ ಪ್ರಜಾಪ್ರಭುತ್ವದ ಮೇಲಿನ “ಕಳಂಕ” ಎಂದಿದ್ದಾರೆ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ನಾಯಕತ್ವದಲ್ಲಿ ಪಕ್ಷವ ಅತ್ಯಂತ ಕೆಳಮಟ್ಟಕ್ಕೆ ತಲುಪಿದೆ” ಎಂದು ಕಾಂಗ್ರೆಸ್ ಪಕ್ಷವನ್ನು ಟೀಕಿಸಿದ್ದಾರೆ.

ಕಳೆದ ೧೧ ವರ್ಷಗಳಿಂದ ಬಡ ತಾಯಿಯ ಮಗ ಪ್ರಧಾನಿ ಕುರ್ಚಿಯಲ್ಲಿ ಕುಳಿತಿದ್ದು, ಅವರ ನಾಯಕತ್ವದಲ್ಲಿ ದೇಶವನ್ನು ನಿರಂತರವಾಗಿ ಮುನ್ನಡೆಸುತ್ತಿರುವುದನ್ನು ಅವರು ಸಹಿಸಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ

ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಕೂಡ ವಿರೋಧ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದರು, ಪ್ರಧಾನಿ ಮೋದಿ ಮತ್ತು ಅವರ ತಾಯಿಯ ವಿರುದ್ಧದ ನಿಂದನೆಗಳು “ಅಸಭ್ಯತೆಯ ಎಲ್ಲಾ ಮಿತಿಗಳನ್ನು ಮೀರಿದೆ” ರಾಹುಲ್ ಗಾಂಧಿ ಮತ್ತು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.

ಮುಖ್ಯಮಂತ್ರಿ ನಿತೀಶ್ ಕುಮಾರ್ ಕೂಡ ಘಟನೆಯನ್ನು ತೀವ್ರವಾಗಿ ಖಂಡಿಸಿ ತರಾಟೆಗೆ ತೆಗೆದುಕೊಂಡಿದ್ದಾರೆಮ

ಬಿಜೆಪಿ ನಾಯಕ ನಿತಿನ್ ನಬಿನ್ ಪ್ರತಿಕ್ರಿಯೆ ನೀಡಿ “ತಾಯಿಯನ್ನು ಅವಮಾನಿಸಿದ್ದಕ್ಕಾಗಿ ಬಿಹಾರದ ಪ್ರತಿಯೊಬ್ಬ ಮಗ ಕಾಂಗ್ರೆಸ್‌ಗೆ ಸೂಕ್ತ ಉತ್ತರ ನೀಡುತ್ತಾನೆ. ಇದಕ್ಕಾಗಿ ಸೇಡು ತೀರಿಸಿಕೊಳ್ಳುತ್ತೇವೆ” ಎಂದು ಗುಡುಗಿದ್ದಾರೆ.

ಇದಕ್ಕೆ ಪ್ರತಿಕ್ರಿಯೆಯಾಗಿ, ಕಾಂಗ್ರೆಸ್ ಕಾರ್ಯಕರ್ತ ಡಾ. ಅಶುತೋಷ್ ಮಾತನಾಡಿ ಬಿಜೆಪಿಗೆ ಸೂಕ್ತ ಉತ್ತರ ನೀಡಲಾಗುವುದು. ಸರ್ಕಾರದ ಭಾಗಿಯಾಗುವಿಕೆಯಿಂದ ನಡೆಯುತ್ತಿದೆ. ನಿತೀಶ್ ಕುಮಾರ್ ತಪ್ಪು ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

’ಮತದಾರರ ಕಳ್ಳತನ’ ರ್‍ಯಾಲಿಯ ಸಂದರ್ಭದಲ್ಲಿ ಕಾಂಗ್ರೆಸ್ ಧ್ವಜ ಧರಿಸಿದ ವ್ಯಕ್ತಿಯೊಬ್ಬರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹಿಂದಿಯಲ್ಲಿ ಅಶ್ಲೀಲ ಪದ ಬಳಸುತ್ತಿರುವುದನ್ನು ತೋರಿಸುವ ವಿಡಿಯೋ ಕಾಣಿಸಿಕೊಂಡಿದೆ.