Home ಮುಖಪುಟ ಸುದ್ದಿ ೧೨ನೇ ದಿನವೂ ಮಧ್ಯಪ್ರಾಚ್ಯದಲ್ಲಿ ನಿಲ್ಲದ ಸಂಘರ್ಷ: ಇರಾನ್ ಮೇಲೆ ಭೀಕರ ದಾಳಿ

೧೨ನೇ ದಿನವೂ ಮಧ್ಯಪ್ರಾಚ್ಯದಲ್ಲಿ ನಿಲ್ಲದ ಸಂಘರ್ಷ: ಇರಾನ್ ಮೇಲೆ ಭೀಕರ ದಾಳಿ

ವಾಷಿಂಗ್ಟನ್/ ಟೆಹರಾನ್,ಮಾ.೧೧- ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧ ೧೨ ನೇ ದಿನಕ್ಕೆ ಕಾಲಿಟ್ಟಿದ್ದು, ಸದ್ಯಕ್ಕೆ ಯುದ್ದ ನಿಲ್ಲುವ ಯಾವುದೇ ಲಕ್ಷಣ ಕಾಣುತ್ತಿಲ್ಲ, ಬದಲಾಗಿ ದಿನದಿಂದ ದಿನಕ್ಕೆ ಮತ್ತಷ್ಟು ಸಮಸ್ಯೆ ಬಿಗಡಾಯಿಸುತ್ತಿದೆ. ಹರ್ಮುಜ್ ಜಲ ಸಂಧಿಯಲ್ಲಿ ತೈಲ ಸಾಗಾಣೆ ಹಡಗುಳಿಗೆ ನಿರ್ಬಂಧ ಹಾಕಿರುವ ಹಿನ್ನೆಲೆಯಲ್ಲಿ ಭಾರತ ಸೇರಿದಂತೆ ಜಗತ್ತಿನ ಹಲವು ದೇಶಗಳ ಮೇಲೆ ಕಚ್ಚಾ ತೈಲ ಮತ್ತು ಎಲ್‌ಪಿಜಿ ಬೆಲೆ ಗಗನಕ್ಕೇರಿದ್ದು ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.


ಅಮೆರಿಕ ಮತ್ತು ಇಸ್ರೇಲ್ ಸೇನಾ ಪಡೆಗಳು ಅಧಿಕಾರಿಗಳು ಇರಾನ್‌ನ ಗುರಿಗಳ ಮೇಲೆ ಮತ್ತೆ ಹೊಸದಾಗಿ ದಾಳಿ ನಡೆಸಿದ್ದು ಇದುವರೆಗಿನ ಅತ್ಯಂತ ತೀವ್ರವಾದ ದಾಳಿಯಾಗಿದ್ದು ಮುಂದಿನ ದಿನಗಳಲ್ಲಿ ಮತ್ತಷ್ಟು ದಾಳಿ ನಡೆಸುವುದಾಗಿ ಬೆದರಿಕೆ ಹಾಕಿವೆ.


ಅಮೆರಿಕದ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಮಾತನಾಡಿ ಯುದ್ಧ ಪ್ರಾರಂಭವಾದ ನಂತರದ ಅತಿದೊಡ್ಡ ದಾಳಿ ಮೇಲಿಂದ ಮೇಲೆ ನಡೆಯುತ್ತಿದೆ, ಇರಾನಿನ ಮಿಲಿಟರಿ ಮೂಲಸೌಕರ್ಯದ ವಿರುದ್ಧ ಹೆಚ್ಚಿನ ವಿಮಾನಗಳು, ಬಾಂಬರ್‌ಗಳು ಮತ್ತು ಗುಪ್ತಚರ-ನಿರ್ದೇಶಿತ ದಾಳಿ ನಡೆಯುತ್ತಿದೆ ಎಂದಿದ್ದಾರೆ.


ದಿನಗಟ್ಟಲೆ ಬಾಂಬ್ ದಾಳಿಯಿಂದ ಮಿಲಿಟರಿ ಸಾಮರ್ಥ್ಯ ಕುಂಠಿತಗೊಂಡಿರುವ ಇರಾನ್, ಹೋರಾಟ ನಿಲ್ಲಿಸುವ ತನಕ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ.


ಈ ನಡುವೆ ಇರಾನ್ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಘರ್ ಗಾಲಿಬಾಫ್ ಕದನ ವಿರಾಮದ ಸಾಧ್ಯತೆಯ ಬಗ್ಗೆ ತಿರಸ್ಕರಿಸಿದ್ದು, ಅಮೆರಿಕಾ ಮತ್ತು ಇಸ್ರೇಲ್ ಜತೆಗೂಡಿ ಇರಾನ್ ಮೇಲೆ ಮತ್ತಷ್ಟು ಹೋರಾಟ ನಡೆಸುವುದಾಗಿ ಎಚ್ಚರಿಸಲಾಗಿದೆ.


ಇರಾನ್‌ನ ಮತ್ತೊಬ್ಬ ಹಿರಿಯ ನಾಯಕ ಅಲಿ ಲಾರಿಜಾನಿ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯುದ್ದದಿಂದ ಹಿಂದೆ ಸರಿಯಿರಿ ಇಲ್ಲವೇ ಪ್ರತಿರೋಧ ಎದುರಿಸಿ ಎಂದು ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.


ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮಾತನಾಡಿಇರಾನ್‌ನ ನಾಯಕತ್ವವನ್ನು ದುರ್ಬಲಗೊಳಿಸುವುದು ಯುದ್ಧದ ಉದ್ದೇಶವಾಗಿದ್ದು, ಇರಾನ್ ಹೊಸ ಸರ್ವೋಚ್ಚ ನಾಯಕನನ್ನು ಗುರಿಯಾಗಿಸಿಕೊಂಡು ದಾಳಿ ಮುಂದುವರಿಸಲಾಗುವುದು ಎಂದು ಎಚ್ಚರಿಸಿದ್ದಾರೆ.

೭ ಮಂದಿ ಹತ್ಯೆ


ಮುಂಜಾನೆ ದಕ್ಷಿಣ ಲೆಬನಾನ್‌ನಾದ್ಯಂತ ಇಸ್ರೇಲ್ ಸೇನಾ ಪಡೆಗಳು ನಡೆಸಿದ ದಾಳಿಗಳು ಕನಿಷ್ಠ ಏಳು ಜನರನ್ನು ಹತ್ಯೆ ಮಾಡಲಾಗಿದೆ ಎಂದು ಲೆಬನಾನ್‌ನ ಆರೋಗ್ಯ ಸಚಿವಾಲಯ ತಿಳಿಸಿದೆ.


ಇದರಲ್ಲಿ ಕಾನಾ ಪಟ್ಟಣದಲ್ಲಿ ಐದು ಜನರು ಸೇರಿದ್ದಾರೆ. ಟೈರ್ ಮತ್ತು ಬಿಂಟ್ ಜೆಬೀಲ್ ಜಿಲ್ಲೆಗಳಲ್ಲಿ ಹೆಚ್ಚುವರಿ ವೈಮಾನಿಕ ದಾಳಿಗಳು ಸಹ ಸಾವುನೋವುಗಳಿಗೆ ಕಾರಣವಾಗಿವೆ ಎಂದು ಮಾಹಿತಿ ನೀಡಲಾಗಿದೆ


ಯುದ್ದ ಪೀಡಿತ ಪ್ರದೇಶದಲ್ಲಿರುವ ಜನರನ್ನು ಜನನಿಬಿಡ ಪ್ರದೇಶಕ್ಕೆ ಸ್ಥಳಾಂತರಿಸುವ ಎಚ್ಚರಿಕೆ ನೀಡಲಾಗಿದ್ದು ಬೈರುತ್‌ನ ದಕ್ಷಿಣ ಉಪನಗರಗಳಲ್ಲಿ ಹೆಜ್ಬೊಲ್ಲಾಗೆ ಸಂಬಂಧಿಸಿದ ಮೂಲಸೌಕರ್ಯಗಳ ಮೇಲೆ ಇಸ್ರೇಲ್ ಸೇನಾ ಪಡೆಗಳು ದಾಳಿ ನಡೆಸಿದವು. ಮೂಲ ಸೌಕರ್ಯಕ್ಕೆ ಹಾನಿ ಮಾಡಲಾಗಿದೆ ಎಂದು ಹೇಳಲಾಗಿದೆ.

ವಿಮಾನ ನಿಲ್ದಾಣದ ಬಳಿ ದಾಳಿ


ತಡರಾತ್ರಿ ಬಾಗ್ದಾದ್‌ನ ಬಾಗ್ದಾದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಿಲಿಟರಿ ಸ್ಥಾಪನೆ ಗುರಿಯಾಗಿಸಿಕೊಂಡು ಡ್ರೋನ್‌ಗಳು ದಾಳಿ ನಡೆಸಿದವು. ಅಮೆರಿಕ ನೇತೃತ್ವದ ಸಮ್ಮಿಶ್ರ ಪಡೆಗಳು ಬಳಸುವ ಸೌಲಭ್ಯಗಳ ಬಳಿ ಡ್ರೋನ್‌ಗಳು ಬಿದ್ದವು, ಇದರಲ್ಲಿ ಅಮೆರಿಕ ನಿರ್ವಹಿಸುವ ವಿಕ್ಟೋರಿಯಾ ಬೇಸ್ ಸೇರಿದೆ, ಆದರೆ ಯಾವುದೇ ಸಾವುನೋವುಗಳು ವರದಿಯಾಗಿಲ್ಲ ಎಂದು ಅಮೆರಿಕಾ ತಿಳಿಸಿದೆ.


ಇರಾನ್‌ನ ರಾಜಧಾನಿ ಟೆಹ್ರಾನ್ ನಿವಾಸಿಗಳು ರಾತ್ರಿಯಿಡೀ ಯುದ್ಧದ “ಅತ್ಯಂತ ಭೀಕರ ಬಾಂಬ್ ದಾಳಿ” ಯನ್ನು ವರದಿ ಮಾಡಿದ್ದಾರೆ, ಪ್ರಬಲ ಸ್ಫೋಟಗಳು ನೆರೆಹೊರೆಗಳನ್ನು ನಡುಗಿಸಿದವು ಮತ್ತು ರಾಜಧಾನಿಯ ಕೆಲವು ಭಾಗಗಳಲ್ಲಿ ವಿದ್ಯುತ್ ಕಡಿತಗೊಳ್ಳಲಾಗಿತ್ತು, ಇದೇ ಪರಿಸ್ಥಿತಿ ಎಲ್ ಪಿಜಿ ವಿಷಯದಲ್ಲಿ ಭಾರತದಲ್ಲಿಯೂ ಸಮಸ್ಯೆ ತಲೆದೋರಿದೆ.