ಐಟಿ ದಾಳಿಗೆ ಹೆದರಿ ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ರಾಯ್ ಆತ್ಮಹತ್ಯೆ

ಬೆಂಗಳೂರು, ಜ.30- ಆದಾಯ ತೆರಿಗೆ ಅಧಿಕಾರಿಗಳ ದಾಳಿಗೆ ಹೆದರಿ ಕಾನ್ಫಿಡೆಂಟ್ ಗ್ರೂಪ್ ನ ಮುಖ್ಯಸ್ಥ ಸಿ.ಜೆ.ರಾಯ್ ಪಿಸ್ತೂಲ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಈ ಘಟನೆ ರಿಚ್ಮಂಡ್ ವೃತ್ತದ ಬಳಿಯ ಲ್ಯಾಂಡ್ ಫರ್ಡ್ ರಸ್ತೆಯಲ್ಲಿ ಸಂಭವಿಸಿದೆ.


ಇಂದು ಕಾನ್ಫಿಡೆಂಟ್ ಗ್ರೂಪ್ ಕಚೇರಿಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ಇದೇ ರೀತಿ ಕಳೆದ ಮೂರು ವರ್ಷಗಳಿಂದ ಪದೇ ಪದೆ ದಾಳಿ ನಡೆಯುತ್ತಿತ್ತು. ಇದರಿಂದ ಬೇಸತ್ತಿದ್ದ ಉದ್ಯಮಿ ಇಂದು ದಾಳಿ ವೇಳೆ ಪಿಸ್ತೂಲಿನಿಂದ ಶೂಟ್‌ ಮಾಡಿಕೊಂಡು ಆತ್ಮಹತ್ಯೆ ಶರಣಾಗಿದ್ದಾರೆ.


ಇಂದು ಬೆಳಗ್ಗೆ ಕೂಡ ದಾಳಿ ಮಾಡಿದ್ದರು. ಮಧ್ಯಾಹ್ನ ಕಚೇರಿಗೆ ಬಂದಿದ್ದ ಉದ್ಯಮಿ ಸಿ.ಜೆ.ರಾಯ್, ಒಂದು ಗಂಟೆ ಐಟಿ ವಿಚಾರಣೆ ಎದುರಿಸಿದ್ದಾರೆ. ಅಧಿಕಾರಿಗಳಿಗೆ ಕೆಲ ದಾಖಲೆ ಸಹ ಕೊಟ್ಟಿದ್ದಾರೆ. ಮತ್ತಷ್ಟು ದಾಖಲೆ ತರಲು ರೂಂ​ಗೆ ಹೋಗಿದ್ದು, ಈ ವೇಳೆ ಪಿಸ್ತೂಲ್​ನಿಂದ ಗುಂಡು ಹಾರಿಸಿಕೊಂಡಿದ್ದಾರೆ.


ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಮಾರ್ಗಮಧ್ಯೆ ಸಿ.ಜೆ.ರಾಯ್ ಕೊನೆಯುಸಿ ರೆಳೆದಿದ್ದಾರೆ.


ಸ್ಥಳಕ್ಕೆ ಅಶೋಕ್​​ನಗರ ಠಾಣೆ ಪೊಲೀಸರು ಭೇಟಿ ನೀಡಿ ಖುದ್ದು ಡಿಸಿಪಿ ಅಕ್ಷಯ್​​ ಅವರು ತನಿಖೆ ನಡೆಸಿದ್ದು, ಈಗಾಗಲೇ ಗುಂಡು ಹಾರಿಸಿಕೊಂಡ ಪಿಸ್ತೂಲ್ ವಶಕ್ಕೆ ಪಡೆದುಕೊಂಡಿದ್ದಾರೆ.


ಕಚೇರಿ ಕೊಠಡಿಯಲ್ಲಿನ ಸಿಸಿ ಕ್ಯಾಮರಾ ಪರಿಶೀಲನೆ ಮಾಡಿದ್ದಾರೆ. ಜೊತೆಗೆ ಯಾವುದಾದರೂ ಡೆತ್ ನೋಟ್ ಇದೆಯಾ ಅಥವಾ ಮೊಬೈಲ್​ನಲ್ಲಿ ಏನಾದ್ರೂ ಇದೆಯಾ ಅಥವಾ ಯಾರಿಗಾದ್ರೂ ಮೆಸೇಜ್ ಮಾಡಿದ್ದರಾ ಎಂದು ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸಿದ್ದಾರೆ.


ಉದ್ಯಮಿ ಸಿ.ಜೆ.ರಾಯ್ ಆತ್ಮಹತ್ಯೆಗೆ ಹಿನ್ನೆಲೆ ಕಾನ್ಫಿಡೆಂಟ್ ಗ್ರೂಪ್ ಕಚೇರಿಯಿಂದ ಐಟಿ ಅಧಿಕಾರಿಗಳು ವಾಪಸ್​​ ಆಗಿದ್ದಾರೆ. ಇಂದು ಬೆಳಗ್ಗೆ ದಾಳಿ ಮಾಡಿದ್ದ ಆದಾಯ ತೆರಿಗೆ ಅಧಿಕಾರಿಗಳು 2 ಕಾರುಗಳಲ್ಲಿ 10 ಜನರು ವಾಪಸ್ ಆಗಿದ್ದಾರೆ.


ಕೇರಳ ಮೂಲದ ಸಾಮಾನ್ಯ ವ್ಯಕ್ತಿಯಾಗಿದ್ದ ಸಿ.ಜೆ. ರಾಯ್, 1997ರಲ್ಲಿ ಹೆಚ್​ಪಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಬಳಿಕ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದರು. ತದನಂತರ ಕಾನ್ಫಿಡೆಂಟ್ ಗ್ರೂಪ್ ಎಂಬ ಸಾಮ್ರಾಜ್ಯ ಕಟ್ಟಿದ್ದೇ ರೋಚಕ. 30,40 ಸೈಟ್​ನಲ್ಲಿ ರಿಯಲ್ ಎಸ್ಟೇಟ್ ಉದ್ಯಮ ಶುರು ಮಾಡಿ, ಸದ್ಯ 1 ಸಾವಿರ ಎಕರೆ ಭೂಮಿ ಹೊಂದಿದ್ದರು.