Home ಮುಖಪುಟ ಸುದ್ದಿ ರಾಜ್ಯದ ಸಮಗ್ರ ಅಭಿವೃದ್ಧಿ ಬಜೆಟ್

ರಾಜ್ಯದ ಸಮಗ್ರ ಅಭಿವೃದ್ಧಿ ಬಜೆಟ್

೫೪ ಸಾವಿರ ಹುದ್ದೆ ಭರ್ತಿಗೆ ನಿರ್ಧಾರ

ಬೆಂಗಳೂರು, ಮಾ. ೬- ಜನಸಾಮಾನ್ಯರಿಗೆ ಯಾವುದೇ ಹೊರೆಯಾಗದ ರಾಜ್ಯದ ಸಮಗ್ರ ಅಭಿವೃದ್ಧಿಯ ಬಜೆಟ್‌ನ್ನು ಮಂಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಮಹಿಳೆಯರು, ರೈತರ ಸಬಲೀಕರಣಕ್ಕೆ ವಿಶೇಷ ಯೋಜನೆಗಳ ಜತೆಗೆ ದುರ್ಬಲ ವರ್ಗದವರು, ಶ್ರಮಿಕರು, ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರು, ಯುವಜನರ ಕಲ್ಯಾಣಕ್ಕೆ ಹತ್ತು ಹಲವು ಕಾರ್ಯಕ್ರಮಗಳನ್ನು ಬಜೆಟ್‌ನಲ್ಲಿ ಘೋಷಿಸಿದ್ದಾರೆ.


ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ವಿಧಾನಸಭೆಯಲ್ಲಿಂದು ೨೦೨೫-೨೬ನೇ ಸಾಲಿನ ಬಜೆಟ್‌ನ್ನು ಮಂಡಿಸಿದ್ದು, ಈ ಬಜೆಟ್‌ನಲ್ಲಿ ಆದ್ಯತಾ ಕ್ಷೇತ್ರಗಳಾದ ಕೃಷಿ, ಶಿಕ್ಷಣ, ಆರೋಗ್ಯ, ಮೂಲ ಸೌಕರ್ಯ, ಅಭಿವೃದ್ಧಿಗೆ ಒತ್ತು ನೀಡಲಾಗಿದ್ದು, ಉದ್ಯೋಗ ಸೃಷ್ಟಿಗೂ ಆದ್ಯತೆ ನೀಡಿ ಈ ವರ್ಷ ೫೬,೪೩೨ ಹುದ್ದೆಗಳ ಭರ್ತಿ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡುವ ಘೋಷಣೆಯನ್ನೂ ಮಾಡಿದ್ದಾರೆ.


ಈ ಸಾಲಿನ ಬಜೆಟ್‌ನಲ್ಲಿ ರಾಜ್ಯದ ಪಂಚ ಗ್ಯಾರಂಟಿ ಯೋಜನೆಗಳಿಗೆ ೧ ಕೋಟಿ ೨೧ ಸಾವಿರದ ೫೯೮ ಕೋಟಿ ರೂ.ಗಳನ್ನು ಒದಗಿಸಲಾಗಿದೆ.
ಈ ಸಾಲಿನ ಬಜೆಟ್ ಗಾತ್ರ ೪ ಲಕ್ಷದ ೪೮ ಸಾವಿರದ ೦೦೪ ಕೋಟಿ ರೂ.ಗಳ ಗಾತ್ರವಾಗಿದ್ದು, ಪ್ರಸಕ್ತ ಆರ್ಥಿಕ ವರ್ಷದಲ್ಲಿ ೧ ಲಕ್ಷ ೩೨ ಸಾವಿರದ ೧೯೦ ಕೋಟಿ ರೂ.ಗಳ ಸಾಲ ಪಡೆಯಲು ತೀರ್ಮಾನಿಸಲಾಗಿದೆ.


ಈ ಆಯವ್ಯಯವು ವಿತ್ತೀಯಕೊರತೆಯ ಆಯವ್ಯಯವಾಗಿದ್ದು, ೨೨,೯೫೨ ಕೋಟಿ ರೂ.ಗಳ ವಿತ್ತೀಯ ಕೊರತೆಯನ್ನು ಹೊಂದಿದ್ದು, ಇದನ್ನು ಸರಿದೂಗಿಸಲು ಅಭಿವೃದ್ಧಿ ಕಾಮಗಾರಿಗಳಿಗಾಗಿ ೧,೨೨,೩೪೦ ಕೋಟಿ ರೂ.ಗಳ ಸಾಲ ಪಡೆಯಲು ತೀರ್ಮಾನಿಸಲಾಗಿದೆ.


ರಾಜ್ಯದ ಆರ್ಥಿಕತೆಯನ್ನು ಬಲಪಡಿಸಲು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಈ ಬಾರಿ ೨.೨ ಲಕ್ಷಕೋಟಿ ರೂ.ಗಳ ಸ್ವಂತ ತೆರಿಗೆ ಸಂಗ್ರಹದ ಗುರಿ ಹೊಂದಿದ್ದು, ಗ್ಯಾರಂಟಿಯೋಜನೆಗಳಿಗೆ ಅಧಿಕ ಹಣ ವ್ಯಯಿಸುತ್ತಿದ್ದರೂ ಬಡಂವಾಳ ವೆಚ್ಚಗಳಿಗೆ ದಕ್ಕೆ ಬಾರದಂತೆ ನೋಡಿಕೊಳ್ಳಲು ಸಾಲದ ಮೊರೆ ಹೋಗಲಾಗಿದೆ.
ಅಂಕಿ ಅಂಶಗಳ ಪ್ರಕಾರ ಈ ಆರ್ಥಿಕ ವರ್ಷದ ಅಂತ್ಯಕ್ಕೆ ಕರ್ನಾಟಕ ಒಟ್ಟು ಸಾಲವು ೮,೨೭,೩೮೯ ಕೋಟಿ ರೂ. ತಲುಪಲಿದೆ ಎಂದು ಅಂದಾಜಿಸಲಾಗಿದೆ. ಇದು ಒಟ್ಟು ಆಂತರಿಕ (ಜಿಎಸ್‌ಡಿಪಿ ) ಶೇ. ೨೪.೯೪ ರಷ್ಟಾಗಲಿದ್ದು, ಆರ್ಥಿಕ ಸ್ಥಿತಿ ಮಿತಿಯಲ್ಲೇ ಇದೆ ಎಂದು ಸಿದ್ದರಾಮಯ್ಯ ಬಜೆಟ್ ಭಾಷಣದಲ್ಲಿ ಹೇಳಿದ್ದಾರೆ.
ಕಲ್ಯಾಣ ಯೋಜನೆಗಳ ಜತೆಗೆ ಹೆಚ್ಚಿನ ಬಂಡವಾಳ ಹೂಡಿಕೆ, ಮೂಲ ಸೌಕರ್ಯ ಅಭಿವೃದ್ಧಿ ಮತ್ತು ದೀರ್ಘಕಾಲಿನ ಆರ್ಥಿಕ ಪರಿವರ್ತನೆಗಳತ್ತಲೂ ಗಮನ ಹರಿಸಿ ಜಲಕನ್ಯಾ ಯೋಜನೆಗೆ ಹೆಚ್ಚಿನ ಹೂಡಿಕೆ ಮಾಡಲಾಗಿದೆ ಎಂದರು.


ಕರ್ನಾಟಕದ ಅಭಿವೃದ್ಧಿ ಮಾದರಿಯ ಮಂತ್ರವನ್ನು ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ. ಈ ಬಜೆಟ್‌ನಲ್ಲಿ ೫೬,೪೩೨ ಉದ್ಯೋಗಗಳನ್ನು ಭರ್ತಿ ಮಾಡುವುದರ ಜತೆಗೆ ರಸ್ತೆ, ಸೇತುವೆ, ಕಟ್ಟೆಗಳ ನಿರ್ಮಾಣಕ್ಕೂ ಆದ್ಯತೆ ನೀಡಿ, ಸುಮಾರು ೮೬೦೦ ಕೋಟಿ ರೂ.ಗಳ ವೆಚ್ಚದಲ್ಲಿ ಮುಖ್ಯಮಂತ್ರಿ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಕ್ರಮವನ್ನು ಜಾರಿಗೊಳಿಸಲಾಗುತ್ತಿದೆ.


ಗ್ರಾಮೀಣ ರೈತರಿಗೆ ಸ್ಥಿರ ಮತ್ತು ಹೆಚ್ಚುವರಿ ಆದಾಯ ಮೂಲಗಳನ್ನು ಸೃಜಿಸುವ ಉದ್ದೇಶದಿಂದ ಮುಖ್ಯಮಂತ್ರಿ ಕೃಷಿ ವಿಸ್ತಾರ ಯೋಜನೆಯನ್ನು ೧೦೦ ಕೋಟಿ ರೂ. ವೆಚ್ಚದಲ್ಲಿ ಅನುಷ್ಠಾನಗೊಳಿಸುವ ಯೋಜನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್‌ನಲ್ಲಿ ಪ್ರಕಟಿಸಿದ್ದಾರೆ.


ಈ ಬಜೆಟ್‌ನಲ್ಲಿ ಶಿಕ್ಷಣ ಕ್ಷೇತ್ರಕ್ಕೂ ಆದ್ಯತೆ ನೀಡಲಾಗಿದ್ದು, ರಾಜ್ಯದ ೧೮೪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳನ್ನು ಪ್ರೌಢಶಾಲೆಗಳನ್ನಾಗಿ, ೫೦ ಪ್ರೌಢಶಾಲೆಗಳನ್ನು ಪದವಿ ಪೂರ್ವ ಕಾಲೇಜುಗಳನ್ನಾಗಿ ಉನ್ನತೀಕರಿಸುವ ಘೋಷಣೆಯನ್ನು ಮಾಡಿ, ಖಾಸಗಿ ಶಾಲೆಗಳ ಮಾನ್ಯತೆ ಪಡೆಯುವ ಹಾಗೂ ನವೀಕರಿಸುವ ಪ್ರಕ್ರಿಯೆಯನ್ನು ಆನ್‌ಲೈನ್ ಮೂಲಕ ಮಾಡುವ ಘೋಷಣೆಯನ್ನು ಮಾಡಲಾಗಿದೆ.


ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ದ್ವಿಭಾಷಾ ತರಗತಿಗಳನ್ನು ಜಾರಿಗೊಳಿಸಲು ಪ್ರಾಥಮಿಕ ಶಾಲಾ ಶಿಕ್ಷಕರ ಇಂಗ್ಲೀಷ್ ಭಾಷಾ ತರಬೇತಿ ಕಾರ್ಯಕ್ರಮವನ್ನು ೨೦ ಕೋಟಿ ರೂ.ಗಳಲ್ಲಿ ಹಮ್ಮಿಕೊಳ್ಳುವ ಘೋಷಣೆಯನ್ನು ಮಾಡಲಾಗಿದೆ.


ಉನ್ನತ ಶಿಕ್ಷಣಕ್ಕೂ ಬಜೆಟ್‌ನಲ್ಲಿ ಆದ್ಯತೆ ನೀಡಲಾಗಿದ್ದು, ೨೫೦೦ ಕೋಟಿ ರೂ. ವೆಚ್ಚದಲ್ಲಿ ಕರ್ನಾಟಕ ಉನ್ನತ ಶಿಕ್ಷಣ ಪರಿವರ್ತನೆ ಯೋಜನೆಯನ್ನೂ ಅನುಷ್ಠಾನಗೊಳಿಸುವ ಘೋಷಣೆ ಮಾಡಲಾಗಿದೆ.


ಈ ಬಜೆಟ್‌ನಲ್ಲಿ ಆರೋಗ್ಯ ಕ್ಷೇತ್ರಕ್ಕೂ ಹೆಚ್ಚಿನ ಒತ್ತು ನೀಡಲಾಗಿದ್ದು, ಮಧುಮೇಹದಿಂದ ಬಳಲುತ್ತಿರುವ ೧೮ ವರ್ಷ ವಯಸ್ಸಿನ ಮಕ್ಕಳಿಗೆ ಉಚಿತ ಇನ್ಸುಲಿನ್ ಪೆನ್‌ಗಳನ್ನು ನೀಡುವ ಘೋಷಣೆಯನ್ನು ಮಾಡಲಾಗಿದೆ.


ಆಯುಷ್ಮಾನ್ ಭಾರತ್ ಆರೋಗ್ಯ ಚಿಕಿತ್ಸೆ ಯೋಜನೆಯ ಪ್ಯಾಕೇಜ್ ದರಗಳನ್ನು ಪರಿಷ್ಕರಿಸಿ ಬಡ ರೋಗಿಗಳ ಉತ್ತಮ ಆರೋಗ್ಯಕ್ಕೆ ೪೦೦ ಕೋಟಿ ರೂ.ಗಳನ್ನು ಹೆಚ್ಚುವರಿಯಾಗಿ ಒದಗಿಸುವ ಘೋಷಣೆಯನ್ನು ಮಾಡಲಾಗಿದೆ.


ಮಹಿಳೆಯರ ಸಬಲೀಕರಣಕ್ಕೂ ಹೆಚ್ಚಿನ ಒತ್ತು ನೀಡಲಾಗಿದ್ದು, ಮಹಿಳಾ ಉದ್ದೇಶದ ಕಾರ್ಯಕ್ರಮಗಳಿಗೆ ಸುಮಾರು ೯೪ ಸಾವಿರ ಕೋಟಿ ರೂ.ಗಳನ್ನು ಈ ಬಜೆಟ್‌ನಲ್ಲಿ ಒದಗಿಸಲಾಗಿದೆ.


ಪರಿಶಿಷ್ಟ ಜಾತಿ, ವರ್ಗಗಳ ಕಲ್ಯಾಣಕ್ಕೂ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ಒದಗಿಸಲಾಗಿದೆ.
ಸಮಾಜ ಕಲ್ಯಾಣ ಇಲಾಖೆಯಡಿ ಬೌದ್ಧ ಅಭಿವೃದ್ಧಿ ನಿಗಮವನ್ನು ಸ್ಥಾಪಿಸುವ ಘೋಷಣೆಯನ್ನು ಬಜೆಟ್‌ನಲ್ಲಿ ಮಾಡಲಾಗಿದ್ದು, ಪರಿಶಿಷ್ಟ ಪಂಗಡಗಳ ಇಲಾಖೆ ಮತ್ತು ನಿರ್ದೇಶನಾಲಯದಲ್ಲಿ ಬರುವ ನಿಗಮ ಮತ್ತು ಇತರೆ ಕಚೇರಿಗಳಿಗೆ ಬೆಂಗಳೂರಿನಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಆಡಳಿತ ಸೌಧ ಸಂಕೀರ್ಣವನ್ನು ನಿರ್ಮಿಸುವ ಘೋಷಣೆ ಮಾಡಲಾಗಿದೆ.


ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗಾಗಿ ರಾಜ್ಯದ ವಿವಿಧೆಡೆ ೧೫೦ ಸಂಖ್ಯಾಬಲದ ೫೦ ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳನ್ನು ಆರಂಭಿಸುವ ಘೋಷಣೆಯನ್ನು ಮಾಡಲಾಗಿದೆ.


ಹಾಗೆಯೇ ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗಾಗಿ ೨೫ ಹೊಸ ಮೆಟ್ರಿಕ್ ನಂತರದ ಶಾಲೆಗಳನ್ನು ಆರಂಭಿಸುವ ಘೋಷಣೆಯನ್ನು ಮಾಡಲಾಗಿದೆ.
ವಸತಿ ಯೋಜನೆಗಳಿಗೂ ಬಜೆಟ್‌ನಲ್ಲಿ ಆದ್ಯತೆ ನೀಡಲಾಗಿದ್ದು, ಪ್ರಸಕ್ತ ವರ್ಷ ೩ ಲಕ್ಷ ಮನೆಗಳನ್ನು ಪೂರ್ಣಗೊಳಿಸುವ ಗುರಿಯನ್ನು ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ.
ಬೆಂಗಳೂರು ಅಭಿವೃದ್ಧಿಗೂ ಬಜೆಟ್‌ನಲ್ಲಿ ಹೆಚ್ಚಿನ ಒತ್ತು ನೀಡಲಾಗಿದ್ದು, ಬೆಂಗಳೂರಿನ ವಿವಿಧೆಡೆ ವಾರ್ಡ್ ರಸ್ತೆ ಮತ್ತು ಮೂಲ ಸೌಕರ್ಯ ಅಭಿವೃದ್ಧಿಗೆ ೧೨೫೦ ಕೋಟಿ ರೂ. ಒದಗಿಸಲಾಗಿದೆ.