
ಕಲಬುರಗಿ,ಮಾ.11-ನೀತಿ ಆಯೋಗದಿಂದ ಆಂಧ್ರಪ್ರದೇಶದ ವಿಶಾಕಪಟ್ಟಣಂನಲ್ಲಿ ಸೋಮವಾರ ಜರುಗಿದ ಪ್ರಾದೇಶಿಕ ಕಾರ್ಯಾಗಾರದಲ್ಲಿ ಕಲಬುರಗಿ ಜಿಲ್ಲೆಯ ಮಹತ್ವಕಾಂಕ್ಷೆ ತಾಲೂಕಿನಲ್ಲಿ ಪ್ರಸವ ಪೂರ್ವ ನೋಂದಣಿ ಮತ್ತು ಸಾಂಸ್ಥಿಕ ಹೆರಿಗೆಯಲ್ಲಿ ಶೇ.100ರಷ್ಟು ಪ್ರಗತಿ ಸಾಧಿಸಿರುವುದಕ್ಕೆ ಕಲಬುರಗಿ ಜಿಲ್ಲಾಡಳಿತ ಕಾರ್ಯಕ್ಕೆ ನೀತಿ ಅಯೋಗವು ಮೆಚ್ಚುಗೆ ವ್ಯಕ್ತಪಡಿಸಿದೆ.
ಸೋಮವಾರ ಆಂಧ್ರಪ್ರದೇಶದ ವಿಶಾಕಪಟ್ಟಣಂನ ಎ1 ಗ್ರ್ಯಾಂಡ್ ಕನ್ವೆನ್ಷನಲ್ ಸೆಂಟರ್‍ನಲ್ಲಿ ನೀತಿ ಆಯೋಗದಿಂದ ಆಯೋಜಿಸಿದ ಬದಲಾವಣೆಯ ದಕ್ಷಿಣ ವೇಗವರ್ಧಕಗಳು” ಎಂಬ ಘೋಷವಾಕ್ಯದ ಮಹತ್ವಾಕಾಂಕ್ಷೆಯ ಜಿಲ್ಲೆಗಳಲ್ಲಿ ನಾವೀನ್ಯತೆಗಳು ಮತ್ತು ಉತ್ತಮ ಅಭ್ಯಾಸಗಳು ಕುರಿತ ಕಾರ್ಯಾಗಾರ ನಡೆಯಿತ್ತು.
ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ಭಾಗವಹಿಸಿ, ಜಿಲ್ಲೆಯ ಕಾಳಗಿ, ಅಫಜಲಪೂರ ಹಾಗೂ ಶಹಾಬಾದ ಬ್ಲಾಕ್‍ಗಳಲ್ಲಿ ಗರ್ಭಧಾರಣೆ ಕಂಡಬಂದ ನಂತರ ಮೊದಲನೇ ತ್ರೈಮಾಸಿಕ ಅವಧಿಯಲ್ಲಿಯೇ ಪ್ರಸವ ಪೂರ್ವ ನೋಂದಣಿ ಮಾಡಿ ಆರೋಗ್ಯ ಸುಧಾರಣೆ ನಿಟ್ಟಿನಲ್ಲಿ ಪೌಷ್ಟಿಕ ಆಹಾರ ನೀಡುವುದರ ಜೊತೆಗೆ ಶೇ.100 ರಷ್ಟು ಸಾಂಸ್ಥಿಕ ಹೆರಿಗೆ ಮಾಡಿಸಲಾಗುತ್ತಿದೆ ಎಂದು ಪ್ರಾತ್ಯಕ್ಷಿಕೆ ಮೂಲಕ ಜಿಲ್ಲೆಯ ಉತ್ತಮ ಅಭ್ಯಾಸಗಳ ಕುರಿತು ಮಂಡಿಸಿದರು.
ಜಿಲ್ಲೆಯ ಈ ಉತ್ತಮ ಅಭ್ಯಾಸಕ್ಕೆ ನೀತಿ ಆಯೋಗದ ಹೆಚ್ಚುವರಿ ಕಾರ್ಯದರ್ಶಿ ರೋಹಿತ್ ಕುಮಾರ ಅವರು ಶ್ಲಾಘಿಸಿದಲ್ಲದೆ ಇದನ್ನು ಪುನರಾವರ್ತಿಸಬಹುದಾದ ಮಾದರಿ ಎಂದು ಮೆಚ್ಚುಗೆಯ ಮಾತುಗಳನ್ನಾಡಿದರು.
ನೆರೆಯ ಬೀದರ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಸೇರಿದಂತೆ ಆಂಧ್ರ ಪ್ರದೇಶ, ಕೇರಳ, ತಮಿಳನಾಡು, ತೆಲಂಗಾಣ ಹಾಗೂ ಅಂಡಾಮಾನ್ & ನಿಕೋಬರ್ ಕೇಂದ್ರಾಡಳಿತ ಪ್ರದೇಶದ ಜಿಲ್ಲಾಧಿಕಾರಿಗಳು ಇದರಲ್ಲಿ ಭಾಗವಹಿಸಿದ್ದರು.
ನೀತಿ ಆಯೋಗದಿಂದ ಗುರುತಿಸಲ್ಪಟ್ಟ ಜಿಲ್ಲೆಯ ಮಹತ್ವಕಾಂಕ್ಷೆಯ ತಾಲೂಕುಗಳಾದ ಅಫಜಲಪೂರ, ಶಹಾಬಾದ ಹಾಗೂ ಕಾಳಗಿ ಬ್ಲಾಕ್‍ಗಳಲ್ಲಿ ಸುಸ್ಥಿರ ಪ್ರಗತಿ ಸಾಧಿಸಲು ನವೀನ ಆಡಳಿತ ಮತ್ತು ಅಭಿವೃದ್ಧಿ ಉಪಕ್ರಮಗಳನ್ನು ಜಾರಿಗೊಳಿಸಿದ್ದಕ್ಕಾಗಿ ಕಲಬುರಗಿ ಜಿಲ್ಲಾಡಳಿತ ಕಾರ್ಯಕ್ಕೆ ಕಳೆದ 2025ರ ನವೆಂಬರ್ ನಲ್ಲಿ ನೀತಿ ಆಯೋಗವು ಪ್ರಶಂಸನೆ ವ್ಯಕ್ತಪಡಿಸಿತ್ತು.
ಇದಲ್ಲದೆ ಶಿಕ್ಷಣ, ಆರೋಗ್ಯ, ಕೌಶಲ್ಯ, ಕೃಷಿ ಸೇರಿದಂತೆ ಜನರ ಜೀವನ ಮಟ್ಟದ ಸುಧಾರಣೆ ನಿಟ್ಟಿನಲ್ಲಿ ಮಹತ್ವಾಕಾಂಕ್ಷೆಯ ತಾಲೂಕಿನಲ್ಲಿ ಉತ್ತಮವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವ ಕಾರಣಕ್ಕೆ ಕಳೆದ ಆಗಸ್ಟ್-2024ರಲ್ಲಿ ನೀತಿ ಆಯೋಗವು ಘೋಷಿಸಿದ ಡೆಲ್ಟಾ ರ್ಯಾಂಕ್-2024ರಲ್ಲಿ ದಕ್ಷಿಣ ಭಾರತ ವಲಯದಡಿ ಜಿಲ್ಲೆಯ ಕಾಳಗಿ ತಾಲೂಕು ಎರಡನೇ ರ್ಯಾಂಕ್ ಪಡೆದಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.


























