Home ಮುಖಪುಟ ಸುದ್ದಿ ಬಜೆಟ್‌ನಲ್ಲಿ ಸಿಎಂ ರಿಂದ ಭೌತಿಕ ದಿವಾಳಿತನ ಪ್ರದರ್ಶನ

ಬಜೆಟ್‌ನಲ್ಲಿ ಸಿಎಂ ರಿಂದ ಭೌತಿಕ ದಿವಾಳಿತನ ಪ್ರದರ್ಶನ

ಬಿವೈವಿ ಟೀಕೆ

ಬೆಂಗಳೂರು, ಮಾ. ೧೨- ರಾಜ್ಯ ಸರ್ಕಾರದ ಈ ಸಾಲಿನ ಬಜೆಟ್ ಜನರ ನಿರೀಕ್ಷೆಯನ್ನು ಹುಸಿ ಮಾಡಿದೆ. ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಭೌತಿಕ ದಿವಾಳಿತನವನ್ನು ಪ್ರದರ್ಶಿಸಿದ್ದಾರೆ. ಈ ಬಜೆಟ್ ನೋಡಿದರೆ ಮುಖ್ಯಮಂತ್ರಿಗಳು ಅಸಾಯಕರಾಗಿ ಕೈ ಚೆಲ್ಲಿರುವ ಭಾವನೆ ಜನರಿಗೆ ಬಂದಿದೆ ಎಂದು ಬಿಜೆಪಿ ಸದಸ್ಯ ಬಿ.ವೈ. ವಿಜಯೇಂದ್ರ ವಿಧಾನಸಭೆಯಲ್ಲಿಂದು ಹೇಳಿದರು


ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಜ್ಯ ಸರ್ಕಾರ ತನ್ನ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಕೇಂದ್ರದ ವಿರುದ್ಧ ಆರೋಪ ಮಾಡುತ್ತಿದೆ. ಆದಾಯ ಸಂಗ್ರಹದಲ್ಲಿ ಸರ್ಕಾರ ವಿಫಲವಾಗಿದೆ. ಅತಿ ಹೆಚ್ಚು ಸಾಲ ಮಾಡಿದ ಕೀರ್ತಿ ಕಾಂಗ್ರೆಸ್ ಸರ್ಕಾರದ್ದಾಗಿದೆ ಎಂದು ಟೀಕಿಸಿದರು.


ರಾಜ್ಯ ಮತ್ತು ಜನರನ್ನು ಸಾಲದ ಸುಳಿಗೆ ಕಾಂಗ್ರೆಸ್ ಸಿಲುಕಿಸಿದೆ. ವಿತ್ತೀಯ ಕೊರತೆ ಹೆಚ್ಚಾಗಿ ಜನರ ಮೇಲೆ ಬೆಲೆ ಏರಿಕೆಯ ಬ್ರಹ್ಮಾಸ್ತ್ರವನ್ನು ಪ್ರಯೋಗ ಮಾಡಲಾಗಿದೆ ಎಂದು ಅವರು ಹೇಳಿದರು.


ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ ಎಂಬುದನ್ನು ಪದೇ ಪದೇ ಹೇಳಿ, ಜನರ ಗಮನವನ್ನು ಬೇರೆಡೆ ಸೆಳೆದು ತಮ್ಮ ವೈಫಲ್ಯ ಮುಚ್ಚಿಕೊಳ್ಳುವ ಪ್ರಯತ್ನವನ್ನು ನಡೆಸಿದೆ ಎಂದು ಅವರು ದೂರಿದರು.


ರಾಜ್ಯದಿಂದ ಕೇಂದ್ರಕ್ಕೆ ೪.೩ ಲಕ್ಷ ಕೋಟಿ ತೆರಿಗೆ ಕೊಡುತ್ತೇವೆ. ಆದರೆ ಕೇಂದ್ರ ೧೦೦ ರೂ. ನೀಡಿದರೆ ೧೫ ರೂ. ವಾಪಸ್ ಕೊಡುತ್ತಿದೆ ಎಂದು ಹೇಳಿದ್ದಾರೆ. ಮಹಾರಾಷ್ಟ್ರದ ಬಳಿಕ ಕರ್ನಾಟಕ ಹೆಚ್ಚು ತೆರಿಗೆ ನೀಡುವ ರಾಜ್ಯ. ರಾಜ್ಯದಲ್ಲಿ ಹಲವು ಬಹುರಾಷ್ಟ್ರೀಯ ಕಂಪನಿಗಳಿವೆ. ಈ ಕಂಪನಿಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ವ್ಯವಹಾರ ನಡೆಸುತ್ತವೆ. ಆದರೆ ಅವರ ವ್ಯವಹಾರವೆಲ್ಲಾ ರಾಜ್ಯದಲ್ಲೇ ಇದೆ. ಆದರೆ ೧೦೦ ಕ್ಕೆ ೧೫ ರೂ. ಮಾತ್ರ ಕೇಂದ್ರ ಸರ್ಕಾರ ಕೊಡುತ್ತಿದೆ ಎಂಬುದು ಸರಿಯಲ್ಲ. ಸರ್ಕಾರ ಅರ್ಧ ಸತ್ಯ ಹೇಳುತ್ತಿದೆ ಎಂದು ವಿಜಯೇಂದ್ರ ದೂರಿದರು.


೨೦೧೪ ರಲ್ಲಿ ಯುಪಿಎ ಸರ್ಕಾರವಿದ್ದಾಗಲೂ ರಾಜ್ಯಕ್ಕೆ ೧೦೦ ರೂ.ಗೆ ೧೫ ರೂ. ಬಂದಿರುವುದು. ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರವಿದ್ದರೂ ಆ ಸರ್ಕಾರಕ್ಕೂ ಕರ್ನಾಟಕಕ್ಕಿಂತ ೨ ರೂ. ಕಡಿಮೆ ಬರುತ್ತಿದೆಯೇ ಹೊರತು ಜಾಸ್ತಿಯಲ್ಲ. ಮಲತಾಯಿ ಧೋರಣೆ ಎಲ್ಲಿ ಬಂತು. ಮೋದಿ ಅವರು ಪ್ರದಾನಿ ಆದ ಮೇಲೆ ರಾಜ್ಯಕ್ಕೆ ಹಣ ಬರುತ್ತಿಲ್ಲ ಎನ್ನುವುದು ಸರಿಯಲ್ಲ. ನಾವು ಒಕ್ಕೂಟ ವ್ಯವಸ್ಥೆಯಲ್ಲಿದ್ದೇವೆ. ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.


ಬಜೆಟ್ ನೋಡುವುದಕಷ್ಟೇ ಆಕರ್ಷಕ, ಒಳಗೆ ನೋಡಿದರೆ ಏನೂ ಹೂರಣ ಇಲ್ಲ. ಘೋಷಣೆಗೆ ಮಾತ್ರ ಸೀಮಿತವಾಗಿದೆ. ಅಭಿವೃದ್ಧಿ ಕಾರ್ಯಗಳನ್ನು ನಿರ್ಲಕ್ಷ್ಯ ಮಾಡಲಾಗಿದೆ. ಸಿದ್ಧರಾಮಯ್ಯ ಮಂಡಿಸಿರುವ ಬಜೆಟ್ ನಾಯಕತ್ವದ ದಿವಾಳಿತನ ತೋರುತ್ತದೆ. ರಾಜ್ಯಕ್ಕೆ ಈ ಬಜೆಟ್‌ನಿಂದ ಅನುಕೂಲ ಆಗಿಲ್ಲ. ಸಾಲ ಹೆಚ್ಚು ಮಾಡಿದ್ದಾರೆ. ಸಾಲದ ಸುಳಿಯಲ್ಲಿ ರಾಜ್ಯವನ್ನು ಸಿಲುಕಿಸಿದ್ದಾರೆ ಎಂದು ದೂರಿದರು.


ಈ ವರ್ಷ ೧.೪ ಲಕ್ಷ ಕೋಟಿ ರೂ. ಸಾಲ ಮಾಡಿದ್ದಾರೆ. ೪೨ ಸಾವಿರ ಕೋಟಿ ರೂ. ಬಡ್ಡಿ ತುಂಬಬೇಕಿದೆ. ಹೀಗಾದರೆ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಸಿಗಲ್ಲ. ಸಾಲ ಮಾಡಿರುವುದು ಈ ಸರ್ಕಾರದ ಸಾಧನೆ ಎಂದು ವಿಜಯೇಂದ್ರ ಹೇಳಿದರು.


ರಾಜ್ಯದಲ್ಲಿ ಉದ್ಯೋಗಕ್ಕಾಗಿ ಯುವಕರು ಹೋರಾಟ ನಡೆಸುತ್ತಿದ್ದಾರೆ. ಸರ್ಕಾರ ೫೬ ಸಾವಿರ ಹುದ್ದೆಗಳನ್ನು ಭರ್ತಿ ಮಾಡುವ ಭರವಸೆ ನೀಡಿದೆ. ಅಷ್ಟೂ ಹುದ್ದೆಗಳನ್ನು ಭರ್ತಿ ಮಾಡಿದರೆ ರಾಜ್ಯದ ಹಣಕಾಸು ಸ್ಥಿತಿ ಏನಾಗುತ್ತದೋ ಹೇಳಲು ಬಾರದು. ಹುದ್ದೆಗಳು ಖಾಲಿ ಇರುವ ಕಾರಣ ರಾಜ್ಯ ಸರ್ಕಾರಕ್ಕೆ ೧೫ ಸಾವಿರ ಕೋಟಿ ರೂ. ಉಳಿತಾಯವಾಗುತ್ತಿದೆ ಎಂದು ಹೇಳಿದರು.


ರಾಜ್ಯದಲ್ಲಿ ಪ್ರಾದೇಶಿಕ ಅಸಮತೋಲನ ಹೆಚ್ಚಿದೆ. ಪ್ರಾದೇಶಿಕ ಅಸಮತೋಲನ ನಿವಾರಿಸಲು ಬಜೆಟ್‌ನಲ್ಲಿ ಸಮರ್ಪಕ ಪ್ರಸ್ತಾವನೆ ಮಾಡಿಲ್ಲ. ನೀರಾವರಿಗೆ ಎಷ್ಟು ಹಣ ಇಟ್ಟಿದೇವೆ ಎಂದು ಸ್ಪಷ್ಟತೆ ಇಲ್ಲ ಎಂದು ಅವರು ಹೇಳಿದರು


ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಪದೇ ಪದೇ ಕೇಂದ್ರದ ಕಡೆ ಬೊಟ್ಟು ಮಾಡುವುದನ್ನು ಬಿಟ್ಟು ರಾಜ್ಯದ ಎಲ್ಲ ಸಮುದಾಯದ ಅಭಿವೃದ್ಧಿಗೆ ಬದ್ಧರಾಗಿ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದು ಅವರು ಹೇಳಿದರು.
ರಾಜ್ಯದಲ್ಲಿ ರೈತರು, ನೇಕಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆತ್ಮಹತ್ಯೆಗಳು ಆಗಿವೆ. ಆದರೆ ಇದುವರೆಗೂ ಪರಿಹಾರಗಳನ್ನು ವಿತರಿಸಿಲ್ಲ ಎಂದು ಹೇಳಿದರು.
ರಾಜ್ಯದ ಬಜೆಟ್ ಅಭಿವೃದ್ಧಿಗೆ ಪೂರಕವಾಗಿಲ್ಲ ಸಾಲದ ಬಜೆಟ್ ಆಗಿದೆ ಎಂದು ವಿಜಯೇಂದ್ರ ಹೇಳಿದರು.