ದೆಹಲಿಗೆ ಸಿಎಂ, ಡಿಸಿಎಂ ಭೇಟಿ ಕುತೂಹಲಕ್ಕೆಡೆ

ಬೆಂಗಳೂರು, ಜೂ. ೨- ರಾಜ್ಯ ಸಚಿವ ಸಂಪುಟ ಪುನಾರಚನೆ ಆಗಲಿದೆ ಎಂಬ ಸುದ್ದಿಗಳು ಕಾಂಗ್ರೆಸ್ ವಲಯದಲ್ಲಿ ಹರಿದಾಡುತ್ತಿರುವಾಗಲೇ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರವರು ಈ ತಿಂಗಳ ೬ ರಂದು ದೆಹಲಿಗೆ ತೆರಳುತ್ತಿದ್ದು, ಸಂಪುಟ ಪುನಾರಚನೆಗೆ ಮುರ್ಹೂರ್ತ ನಿಗದಿಯಾಗಲಿದೆಯೇ ಎಂಬುದು ಕುತೂಹಲ ಮೂಡಿಸಿದೆ.


ರಾಜ್ಯದ ಕಾಂಗ್ರೆಸ್ ಸರ್ಕಾರ ಎರಡು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಸಚಿವ ಸಂಪುಟ ಪುನಾರಚನೆಯಾಗಬೇಕು, ಈಗಿರುವ ಕೆಲ ಸಚಿವರನ್ನು ಕೈಬಿಟ್ಟು ಹೊಸಬರಿಗೆ ಅವಕಾಶ ಕೊಡಬೇಕು ಎಂಬ ಕೂಗು ಕಾಂಗ್ರೆಸ್ ಶಾಸಕರಲ್ಲಿ ಪ್ರಬಲವಾಗಿ, ಸಂಪುಟ ಪುನಾರಚನೆಯಾಗಬೇಕು ಎಂಬ ಒತ್ತಡಗಳು ಹೆಚ್ಚಿವೆ.


ಸಂಪುಟದಲ್ಲಿ ಖಾಲಿ ಇರುವ ಒಂದು ಸ್ಥಾನ ಭರ್ತಿ ಮಾಡಲು ಮುಖ್ಯಮಂತ್ರಿ ಸಿದ್ಧರಾಮಯ್ಯ ಮುಂದಾಗಿದ್ದು, ಹಿರಿಯ ನಾಯಕರಾದ ಬಿ.ಕೆ. ಹರಿಪ್ರಸಾದ್ ಅವರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಮುಖ್ಯಮಂತ್ರಿ ಸಿದ್ಧರಾಮಯ್ಯ ಎರಡು ದಿನಗಳ ಹಿಂದೆಯಷ್ಟೇ ಹರಿಪ್ರಸಾದ್ ರವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದರು.


ದೆಹಲಿ ಭೇಟಿ ಸಂದರ್ಭದಲ್ಲಿ ಹರಿಪ್ರಸಾದ್ ಅವರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಲು ಮುಖ್ಯಮಂತ್ರಿಗಳು ವರಿಷ್ಠರ ಅನುಮತಿ ಪಡೆಯಲಿದ್ದಾರೆ ಎಂದು ಹೇಳಲಾಗಿದೆ.


ಸಚಿವ ಸಂಪುಟದಲ್ಲಿ ಖಾಲಿ ಇರುವ ಒಂದು ಸ್ಥಾನವನ್ನು ಭರ್ತಿ ಮಾಡಿಕೊಳ್ಳುವ ಬದಲು ನಾಲ್ಕೈದು ಸಚಿವರನ್ನು ಕೈ ಬಿಟ್ಟು ಸಂಪುಟ ಪುನಾರಚನೆಯಾಗಬೇಕು ಎಂದು ಕೆಲ ಶಾಸಕರು ಒತ್ತಡ ಹೇರಿದ್ದಾರೆ. ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ದೆಹಲಿಗೆ ತೆರಳುತ್ತಿದ್ದು, ವರಿಷ್ಠರ ಜತೆ ಚರ್ಚಿಸಿ ಎಲ್ಲವನ್ನು ತೀರ್ಮಾನಿಸಲಿದ್ದಾರೆ.


ಕಾಂಗ್ರೆಸ್ ವರಿಷ್ಠರು ಸಂಪುಟ ಪುನಾರಚನೆಗೆ ಒಪ್ಪಿಗೆ ನೀಡುತ್ತಾರೋ, ಇಲ್ಲವೇ ಖಾಲಿ ಇವರು ಒಂದು ಸಚಿವ ಸ್ಥಾನ ತುಂಬಲು ಒಪ್ಪಿಗೆ ನೀಡುತ್ತಾರೋ ಎಂಬುದು ಕುತೂಹಲ ಮೂಡಿಸಿದೆ.


ವಿಧಾನಪರಿಷತ್ ನಾಮಕರಣ ಪಟ್ಟಿಯೂ ಅಂತಿಮ


ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರವರ ದೆಹಲಿ ಭೇಟಿ ಸಂದರ್ಭದಲ್ಲಿ ವಿಧಾನಪರಿಷತ್‌ನಲ್ಲಿ ಖಾಲಿ ಇವರು ನಾಲ್ಕು ಸ್ಥಾನಗಳ ಭರ್ತಿ ಬಗ್ಗೆಯೂ ಚರ್ಚೆ ನಡೆಯಲಿದ್ದು, ಈ ನಾಲ್ಕು ಸ್ಥಾನಗಳಿಗೆ ಯಾರನ್ನು ನಾಮಕರಣ ಮಾಡಬೇಕು ಎಂಬ ಬಗ್ಗೆಯೂ ವರಿಷ್ಠರ ಜತೆ ಚರ್ಚಿಸಿ ಪಟ್ಟಿಯನ್ನು ಅಂತಿಮಗೊಳಿಸುವರು ಎಂದು ಹೇಳಲಾಗಿದೆ.


ವಿಧಾನಪರಿಷತ್‌ಗೆ ನಾಮಕರಣಗೊಳ್ಳಲು ಕಾಂಗ್ರೆಸ್‌ನಲ್ಲಿ ಭಾರಿ ಪೈಪೋಟಿಯೇ ಇದ್ದು ನಾಲ್ಕು ಸ್ಥಾನಗಳಿಗೆ ೫೦ ಕ್ಕೂ ಹೆಚ್ಚು ಆಕಾಂಕ್ಷಿಗಳಿದ್ದಾರೆ. ಹಾಗಾಗಿ ಪಟ್ಟಿ ಅಂತಿಮಗೊಳ್ಳುವುದು ತಡವಾಗಿದ್ದು, ಈ ಬಾರಿಯ ದೆಹಲಿ ಭೇಟಿ ಸಂದರ್ಭದಲ್ಲಿ ವಿಧಾನಪರಿಷತ್‌ಗೆ ನಾಮಕರಣ ಸದಸ್ಯರ ಪಟ್ಟಿ ಬಹುತೇಕ ಅಂತಿಮಗೊಳ್ಳಲಿದೆ ಎಂದು ಹೇಳಲಾಗಿದೆ.


ಈ ತಿಂಗಳ ೬ ರಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರವರು ದೆಹಲಿಗೆ ತೆರಳಿದ್ದು ಅಲ್ಲಿಯೇ ಒಂದು ದಿನ ವಾಸ್ತವ್ಯ ಹೂಡಲಿದ್ದು, ಸಚಿವ ಸಂಪುಟ ಪುನಾರಚನೆ ಜತೆಗೆ ವಿಧಾನಪರಿಷತ್‌ನ ನಾಮಕರಣ ಸದಸ್ಯರ ಪಟ್ಟ ಅಂತಿಮ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಹೈಕಮಾಂಡ್ ಜತೆ ಚರ್ಚಿಸುವರು ಎಂದು ಹೇಳಲಾಗಿದೆ.