
ಮಹೇಶ ಡಿ. ತಳಕೇರಿ
ಅಫಜಲಪುರ ;ಅ.25: ತಾಲೂಕಿನ ಚಿನಮಳ್ಳಿ ಮತ್ತು ಜೇವರ್ಗಿ ತಾಲೂಕಿನ ಕಲ್ಲೂರ ಮದ್ಯ ನಿರ್ಮಿಸಿದ ಸೇತುವೆ(ಬ್ರಿಡ್ಜ್) ಬ್ಯಾರೇಜ್ ಇತ್ತೀಚೆಗೆ ಅತಿಯಾದ ಮಳೆ ಬಂದು ಮಹಾರಾಷ್ಟ್ರ ರಾಜ್ಯದ ಉಜನಿ ಜಲಾಶಯದಿಂದ ಅಪಾರವಾದ ನೀರು ಭೀಮಾ ನದಿಗೆ ಹರಿ ಬಿಟ್ಟಿರುವ ಕಾರಣದಿಂದ ಪ್ರವಾಹಕ್ಕೆ ಚಿನಮಳ್ಳಿ ಭಾಗದ ಎಡದಂಡೆಯ ರಸ್ತೆ ಸಂಪೂರ್ಣ ನೀರಿನಲ್ಲಿ ಕೊಚ್ಚಿಕೊಂಡು ಹೋಗಿರುವುದರಿಂದ ಚಿನಮಳ್ಳಿ ಗ್ರಾಮದಿಂದ ಜೇವರ್ಗಿ ತಾಲೂಕಿನ ಮಂದೇವಾಲ ಹಾಗೂ ನೆಲೋಗಿ ಗ್ರಾಮಕ್ಕೆ ತೆರಳುವ ರಸ್ತೆ ಖಡಿತಗೊಂಡು ಶಾಲೆಗಳಿಗೆ ಕೈಯಲ್ಲಿ ಜೀವ ಹಿಡಿದುಕೊಂಡು ಸೇತುವೆ ದಾಟುತ್ತಿರುವ ಚಿನಮಳ್ಳಿ ಗ್ರಾಮದ ಸಣ್ಣ, ಸಣ್ಣ ಮಕ್ಕಳು.
ಪ್ರವಾಹ ಕಡಿಮೆ ಆಗಿ ಸುಮಾರು ಎರಡು ತಿಂಗಳು ಕಳೆದರೂ ಕೂಡ ಕೆಬಿಜಿಎನ್ ಎಲ್ ಅಧಿಕಾರಿಗಳು ರಸ್ತೆ ದುರಸ್ತಿ ಮಾಡದೆ, ಕಾಲ ಹರಣ ಮಾಡುತ್ತಿರುವುದು ಯಾವ ಕಾರಣಕ್ಕೆ ಅನ್ನೋದು ಗೊತ್ತಾಗ್ತಿಲ್ಲ. ಒಂದೆರಡು ಬಾರಿ ಕೆಬಿಎನ್‍ಎಲ್ ಅಧಿಕಾರಿಗಳು ಬ್ರಿಡ್ಜ್ ಕಂ. ಬ್ಯಾರೇಜ್ ಭೇಟಿ ನೀಡಿದ್ದರು. ಆ ಸಂದರ್ಭದಲ್ಲಿ ಪ್ರವಾಹಕ್ಕೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿರುವ ಜಮೀನಿನ ಮಾಲೀಕರು ತಾತ್ಕಾಲಿಕ ರಸ್ತೆ ಸಂಪರ್ಕ ಕಲ್ಪಿಸುವ ಕಾರ್ಯಕ್ಕೆ ಅಡ್ಡಿ ಪಡಿಸುತ್ತಿದ್ದಾರೆ ಎಂದು ಅಧಿಕಾರಿಗಳು ಕುಂಟು ನೆಪ ಹೇಳುತ್ತಿದ್ದಾರೆ ಹೊರತು ರೈತರಿಗೆ ಮನವೊಲಿಸಿ ರಸ್ತೆ ಸಂಪರ್ಕ ಕೆಲಸ ಮಾಡದೆ, ನಿರ್ಲಕ್ಷ್ಯ ವಹಿಸುತ್ತಿರುವುದು ಗ್ರಾಮಸ್ಥರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಶಾಲೆಗಳು ಅರ್ಧ ವಾರ್ಷಿಕ (ದಸರಾ) ರಜೆ ಮುಗಿದು ಪುನರ್ ಪ್ರಾರಂಭವಾಗಿರುವುದರಿಂದ ಚಿನಮಳ್ಳಿ ಗ್ರಾಮದ ಬಹುತೇಕ ಮಕ್ಕಳು ಜೇವರ್ಗಿ ತಾಲೂಕಿನ ಮಂದೇವಾಲ ಗ್ರಾಮದಲ್ಲಿರುವ ಸುಸಜ್ಜಿತವಾದ ಖಾಸಗಿ ಶಾಲೆಗೆ ಪ್ರವೇಶ ಪಡೆದಿದ್ದಾರೆ. ಚಿನಮಳ್ಳಿ ಗ್ರಾಮದಿಂದ ಮಂದೇವಾಲ ಹಾಗೂ ಮಾಜಿ ಸಿಎಂ ದಿ.ಧರ್ಮಸಿಂಗ್ ಅವರ ಗ್ರಾಮ ನೆಲೋಗಿಗೆ ತೆರಳಬೇಕಾದರೆ ಇರೋದು ಒಂದೇ ಮಾರ್ಗ ಅದುವೇ ಬ್ರಿಡ್ಜ್ (ಸೇತುವೆ) ಮೂಲಕ ತಲುಪಬಹುದು.
ಜನಪ್ರತಿನಿಧಿಗಳು ಮತ್ತು ಸಂಬಂಧಿಸಿದ ಕೆಬಿಜಿಎನ್ ಎಲ್ ಮೇಲಾಧಿಕಾರಿಗಳು ಹಲವಾರು ಬಾರಿ ಭೇಟಿ ನೀಡಿದ್ದಾರೆ ಹೊರತು ರಸ್ತೆ ಸಂಪರ್ಕ ಸರಿಪಡಿಸುವ ಮನಸ್ಸು ಮಾಡ್ತಿಲ್ಲ ಅನ್ನೋದು ಗ್ರಾಮಸ್ಥರ ಬೇಸರ ತಂದಿದೆ. ದಿನಾಲು ಇದೇ ಮಾರ್ಗದ ಮೂಲಕ ಶಾಲೆಗೆ ತೆರಳುವ ಶಾಲಾ ಮಕ್ಕಳು ಮತ್ತು ಸಾರ್ವಜನಿಕರು ತಮ್ಮ ದೈನಂದಿನ ಕೆಲಸಕ್ಕೆ ಹೋಗುವುದು ಅನಿವಾರ್ಯ ಪರಿಸ್ಥಿತಿ ಎದುರಾಗಿದೆ. ಶಾಲಾ ಮಕ್ಕಳಾಗಳಿಗಾಗಲೀ, ಸಾರ್ವಜನಿಕರಿಗಾಗಲಿ ಅನಾಹುತಕ್ಕೆ ಈಡಾಗುವ ಮೊದಲೇ ಎಚ್ಚೆತ್ತುಕೊಂಡು ಜನಪ್ರತಿನಿಧಿಗಳು ಮತ್ತು ಸಂಬಂಧಿಸಿದ ಅಧಿಕಾರಿಗಳು ಆದಷ್ಟು ಬೇಗ ರಸ್ತೆ ಸಂಪರ್ಕ ಕಲ್ಪಿಸುವ ಕೆಲಸ ಮಾಡುವ ಮೂಲಕ ಶಾಲಾ ಮಕ್ಕಳಿಗೆ ಮತ್ತು ಸಾರ್ವಜನಿಕರಿಗೆ ಓಡಾಡಲು ಅನುಕೂಲ ಮಾಡಿಕೊಡಬೇಕು ಎಂದು ಗ್ರಾಮಸ್ಥರ ಒತ್ತಾಯಿಸೆಯಾಗಿದೆ. ಒಂದು ವೇಳೆ ನಮ್ಮ ಮಕ್ಕಳು ಅಥವಾ ಗ್ರಾಮಸ್ಥರ ನೋವು ಅರಿಯದೆ, ಕಾಲಹರಣ ಮಾಡುತ್ತಾ ಹೋದರೆ ಮುಂದಿನ ದಿನಗಳಲ್ಲಿ ಬ್ರಿಡ್ಜ್ ಕಂ. ಬ್ಯಾರೇಜ್ ಸ್ಥಳದಲ್ಲೇ ಅಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಳ್ಳಬೇಕಾಗುತ್ತದೆ ಎಂದು ಗ್ರಾಮದ ಮುಖಂಡರು ಸಂಜೆವಾಣಿ ಪ್ರತಿನಿಧಿಗೆ ತಿಳಿಸಿದರು.
ಈಗಾಗಲೇ ಸ್ಥಳಕ್ಕೆ ಭೇಟಿ ನೀಡಿ ಇಲಾಖೆ ಅಧಿಕಾರಿಗಳಿಗೆ ರಸ್ತೆ ದುರಸ್ತಿಗೆ ಮಾಡಲು ಆದೇಶ ಮಾಡಿರುವೆ. ಅಧಿಕಾರಿಗಳು ಸಹ ಎರಡ್ಮೂರು ಬಾರಿ ಬ್ರಿಡ್ಜ್ ಬೇಟಿ ನೀಡಿ ರಸ್ತೆ ಕಾಮಗಾರಿ ಪ್ರಾರಂಭಿಸಲು ಸಿದ್ದತೆ ನಡೆಸಿದ್ದರು. ಆದರೆ, ಪ್ರವಾಹದಿಂದ ಜಮೀನು ಕಳೆದುಕೊಂಡ ರೈತರು ರಸ್ತೆ ಕಾಮಗಾರಿ ಮಾಡಲು ಬಿಡುವುದಿಲ್ಲ. ನಮಗೆ ಸರ್ಕಾರದ ವತಿಯಿಂದ ಪರಿಹಾರ ಕೊಡಿಸಿದ ಮೇಲೆ ರಸ್ತೆ ಕೆಲಸ ಪ್ರಾರಂಭ ಮಾಡಿ ಎಂದು ಹೇಳುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇನ್ನೊಮ್ಮೆ ನಾನೆ ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿ ರೈತರಿಗೆ ಅನ್ಯಾಯವಾಗದಂತೆ ಸರ್ಕಾರದ ವತಿಯಿಂದ ಏನ್ ಸಿಗಬೇಕಾಗಿದೆ ಪರಿಹಾರ ಕೊಡಿಸುವ ಜವಾಬ್ದಾರಿ ನಮ್ಮದು ಎಂದು ಅವರಿಗೆ ಮನವೊಲಿಸಿ ರಸ್ತೆ ಸಂಪರ್ಕ ಕೆಲಸ ಮಾಡಲು ಅವಕಾಶ ಮಾಡಿಕೊಡಿ ಎಂದು ಗ್ರಾಮಸ್ಥರಿಗೆ ಮನವೊಲಿಸಿ ಕೆಲಸ ಪ್ರಾರಂಭ ಮಾಡಿಸುತ್ತೇನೆ.
-ಎಂ.ವೈ.ಪಾಟೀಲ
ಶಾಸಕರು, ಅಫಜಲಪುರ.
ಪ್ರವಾಹ ಇಳಿಮುಖದ ಆದಮೇಲೆ ಸ್ಥಳಕ್ಕೆ ಭೇಟಿ ನೀಡಿ ಕ್ರಿಯಾಯೋಜನೆ ರೂಪಿಸಿ ಸುಮಾರು 20 ಲಕ್ಷ ರೂಪಾಯಿ ಕೆಬಿಜಿಎನ್‍ಎಲ್ ಇಲಾಖೆಯ ವತಿಯಿಂದ ರಸ್ತೆ ದುರಸ್ತಿ ಕಾಮಗಾರಿ ಮಾಡಲು ಕೈಗೆತ್ತಿಕೊಳ್ಳು ಕ್ರಮ ಜರುಗಿಸಲಾಗಿದೆ. ಒಂದು ವಾರದಲ್ಲಿ ಕಾಮಗಾರಿ ಟೆಂಡರ್ ಕರೆಯುವ ಮೂಲಕ ಆದಷ್ಟು ಬೇಗ ರಸ್ತೆ ಕಾಮಗಾರಿ ಪ್ರಾರಂಭಿಸಲಾಗುವುದು. ಪ್ರವಾಹದಿಂದ ಜಮೀನು ಹಾಳಾಗಿರುವ ರೈತರ ಜಮೀನನ್ನು ಭೂಸ್ವಾಧೀನ ಪಡಿಸುಕೊಳ್ಳುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ. ಯಾವುದೇ ರೀತಿಯ ಜಮೀನು ಕಳೆದುಕೊಂಡ ರೈತರಿಗೆ ಅನ್ಯಾಯವಾಗುವುದಿಲ್ಲ.
- ಯು.ಪಿ.ಸೋನಾವಣೆ
ಪ್ರಭಾರಿ ಕಾರ್ಯಪಾಲಕ ಅಭಿಯಂತರರು, ಕೆಬಿಜಿಎನ್ ಎಲ್ ಇಲಾಖೆ, ರಾಂಪೂರ.





























