Home ಜಿಲ್ಲೆ ಬೀದರ್ ತಾಲ್ಲೂಕಿನಾದ್ಯಂತ ಕೇಂದ್ರ ಜಲಶಕ್ತಿ ತಂಡದ ಭೇಟಿ: ವಿವಿಧ ಕಾಮಗಾರಿಗಳ ತಪಾಸಣೆ

ಬೀದರ್ ತಾಲ್ಲೂಕಿನಾದ್ಯಂತ ಕೇಂದ್ರ ಜಲಶಕ್ತಿ ತಂಡದ ಭೇಟಿ: ವಿವಿಧ ಕಾಮಗಾರಿಗಳ ತಪಾಸಣೆ

ಬೀದರ್:ಮಾ.16: ಜಿಲ್ಲೆಯಲ್ಲಿ ಜಲ ಸಂರಕ್ಷಣೆ ಮತ್ತು ಮಳೆನೀರು ಕೊಯ್ಲು ಯೋಜನೆಗಳ ಅನುಷ್ಠಾನವನ್ನು ಪರಿಶೀಲಿಸಲು ಕೇಂದ್ರ ಸರ್ಕಾರದ ಜಲಶಕ್ತಿ ಸಚಿವಾಲಯದ ಉನ್ನತ ಮಟ್ಟದ ಅಧಿಕಾರಿಗಳ ತಂಡ ಶುಕ್ರವಾರ ಬೀದರ್ ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿತು.

ಸಚಿವಾಲಯದ ಅಧಿಕಾರಿಗಳಾದ ಆದಿತ್ಯ ಮತ್ತು ಶಿವಾನಿ ಅವರನ್ನೊಳಗೊಂಡ ತಂಡವು, ಬೀದರ್ ತಾಲ್ಲೂಕಿನ ಮಲ್ಕಾಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಶಹಪುರ್ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಂಚರಿಸಿತು. ‘ಜಲ ಸಿಂಚನ, ಜಲ ಭಾಗಿದಾರ’ ಯೋಜನೆಯಡಿ ಕೈಗೊಳ್ಳಲಾದ ಕಾಮಗಾರಿಗಳ ಗುಣಮಟ್ಟವನ್ನು ಅಧಿಕಾರಿಗಳು ಖುದ್ದಾಗಿ ಪರಿಶೀಲಿಸಿದರು.

ಶಹಪುರ್ ಗ್ರಾಮದಲ್ಲಿ ನಿರ್ಮಿಸಲಾದ ಚೆಕ್ ಡ್ಯಾಂಗಳು, ಮರುಪೂರಣ ಘಟಕಗಳು ಮತ್ತು ರೈತರು ತಮ್ಮ ಹೊಲಗಳಲ್ಲಿ ವೈಯಕ್ತಿಕವಾಗಿ ಮಾಡಿಕೊಂಡಿರುವ ಜಲ ಸಂರಕ್ಷಣಾ ಘಟಕಗಳನ್ನು ವೀಕ್ಷಿಸಿ, ಅವುಗಳ ತಾಂತ್ರಿಕ ಅಂಶಗಳ ಬಗ್ಗೆ ಮಾಹಿತಿ ಪಡೆದರು.

ಕಾಮಗಾರಿಗಳಿಂದ ಆ ಭಾಗದ ತೆರೆದ ಬಾವಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದೆಯೇ? ಮತ್ತು ಕೃಷಿಗೆ ಈ ಯೋಜನೆಗಳು ಎಷ್ಟು ಪೂರಕವಾಗಿವೆ ಎಂಬುದನ್ನು ಅಲ್ಲಿನ ರೈತರು ಮತ್ತು ಗ್ರಾಮಸ್ಥರಿಂದ ಕೇಳಿ ತಿಳಿದುಕೊಂಡರು.

ಪರಿಶೀಲನೆಯ ವೇಳೆ ಮಾತನಾಡಿದ ಅಧಿಕಾರಿಗಳು, “ಗ್ರಾಮೀಣ ಭಾಗದ ಸುಸ್ಥಿರ ಅಭಿವೃದ್ಧಿಗೆ ಜಲಮೂಲಗಳ ಸಂರಕ್ಷಣೆ ಅನಿವಾರ್ಯ. ಪ್ರತಿಯೊಂದು ಹನಿ ಮಳೆನೀರನ್ನು ಭೂಮಿಗೆ ಇಂಗಿಸುವ ಮೂಲಕ ಅಂತರ್ಜಲ ಮಟ್ಟವನ್ನು ಕಾಪಾಡಿಕೊಳ್ಳಬೇಕು. ಸರ್ಕಾರಿ ಯೋಜನೆಗಳ ಜೊತೆಗೆ ಸಾರ್ವಜನಿಕರ ಸಹಭಾಗಿತ್ವವಿದ್ದರೆ ಮಾತ್ರ ಶಾಶ್ವತ ಪರಿಹಾರ ಸಾಧ್ಯ,” ಎಂದು ತಿಳಿಸಿದರು.
ತಾಂತ್ರಿಕ ತಂಡದ ಉಪಸ್ಥಿತಿ

ಈ ಭೇಟಿಯ ಸಂದರ್ಭದಲ್ಲಿ ತಾಲೂಕ್ ವಲಯ ಅರಣ್ಯ ಅಧಿಕಾರಿಗಳಾದ ಶಿವಕುಮಾರ ರಾಥೋಡ್ ನರೇಗಾ ಸಾಯಕ್ ನಿರ್ದೇಶಕರು ಸುದೇಶ್ ಕುಮಾರ್ ಕೊಡೆ,ನರೇಗಾ ಸಿಬ್ಬಂದಿಗಳ ದೀಪಕ್ ಕಡ್ಡಿಮನಿ,ವಿಷ್ಣು ಕುಲಕರ್ಣಿ,ರವಿ,ಸತ್ಯ ಜೀತ್ ನೀಡೊಡಾಕರ, ಮತ್ತು ತಾಂತ್ರಿಕ ಸಹಾಯಕರು ಉಪಸ್ಥಿತರಿದ್ದು, ಕಾಮಗಾರಿಗಳ ಪ್ರಗತಿಯ ವರದಿಯನ್ನು ಅಧಿಕಾರಿಗಳಿಗೆ ಸಲ್ಲಿಸಿದರು.