
ಎಚ್‌ಡಿಕೆ ಕಿಡಿ
ಮೈಸೂರು:ಫೆ. ೮ – ರಾಜ್ಯ ಸರ್ಕಾರದ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಕೇಂದ್ರ ಬಜೆಟ್ ಬಗ್ಗೆ ಟೀಕೆ ಮಾಡಲಾಗುತ್ತಿದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೇಂದ್ರದ ಬಜೆಟ್ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಕುಚಿತ ಭಾವನೆ ತೋರಿ ಲಘುವಾಗಿ ಮಾತನಾಡಿದ್ದಾರೆ ಖಾಲಿ ಚೊಂಬು ಎಂದೆಲ್ಲಾ ಟೀಕಿಸಿದ್ದಾರೆ ಖಾಲಿ ಚೊಂಬಿನ ಕ್ರೆಡಿಟ್ ರಾಜ್ಯ ಸರ್ಕಾರಕ್ಕೆ ಹೋಗಬೇಕು ಕಳೆದ ಎರಡು ವರ್ಷಗಳಿಂದ ಖಾಲಿ ಚೊಂಬನ್ನು ರಾಜ್ಯ ಸರ್ಕಾರ ಜನತೆಗೆ ಕೊಡುತ್ತಿದೆ ಎಂದು ವಾಗ್ದಾಳಿ ನಡೆಸಿದರು
ಮೈಸೂರಿನಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಮಂಡ್ಯಗೆ ಏನ್ ತಂದರು? ರಾಜ್ಯಕ್ಕೆ ಏನು ತಂದ್ರು ಅಂತಾ ಪ್ರತಿ ನಿತ್ಯ ಮಂಡ್ಯ ಶಾಸಕರು ಸಣ್ಣತನದಲ್ಲಿ ಪ್ರಶ್ನೆ ಮಾಡ್ತಿದ್ದಾರೆ. ಮಂಡ್ಯ ಕಾಂಗ್ರೆಸ್ ಶಾಸಕರ ಪ್ರಶ್ನೆಗಳಿಗೆ ಕೇಂದ್ರ ಬಜೆಟ್‌ನಲ್ಲಿ ಉತ್ತರವಿದೆ.
ಆಟೋಮೇಟಿವ್ ರಿಸರ್ಚ್ ಇಂಡಿಯಾ ಸಂಸ್ಥೆಯ ಘಟಕ ತೆರೆಯಲು ೧೦೦ ಎಕರೆ ಜಾಗವನ್ನು ಮಂಡ್ಯದಲ್ಲೇ ಕೊಡಲು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದೇನೆ. ಆಟೋಮೊಬೈಲ್ ಇಂಡಸ್ಟ್ರಿ ಸ್ಥಾಪನೆಗೆ ಕೇಂದ್ರ ಸರಕಾರ ಬದ್ಧವಾಗಿದೆ. ಇದಕ್ಕಾಗಿ ಭೂಮಿ ಕೊಡಲು ಸಿಎಂಗೆ ನಾನೇ ಪತ್ರ ಬರೆದಿದ್ದೇನೆ. ನಾನು ನಾಟಕವಾಡಲು ಪತ್ರ ಬರೆದಿಲ್ಲ. ನಾಟಕವಾಡಲು ಪ್ರಧಾನಿಗಳು ನನಗೆ ಈ ಸ್ಥಾನ ಕೊಟ್ಟಿಲ್ಲ. ರಾಜ್ಯದ ಕೈಗಾರಿಕಾ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ದುಡಿಯುತ್ತಿದ್ದೇನೆ. ಕೇಂದ್ರ ಬಜೆಟ್ ನಲ್ಲಿ ರಾಜ್ಯಕ್ಕೆ ಯಾವ ಅನ್ಯಾಯವೂ ಆಗಿಲ್ಲ ಎಂದು ಕಾಂಗ್ರೆಸ್ ನಾಯಕರ ಆರೋಪವನ್ನು ತಳ್ಳಿಹಾಕಿದರು.
ಕೇಂದ್ರ ಸರ್ಕಾರ ಕೊಟ್ಟ ದುಡ್ಡನ್ನು ರಾಜ್ಯ ಸರ್ಕಾರ ಸರಿಯಾಗಿ ಬಳಸಿಕೊಂಡಿಲ್ಲ. ೧೬ನೇ ಹಣಕಾಸು ಆಯೋಗದಿಂದ ರಾಜ್ಯಕ್ಕೆ ಬರಬೇಕಿದ್ದದ್ದು ೫೦ ಸಾವಿರ ಕೋಟಿ ರೂ. ಈಗ ಅದನ್ನು ೬೩ ಸಾವಿರ ಕೋಟಿ ರೂ ಗೆ ಏರಿಸಲಾಗಿದೆ. ವಿಶ್ವೇಶ್ವರಯ್ಯ ಉಕ್ಕು ಕಾರ್ಖಾನೆ ಪುನಶ್ಚೇತನಕ್ಕೆ ೪ ರಿಂದ ೫ ಸಾವಿರ ಕೋಟಿ ರೂ ಕೊಡುತ್ತಿದ್ದೇವೆ. ಎಚ್.ಎಂ.ಟಿ. ಕಂಪನಿ ಪುನರ್ ಆರಂಭಕ್ಕೆ ನಾನು ಬದ್ಧವಾಗಿದ್ದೇನೆ. ಅರಣ್ಯ ಇಲಾಖೆಯವರು ಎಚ್.ಎಂ.ಟಿ. ಕಂಪನಿ ಜಾಗ ನಮ್ಮದು ಎಂದು ತಕರಾರು ತೆಗೆದುಕೊಂಡು ಕೂತಿದ್ದಾರೆ. ನಾನು ಏನು ಮಾಡಲಿ. ರಾಜ್ಯದ ಯಾರಾದರೂ ಒಬ್ಬರು ಮಂತ್ರಿ ಬಂದು ನನ್ನ ಬಳಿ ರಾಜ್ಯಕ್ಕೆ ಇಂತಹ ಪ್ರಾಜೆಕ್ಟ್ ತರಿಸಿ ಕೊಡಿ ಎಂದು ಕೇಳಿದ್ದಿರಾ? ಮೆಟ್ರೋ ಬೆಲೆ ಏರಿಕೆಗೆ ಕೇಂದ್ರ ಹೊಣೆ ಎಂದು ರಾಜ್ಯ ಸರ್ಕಾರ ಸುಳ್ಳು ಹೇಳುತ್ತಿದೆ. ಕೇಂದ್ರ ಸರಕಾರದ ಜೊತೆ ರಾಜ್ಯ ಸರಕಾರ ಒಳ್ಳೆ ಸಂಬಂಧ ಇಟ್ಟು ಕೊಳ್ಳಲಿ. ಎಲ್ಲದಕ್ಕೂ ಕೇಂದ್ರ ಸರ್ಕಾರದ ಕಡೆ ಬೆರಳು ತೋರಿಸುವ ಕೆಲಸ ಬಿಡಬೇಕು. ಪ್ರಧಾನ ಮಂತ್ರಿಗಳನ್ನು ಬಾಯಿಗೆ ಬಂದಂತೆ ಬೈಯ್ಯೋದು. ಅಮೇಲೆ ಪತ್ರ ಕಳಿಸೋದು. ಈ ವರ್ತನೆಯನ್ನು ರಾಜ್ಯ ಸರಕಾರ ಬದಲಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ನನ್ನ ಜೊತೆ ರಾಜ್ಯ ಸರ್ಕಾರಕ್ಕೆ ಮಾತನಾಡಲು ego ಸಮಸ್ಯೆ ಇರಬಹುದು ಅಥವಾ ಅಸೂಯೆ ಭಾವನೆ ಇರಬಹುದು. ಜೆಡಿಎಸ್ ಮುಳುಗಿ ಹೋಯ್ತು ಎಂದ ಕೊಂಡವರಿಗೆ ಜೆಡಿಎಸ್‌ಗೆ ಇಷ್ಟು ದೊಡ್ಡ ಸ್ಥಾನ ಸಿಕ್ಕಿದೆ.
ಈ ಕಾರಣಕ್ಕೆ ಅಸೂಯೆ ಇರಬಹುದು ನಮ್ಮ ಬಗ್ಗೆ. ಈ ಸಿಎಂ ಗೆ ಜಾಣ ಕಿವುಡು ಇದೆ. ಕಾಂಗ್ರೆಸ್ ರಾಜ್ಯವನ್ನು ದಿವಾಳಿ ಎಬ್ಬಿಸಲು ಅಧಿಕಾರಕ್ಕೆ ಬಂದಿದೆ. ದಾಖಲೆ ಬಜೆಟ್ ಮಂಡಿಸಿ ರಾಜ್ಯವನ್ನು ಸಿಎಂ ದಿವಾಳಿ ಮಾಡುತ್ತಾರೆ. ಇವತ್ತಿನ ರಾಜ್ಯದ ಪರಿಸ್ಥಿತಿ ಗಮನಿಸಿದರೆ ನಾನು ಇಲ್ಲೇ ಇರಬೇಕಿತ್ತು ಅನ್ನಿಸುತ್ತಿದೆ. ನಾನು ವಾಪಸ್ ಇಲ್ಲಿಗೆ ಬರುವ ಟೈಂ ಬಂದಾಗ ಬರ್ತಿನಿ. ಕುಟುಂಬ ರಾಜಕಾರಣದ ವಿಚಾರದಲ್ಲಿ ನನ್ನ ಕುಟುಂಬಕ್ಕೆ ಸಿಕ್ಕಷ್ಟು ಪ್ರಚಾರ ಯಾರಿಗೂ ಸಿಗಲಿಲ್ಲ. ಜೆಡಿಎಸ್ ನಮ್ಮ ಕುಟುಂಬದವರನ್ನು ಬಿಟ್ಟು ಬೇರೆ ಯಾರು ಬೇಕಾದರೂ ಅಧ್ಯಕ್ಷರಾಗಲಿ ಎಂದು ಹೇಳಿದ್ದೇನೆ. ಆದರೆ ಯಾರು ಸಿದ್ಧರಿಲ್ಲ.
ನಾನು ಏನೂ ಮಾಡಲಿ. ಜೆಡಿಎಸ್ ಅನ್ನು ಸಿಎಂ ಟಾರ್ಗೆಟ್ ಮಾಡಿದ್ದಾರೆ. ಕುಮಾರಸ್ವಾಮಿ, ಎಚ್.ಡಿ. ದೇವೇಗೌಡರನ್ನು ಯಾವ ರೀತಿ ಮುಗಿಸಬೇಕು. ಯಾವ ರೀತಿ ಇವರ ಚಾರಿತ್ರ್ಯ ಹರಣ ಮಾಡಬೇಕು ಎಂದು ಸಿಎಂ ಬಹಳ ಪ್ರಯತ್ನ ಮಾಡುತ್ತಿದ್ದಾರೆ. ಕುಟುಂಬದ ಒಳಗೆ ನಡೆದ ಒಂದು ಪ್ರಕರಣ ವಿಚಾರದಲ್ಲಿ ಎಚ್.ಡಿ. ದೇವೇಗೌಡರನ್ನು ಮಾನಸಿಕವಾಗಿ ಕುಗ್ಗಿಸುವ ಬಹಳ ಪ್ರಯತ್ನ ಆಗಿದೆ. ದೇವೇಗೌಡರ ಗರಡಿಯಲ್ಲೆ ಬೆಳೆದ ಸಿದ್ದರಾಮಯ್ಯ ಈಗ ದೇವೇಗೌಡ ಕುಟುಂಬಕ್ಕೆ ಕೊಡುತ್ತಿರುವ ಕೊಡುಗೆ ಒಂದಾ ಎರಡಾ? ವೀರಪ್ಪನ್ ಪ್ರಕರಣದಲ್ಲಿ ಪೊಲೀಸರಿಗೆ ಬಹುಮಾನ ರೂಪದಲ್ಲಿ ಹಣ ನೀಡಲಾಗಿತ್ತು. ಅದು ಬಿಟ್ಟರೆ ಹಾಸನದ ಕೇಸ್ ವಿಚಾರದಲ್ಲೇ ಸರಕಾರ ಪೊಲೀಸರಿಗೆ ೩೦ ಲಕ್ಷ ರೂ ಬಹುಮಾನವಾಗಿ ಕೊಟ್ಟಿದೆ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.


























