ನಾಳೆ ಕೇಂದ್ರದ ಮುಂಗಡ ಪತ್ರ ಮಂಡನೆ

೯ನೇ ಬಾರಿ ಬಜೆಟ್ ಮಂಡಿಸಲಿರುವ ನಿರ್ಮಲಾ

ಬೆಂಗಳೂರು, ಜ. ೩೧- ನಾಳೆ ಕೇಂದ್ರ ಸರ್ಕಾರದ ಬಜೆಟ್ ಮಂಡನೆಯಾಗಲಿದ್ದು, ನಾಳಿನ ಕೇಂದ್ರ ಬಜೆಟ್‌ನಲ್ಲಿ ಭಾರತದ ಆರ್ಥಿಕ ಅಭಿವೃದ್ಧಿಗೆ ನೀಲ ನಕ್ಷೆಯಾಗಲಿದೆಯೇ ಎಂಬ ಕುತೂಹಲವನ್ನು ಹುಟ್ಟು ಹಾಕಿದೆ.


ಕೇಂದ್ರದ ಹಣಕಾಸು ಸಚಿವರಾಗಿ ನಿರ್ಮಲ ಸೀತರಾಮನ್ ಅವರು ನಾಳೆ ಕೇಂದ್ರ ಬಜೆಟ್ ಮಂಡಿಸಲಿದ್ದು, ಈ ಮೂಲಕ ಅವರು ಸತತವಾಗಿ ಕೇಂದ್ರ ಹಣಕಾಸು ಸಚಿವರಾಗಿ ೯ನೇ ಬಾರಿ ಬಜೆಟ್ ಮಂಡಿಸಿದ ದಾಖಲೆ ನಿರ್ಮಿಸಲಿದ್ದಾರೆ.


ವಿಕಸಿತ ಭಾರತದ ಗುರಿಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಬಜೆಟ್‌ನಲ್ಲಿ ಉತ್ಪಾದನಾ ವಲಯಕ್ಕೆ ಸಂಬಂಧಿಸಿದಂತೆ ಮಹತ್ವದ ಘೋಷಣೆಗಳಾಗುವ ಸಾಧ್ಯತೆ ಇದ್ದು, ದೇಶದಲ್ಲಿ ಕೈಗಾರಿಕಾ ಕಾರಿಡಾರ್‌ಗಳ ಅಭಿವೃದ್ಧಿಗೂ ಸಂಬಂಧಿಸಿದಂತೆ ಘೋಷಣೆಗಳಾಗಲಿವೆ ಎಂದು ಹೇಳಲಾಗುತ್ತಿದೆ.


ನಾಳಿನ ಕೇಂದ್ರ ಬಜೆಟ್ ಮಧ್ಯಮ ವರ್ಗದವರಲ್ಲೂ ಹಲವಾರು ನಿರೀಕ್ಷೆಗಳನ್ನು ಮೂಡಿಸಿದ್ದು, ಆದಾಯ ತೆರಿಗೆಯ ಮಿತಿ ಹೆಚ್ಚಳ ಘೋಷಣೆ ಸಾಧ್ಯತೆಗಳಿವೆ.
ವೈಯುಕ್ತಿಕ ಆದಾಯ ತೆರಿಗೆಯ ಮಿತಿಯನ್ನು ೧೨ ಲಕ್ಷದಿಂದ ೧೫ ಲಕ್ಷಕ್ಕೆ ಏರಿಕೆ ಮಾಡುವ ಸಾಧ್ಯತೆ ಇದ್ದು, ಇದು ವೇತನದಾರರಿಗೆ ಖುಷಿಯ ಸಂಗತಿಯಾಗಲಿದೆ. ಇದರ ಜತೆಗೆ ಆದಾಯ ತೆರಿಗೆಯ ಸ್ಲ್ಯಾಬ್‌ಗಳಲ್ಲೂ ಪರಿಷ್ಕರಣೆಯಾಗುವ ಸಾಧ್ಯತೆಗಳಿದ್ದು, ಆದಾಯ ತೆರಿಗೆಯ ಸ್ಲ್ಯಾಬ್‌ಗಳ ಪರಿಷ್ಕರಣೆಯಿಂದ ಜನರ ಖರೀದಿ ಶಕ್ತಿ ಹೆಚ್ಚಳವಾಗಿ ಆರ್ಥಿಕತೆ ಬೆಳವಣಿಗೆಗೂ ಕಾರಣವಾಗುತ್ತದೆ ಎಂದು ಅಂದಾಜಿಸಲಾಗಿದೆ.


ನಾಳಿನ ಕೇಂದ್ರ ಬಜೆಟ್ ದೇಶದ ಬೆನ್ನೆಲುಬು ರೈತರ ಪರವಾದ ಹಲವು ಯೋಜನೆಗಳು ಘೋಷಣೆಯಾಗುವ ಸಾಧ್ಯತೆಯಿದ್ದು, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ಈಗ ನೀಡುತ್ತಿರುವ ೬ ಸಾವಿರ ರೂ.ಗಳನ್ನು ೯ ಸಾವಿರ ರೂ.ಗಳಿಗೆ ಏರಿಸುವ ಸಾಧ್ಯತೆಯೂ ಇದೆ.
ಮೂಲಭೂತ ಸೌಕರ್ಯಕ್ಕೆ ಒತ್ತು ನೀಡಿ ಕೈಗಾರಿಕಾ ಅಭಿವೃದ್ಧಿಗೂ ಗಮನ ನೀಡಿ, ಆದ್ಯತಾ ವಲಯಗಳಾದ ಆರೋಗ್ಯ, ಶಿಕ್ಷಣ ಮತ್ತಿತರ ಕ್ಷೇತ್ರಗಳಿಗೂ ನಾಳಿನ ಕೇಂದ್ರ ಬಜೆಟ್‌ನಲ್ಲಿ ಭರಪೂರ ಭರವಸೆಗಳಿರುತ್ತವೆ ಎಂದು ಹೇಳಲಾಗುತ್ತಿದೆ.


ಆಯುಷ್ಮಾನ್ ಭಾರತ ಯೋಜನೆಯನ್ನು ೬೦ ವರ್ಷ ಮೇಲ್ಪಟ್ಟ ಎಲ್ಲಾ ಹಿರಿಯ ನಾಗರಿಕರಿಗೂ ವಿಸ್ತರಿಸುವ ಸಾಧ್ಯತೆ ಇದೆ. ಪ್ರಸ್ತುತ ೭೦ ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಆಯುಷ್ಮಾನ್ ಯೋಜನೆಗೆ ಅರ್ಹರಾಗಿದ್ದಾರೆ.


ರೈಲ್ವೆಗೆ ಹೆಚ್ಚಿನ ಹಣ


ದೇಶದಲ್ಲಿ ರೈಲ್ವೆ ಅಭಿವೃದ್ಧಿಗೆ ನಾಳಿನ ಕೇಂದ್ರ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ಸಿಗುವ ಸಾಧ್ಯತೆಗಳಿದ್ದು, ಕಳೆದ ವರ್ಷದ ಬಜೆಟ್‌ನಲ್ಲಿ ರೈಲ್ವೆ ಅಭಿವೃದ್ಧಿಗೆ ೨.೬೫ ಲಕ್ಷ ಕೋಟಿ ಹಂಚಿಕೆ ಮಾಡಲಾಗಿತ್ತು. ಈ ಬಜೆಟ್‌ನಲ್ಲಿ ರೈಲ್ವೆ ಅಭಿವೃದ್ಧಿಗೆ ೨.೮೫ ಲಕ್ಷ ಕೋಟಿ ಹಂಚಿಕೆ ಮಾಡುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.


ದೇಶದಲ್ಲಿ ಈಗಾಗಲೇ ಜನರ ಮನಗೆದ್ದಿರುವ ಅಮೃತ್ ಭಾರತ್ ಮತ್ತು ವಂದೇ ಭಾರತ್ ರೈಲುಗಳ ಸಂಖ್ಯೆಯನ್ನು ಹೆಚ್ಚು ಮಾಡುವ ಘೋಷಣೆಯನ್ನು ಬಜೆಟ್‌ನಲ್ಲಿ ನಿರೀಕ್ಷಿಸಲಾಗಿದ್ದು, ಈ ಬಜೆಟ್‌ನಲ್ಲಿ ಕೇಂದ್ರದ ವಿತ್ತ ಸಚಿವೆ ನಿರ್ಮಲ ಸೀತರಾಮನ್ ೩೦೦ಕ್ಕೂ ಅಧಿಕ ಹೊಸ ಅಮೃತ್ ಭಾರತ್ ರೈಲುಗಳನ್ನು ಘೋಷಿಸಬಹುದು.ಭಾರತವನ್ನು ೨೦೪೭ರ ವೇಳೆಗೆ ಸಂಪೂರ್ಣ ಅಭಿವೃದ್ಧಿಗೊಳಿಸುವ ವಿಕಸಿತ ಭಾರತ್ ಕಲ್ಪನೆಗೆ ಪೂರಕವಾಗಿ ನಾಳಿನ ಕೇಂದ್ರ ಬಜೆಟ್‌ನಲ್ಲಿ ಹಲವು ಹೊಸ ಜನಪರ ಕಾರ್ಯಕ್ರಮಗಳನ್ನು ಕೇಂದ್ರ ಸರ್ಕಾರ ಘೋಷಿಸುವ ಸಾಧ್ಯತೆ ಹೆಚ್ಚಿವೆ.

ಕೇಂದ್ರದ ಮುಂದೆ ರಾಜ್ಯದ ಬೇಡಿಕೆಗಳ ಮಹಾಪೂರ

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ೨೦೨೬-೨೭ರ ಆಯವ್ಯಯ ಮಂಡಿಸಲಿದ್ದಾರೆ. ರಾಜ್ಯ ಸರ್ಕಾರವು ಈ ಬಾರಿಯೂ ಹತ್ತು ಹಲವು ಬೇಡಿಕೆಯ ಬಜೆಟ್ ಬೇಡಿಕೆ ಪಟ್ಟಿಯನ್ನು ಕೇಂದ್ರ ಸರ್ಕಾರದ ಮುಂದಿಟ್ಟಿದೆ.
ಈಗಾಗಲೇ ಬಜೆಟ್ ಪೂರ್ವಬಾವಿ ಸಭೆಯಲ್ಲಿ ರಾಜ್ಯ ಸರ್ಕಾರ ರಾಜ್ಯದ ಅಧಿಕೃತ ಬೇಡಿಕೆಯ ಪಟ್ಟಿಯನ್ನು ಕೇಂದ್ರ ಹಣಕಾಸು ಸಚಿವೆ ಮುಂದಿಟ್ಟಿದೆ. ಹೆಚ್ಚಿನ ಅನುದಾನ, ಬೆಂಗಳೂರು ಅಭಿವೃದ್ಧಿಗಾಗಿ ಅನುದಾನ ಸೇರಿ ಹಲವು ಪ್ರಮುಖ ಬೇಡಿಕೆಗಳನ್ನು ಕೇಂದ್ರದ ಮುಂದಿಡಲಾಗಿದೆ.

ಜಿಎಸ್??ಟಿ ಸರಳೀಕರಣದ ಬಳಿಕ ಕರ್ನಾಟಕದ ಜಿಎಸ್‌ಟಿ ಬೆಳವಣಿಗೆ ೧೨%ರಿಂದ ೫%ಕ್ಕೆ ಇಳಿಕೆಯಾಗಿದೆ. ಇದರಿಂದ ಈ ವರ್ಷ ಸುನಾರು ೫,೦೦೦ ಕೋಟಿ ರೂ. ಕೊರತೆಯಾಗಿದ್ದು, ವಾರ್ಷಿಕ ೯,೦೦೦ ಕೋಟಿ ರೂ. ಆದಾಯ ಕೊರತೆಯಾಗಲಿದೆ. ಕೇಂದ್ರ ಸರ್ಕಾರ ಪಾನ್ ಮಸಾಲ ಮೇಲಿನ ಸೆಸ್ ಮತ್ತು ತಂಬಾಕು ಮೇಲಿನ ಸುಂಕದ ಮೂಲಕ ತನ್ನ ನಷ್ಟವನ್ನು ಹೊಂದಿಸಿಕೊಂಡಿದೆ. ಆದರೆ, ರಾಜ್ಯಗಳಿಗೆ ಆ ಅವಕಾಶ ಇಲ್ಲದಾಗಿದೆ. ಹೀಗಾಗಿ, ರಾಜ್ಯಗಳಿಗೆ ಸದೃಢ ಆದಾಯ ರಕ್ಷಣೆ ವ್ಯವಸ್ಥೆ ಕಲ್ಪಿಸಬೇಕು. ಆದಾಯ ನಷ್ಟಕ್ಕೆ ಸಂಪೂರ್ಣ ಪರಿಹಾರ ನೀಡುವಂತೆ ರಾಜ್ಯ ಸರ್ಕಾರ ಮನವಿ ಮಾಡಿದೆ.

ತಂಬಾಕದ ಮೇಲೆ ವಿಧಿಸಲಾಗುವ ಸುಂಕ ಹಾಗೂ ಪಾನ್ ಮಸಾಲ ಮೇಲಿನ ಸೆಸ್‌ನ್ನು ೫೦:೫೦ ಅನುಪಾತದಲ್ಲಿ ಹಂಚಿ, ಒಕ್ಕೂಟ ಸಹಕಾರ ಮತ್ತು ವಿತ್ತೀಯ ಸಮಾನತೆಯನ್ನು ಮರುಸ್ಥಾಪಿಸಬೇಕು ಎಂದು ಮನವಿ ಮಾಡಲಾಗಿದೆ.

ಜಲಜೀವನ ಮಿಷನ್ ಯೋಜನೆಯ ಕೇಂದ್ರದ ಪಾಲಿನ ಬಾಕಿ ಅನುದಾನ ಬಿಡುಗಡೆ ಮಾಡಬೇಕು. ಕೇಂದ್ರ ಸರ್ಕಾರ ಈ ಯೋಜನೆಯಡಿ ಈವರೆಗೆ ೧೧,೭೮೬ ಕೋಟಿ ರೂ. ಹಣ ಬಿಡುಗಡೆ ಮಾಡಿದ್ದರೆ, ರಾಜ್ಯ ಸರ್ಕಾರ ೨೪,೫೯೮ ಕೋಟಿ ರೂ. ಹಣ ಬಿಡುಗಡೆ ಮಾಡಿದೆ. ಯೋಜನೆ ಅನುಷ್ಠಾನಕ್ಕೆ ಅಡ್ಡಿಯಾಗದಂತೆ ರಾಜ್ಯ ಸರ್ಕಾರ ಮುಂಗಡವಾಗಿ ಹೆಚ್ಚುವರಿ ೧೩,೦೦೪ ಕೋಟಿ ರೂ. ಬಿಡುಗಡೆ ಮಾಡಿದೆ. ಕೇಂದ್ರ ಸರ್ಕಾರ ಕೂಡಲೇ ಬಾಕಿ ಹಣ ಬಿಡುಗಡೆ ಮಾಡಬೇಕು ಎಂದು ಬೇಡಿಕೆ ಇಡಲಾಗಿದೆ.

ಬೇಡಿಕೆ ಆಧಾರಿತ ಮನರೇಗಾವನ್ನು ಅನುದಾನ ಹಂಚಿಕೆ ಆಧಾರಿತ ವಿ ಬಿಜಿ ರಾಮ್ ಜಿ ಕಾಯಿದೆಗೆ ಬದಲಾಯಿಸುವುದರಿಂದ ಪರಿಣಾಮಕಾರಿ ಉದ್ಯೋಗ ದಿನಗಳು ಕಡಿಮೆಯಾಗಿವೆ. ಇದರಿಂದಾಗಿ ೧೩ ಕೋಟಿ ಮಾನವ ದಿನಗಳ ಜೀವನೋಪಾಯ ಭದ್ರತೆಯನ್ನು ಒದಗಿಸುವುದನ್ನು ಮುಂದುವರೆಸಲು, ಕರ್ನಾಟಕಕ್ಕೆ ಸುಮಾರು ೨,೦೦೦ ಕೋಟಿ ರೂ.ಗಳು ಬೇಕಾಗುತ್ತದೆ. ಇದನ್ನು ಒದಗಿಸಲು ವಿತ್ತೀಯ ಅವಕಾಶವಿಲ್ಲ. ಅಲ್ಲದೆ, ವಿಬಿಜಿ ರಾಮ್ ಜಿ ಯೋಜನೆಯಲ್ಲಿ ರಾಜ್ಯಗಳು ಕೂಡ ಅನುದಾನ ಹಂಚಿಕೆ ಮಾಡಬೇಕಾಗಿದ್ದು, ರಾಜ್ಯದ ಹೊರೆಯನ್ನು ಇದು ಹೆಚ್ಚಿಸಿದೆ. ಆದ್ದರಿಂದ ಯೋಜನಾ ವಿನ್ಯಾಸವನ್ನು ಮರು ಪರಿಶೀಲಿಸಿ, ಬೇಡಿಕೆ ಆಧಾರಿತ ಉದ್ಯೋಗ ವ್ಯವಸ್ಥೆಯನ್ನು ಪುನಃಸ್ಥಾಪಿಸಿ, ಸಮರ್ಪಕ ಮತ್ತು ಮಿತಿರಹಿತ ಕೇಂದ್ರ ಅನುದಾನ ಒದಗಿಸುವಂತೆ ಒತ್ತಾಯಿಸಲಾಗಿದೆ.

ಅನೇಕ ಬೆಳೆಗಳಲ್ಲಿ ಕಡಿಮೆ ಖರೀದಿ ಮತ್ತು ಕೊಳೆಯುವಿಕೆಯಿಂದಾಗಿ ಕನಿಷ್ಠ ಬೆಂಬಲ ಬೆಲೆ (ಒSP) ಖರೀದಿ ಸಾಕಷ್ಟು ಪರಿಣಾಮಕಾರಿಯಾಗಿಲ್ಲ. ಮೆಕ್ಕೆಜೋಳ, ಸೋಯಾಬೀನ್, ಮಾವು, ಮೆಣಸಿನಕಾಯಿ, ಈರುಳ್ಳಿ, ಟೊಮೆಟೊ, ಅರಿಶಿನ ಮತ್ತು ಶುಂಠಿ ಸೇರಿದಂತೆ ೮ ಬೆಳೆಗಳಿಗೆ ಪಿಡಿಪಿಎಸ್ ಜಾರಿಗೆ ಕರ್ನಾಟಕವು ಪ್ರಸ್ತಾಪಿಸಿದೆ. ೨೦೨೬-೨೭ರಲ್ಲಿ ಸಮಯೋಚಿತ ಅನುಷ್ಠಾನಕ್ಕಾಗಿ ಪಿಎಂ ಆಶಾ ಅಡಿಯಲ್ಲಿ ೭೯೬ ಕೋಟಿ ರೂ. ಹೆಚ್ಚುವರಿ ಅನುದಾನ ನೀಡುವಂತೆ ಬೇಡಿಕೆ ಇಡಲಾಗಿದೆ.

ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಅಡುಗೆ ಸಿಬ್ಬಂದಿ ಮತ್ತು ಸಹಾಯಕಿಯರಿಗೆ ಕೇಂದ್ರ ಸರ್ಕಾರ ನೀಡುವ ಗೌರವಧನವು ಹಲವು ವರ್ಷಗಳಿಂದ ಹೆಚ್ಚಳವಾಗಿಲ್ಲ. ಆದ್ದರಿಂದ ಕೇಂದ್ರ ಪಾಲನ್ನು ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರಿಗೆ ತಿಂಗಳಿಗೆ ೮,೦೦೦ ರೂ., ಅಡುಗೆ ಸಿಬ್ಬಂದಿ ಮತ್ತು ಸಹಾಯಕಿಯರಿಗೆ ತಿಂಗಳಿಗೆ ೫,೦೦೦ ರೂ., ರಾಷ್ಟ್ರೀಯ ಸಾಮಾಜಿಕ ಭದ್ರತಾ ಕಾರ್ಯಕ್ರಮದ ವ್ಯಾಪ್ತಿಯನ್ನು ಒಟ್ಟು ಅರ್ಹ ಫಲಾನುಭವಿಗಳ ೫೦%ಕ್ಕೆ ವಿಸ್ತರಿಸಿ, ಪಿಂಚಣಿ ಮೊತ್ತವನ್ನು ಹೆಚ್ಚಿಸುವಂತೆ ಕೋರಲಾಗಿದೆ.

ರಾಷ್ಟ್ರೀಯ ಯೋಜನೆ ಎಂದು ಘೋಷಿಸಲು ಮತ್ತು ೨೦೨೩-೨೪ ಕೇಂದ್ರ ಆಯವ್ಯಯದಲ್ಲಿ ಘೋಷಿಸಿದಂತೆ ೫,೩೦೦ ಕೋಟಿ ರೂ. ಕೇಂದ್ರ ಸಹಾಯವನ್ನು ಬಿಡುಗಡೆ ಮಾಡಲು ವಿನಂತಿಸಲಾಗಿದೆ.

೧೫ನೇ ಹಣಕಾಸು ಆಯೋಗದ ಬಾಕಿ ಅನುದಾನ ಮತ್ತು ವಿಪತ್ತು ಪರಿಹಾರ ಮೊತ್ತಗಳನ್ನು ತ್ವರಿತವಾಗಿ ಬಿಡುಗಡೆ ಮಾಡುವಂತೆ ವಿನಂತಿಸಿದ್ದಾರೆ. ವಿಶೇಷ ಅನುದಾನ ೫,೪೯೫ ಕೋಟಿ ರೂ., ರಾಜ್ಯ ಕೇಂದ್ರಿತ ಅನುದಾನ ೬,೦೦೦ ಕೋಟಿ ರೂ., ೧೫ನೇ ಹಣಕಾಸು ಆಯೋಗದ ಅನುದಾನ ಕೊರತೆ ೪,೦೪೪ ಕೋಟಿ ರೂ. ಇದೆ ಎಂದು ತಿಳಿಸಲಾಗಿದೆ.

ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶವು ಕಡಿಮೆ ಅಂಕ ಹೊಂದಿದೆ. ಇದನ್ನು ಉತ್ತಮಗೊಳಿಸಲು ವಾರ್ಷಿಕ ೫,೦೦೦ ಕೋಟಿ ರೂ. ಅನುದಾನವನ್ನು ಹೆಚ್ಚುವರಿಯಾಗಿ ಒದಗಿಸುವಂತೆ ಕೇಂದ್ರ ಸರ್ಕಾರವನ್ನು ಕೋರಲಾಗಿದೆ.

ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ಅನುದಾನದ ಮನವಿ: ಬೆಂಗಳೂರು ಸಮಗ್ರ ಅಭಿವೃದ್ಧಿಗಾಗಿ ಸುಮಾರು ೧.೫ ಲಕ್ಷ ಕೋಟಿ ರೂ. ಅಗತ್ಯವಿದೆ. ಬೆಂಗಳೂರು ಮೂಲಸೌಕರ್ಯ ಅಭಿವೃದ್ಧಿಗಾಗಿ ಕನಿಷ್ಠ ೨೭,೭೯೩ ಕೋಟಿ ರೂ. ಅನುದಾನ ಹಂಚಿಕೆ ಮಾಡುವಂತೆ ಮನವಿ ಮಾಡಲಾಗಿದೆ.

ಮೆಟ್ರೋ ೨ನೇ ಹಂತದ ಯೋಜನೆ ಪೂರ್ಣಗೊಳಿಸುವ ಪರಿಷ್ಕೃತ ವೆಚ್ಚ ೨೬,೪೦೫ ಕೋಟಿ ರೂ.ಗಳಿಂದ ೪೦,೪೨೫ ಕೋಟಿ ರೂ.ವರೆಗೆ ಏರಿಕೆಯಾಗಿದ್ದು, ಈ ಪ್ರಸ್ತಾವನೆಗೆ ಒಪ್ಪಿಗೆ ನೀಡುವ ನಿರೀಕ್ಷೆ ಹೊಂದಲಾಗಿದೆ. ಬೆಂಗಳೂರಿನ ಸಂಚಾರ ದಟ್ಟಣೆ ನಿವಾರಣೆಗೆ ಟನಲ್ ರಸ್ತೆ ನಿರ್ಮಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಈ ಯೋಜನೆಗಾಗಿ ರಾಜ್ಯ ಸರ್ಕಾರದ ೧೯ ಸಾವಿರ ಕೋಟಿ ರೂ. ವೆಚ್ಚವಾಗಲಿದ್ದು, ಕೇಂದ್ರದ ಅನುದಾನದ ನಿರೀಕ್ಷೆಯಲ್ಲಿದೆ.

ಜೆ.ಪಿ.ನಗರದಿಂದ ಹೆಬ್ಬಾಳದವರೆಗೆ ಹಾಗೂ ಹೊಸಹಳ್ಳಿಯಿಂದ ಕಡಬಗೆರೆವರೆಗೂ ೪೫ ಕಿ.ಮೀ ಉದ್ದದ ಡಬಲ್ ಡೆಕ್ಕರ್ ಮೇಲ್ಸೇತುವೆ ಮಾರ್ಗಕ್ಕೆ ಹೆಚ್ಚುವರಿಯಾಗಿ ೮೯೧೬ ಕೋಟಿ ರೂ. ಅಗತ್ಯವಿದ್ದು, ಕೇಂದ್ರದ ಅನುದಾನದ ಬೇಡಿಕೆ ಇಟ್ಟಿದೆ. ಇನ್ನು ನಗರದ ಸಂಚಾರ ದಟ್ಟಣೆ ಇರುವ ೧೧ ಜಂಕ್ಷನ್‌ಗಳಲ್ಲಿ ೯೯.೫೦ ಕಿ.ಮೀ.ಗಳಷ್ಟು ದೂರ ೧೭ ಮೇಲ್ಸೇತುವೆ ನಿರ್ಮಾಣದ ಅಗತ್ಯವಿದೆ. ಇದಕ್ಕಾಗಿ ೧೨ ಸಾವಿರ ಕೋಟಿ ರೂ. ಹಣ ಬೇಕಾಗಿದ್ದು, ಕೇಂದ್ರದ ಅನುದಾನದ ನಿರೀಕ್ಷೆಯಲ್ಲಿದೆ. ಅದೇ ರೀತಿ ಪಿಆರ್??ಆರ್ ಹಾಗೂ ನೀರು ಸರಬರಾಜು ಯೋಜನೆಗೆ ಹೆಚ್ಚಿನ ಅನುದಾನ ನೀಡುವಂತೆ ಮನವಿ ಮಾಡಿದೆ.

ಕೇಂದ್ರದ ಬಜೆಟ್‌ನಲ್ಲಿ ರಾಜ್ಯದ ಇತರ ಬೇಡಿಕೆ:

ಪರಿಸರ ಸೂಕ್ಷ್ಮ ಪಶ್ಚಿಮಘಟ್ಟ ಪ್ರದೇಶಕ್ಕೆ ಐದು ವರ್ಷಗಳಿಗೆ ೧೦,೦೦೦ ಕೋಟಿ ರೂ. ವಿಶೇಷ ಅನುದಾನಕ್ಕೆ ಬೇಡಿಕೆ ಇಡಲಾಗಿದೆ.
ಬೆಂಗಳೂರು, ಹುಬ್ಬಳ್ಳಿ ಮತ್ತು ಮೈಸೂರು ನಗರಗಳ ಮೂಲಸೌಕರ್ಯ ಅಭಿವೃದ್ಧಿಗಾಗಿ ಸಮಗ್ರ ಯೋಜನೆ ಘೋಷಿಸಲು ಮನವಿ ಮಾಡಲಾಗಿದೆ.
ಆರ್ಥಿಕ ಸಂಕಷ್ಟದಲ್ಲಿರುವ ರಾಜ್ಯದ ವಿದ್ಯುತ್ ವಿತರಣಾ ಕಂಪನಿಗಳಿಗೆ ಸಾಲ ನೀಡುವಂತೆ ಕೋರಿಕೆ.
ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಗಳಾದ ವಿಧವಾ ಪಿಂಚಣಿ, ಹಿರಿಯ ನಾಗರಿಕರ ಪಿಂಚಣಿಗಳಿಗೆ ಕೇಂದ್ರದ ಅನುದಾನ ಹೆಚ್ಚಿಸಲು ಕೋರಲಾಗಿದೆ.
ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಕೇಂದ್ರದ ಅನುದಾನವನ್ನು ಮುಂಗಡ ಅನುದಾನ ಹಂಚಿಕೆ ಮಾದರಿಗೆ ಬದಲಾಯಿಸಲು ಮನವಿ ಮಾಡಲಾಗಿದೆ.