
ಹಾವೇರಿ,ಅ.೧೭- ರಾಣೆಬೆನ್ನೂರು ತಾಲೂಕಿನ ಕಾಕೋಳ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಲ್ಲಿಸಿದ್ದ ಟ್ರ್ಯಾಕ್ಟರ್ ಟ್ರೇಲರ್‌ಗೆ ಟಾಟಾ ಏಸ್ ಕಾರು ಡಿಕ್ಕಿ ಹೊಡೆದು ಗುರುವಾರ ಸಂಜೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.ಮತ್ತು ಅಪಘಾತದಲ್ಲಿ ೨೦ ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, ಅವರನ್ನು ರಾಣೆಬೆನ್ನೂರು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.
ರಾಣೇಬೆನ್ನೂರು ತಾಲೂಕಿನ ಕಾಕೋಳ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ ೪೮ರಲ್ಲಿ ಈ ದುರ್ಘಟನೆ ಸಂಭವಿಸಿದೆ.
ಮೃತರನ್ನು ದಾವಣಗೆರೆ ಜಿಲ್ಲೆಯ ಮಲೆಬೆನ್ನೂರು ನಿವಾಸಿಗಳಾದ ಚಮನ್ ಸಾಬ್ ಕೆರಿಮಟ್ಟಿಹಳ್ಳಿ (೭೦), ಮೆಹಬೂಬ್ ಸಾಬ್ ದೊಡ್ಡಗುಬ್ಬಿ (೬೫) ಮತ್ತು ನಿಂಗಮ್ಮ ಜಿಗಳೇರ್ (೭೦) ಎಂದು ಗುರುತಿಸಲಾಗಿದೆ. ಸಂಬಂಧಿಕರ ಮದುವೆ ಕಾರ್ಯಕ್ರಮ ಮುಗಿಸಿ ತಿರುಗಿ ಟಾಟಾ ಎಸ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಮೆರವಣಿಗೆ ಮುಗಿಸಿ ತಮ್ಮ ಗ್ರಾಮಕ್ಕೆ ಹಿಂತಿರುಗುತ್ತಿದ್ದಾಗ ಅಪಘಾತ ಸಂಭವಿಸಿದೆ.
ಸಂಬಂಧಿಕರ ಮದುವೆಗೆ ಕಾರ್ಯಕ್ರಮ ಮುಗಿಸಿ ವಾಪಸ್ ಊರಿಗೆ ತೆರಳುತ್ತಿದ್ದ ವೇಳೆ ರಸ್ತೆ ಬದಿ ನಿಂತಿದ್ದ ಟ್ರಾಕ್ಟರ್ ಟ್ರೈಲರ್ ಗೆ ಟಾಟಾ ಏಸ್ ಡಿಕ್ಕಿ ಹೊಡೆದಿದೆ. ಟ್ರಾಕ್ಟರ್ ಟ್ರೈಲರ್ ಹಿಂಬದಿ ಯಾವುದೇ ಲೈಟ್ ಇರದ ಕಾರಣ ಕತ್ತಲಲ್ಲಿ ಬೇಗ ಅದು ಕಾಣಿಸಲ್ಲ. ಪರಿಣಾಮ ವೇಗವಾಗಿ ಬಂದ ಟಾಟಾ ಏಸ್ ರಸ್ತೆ ಬದಿ ನಿಲ್ಲಿಸಲಾಗಿದ್ದ ಟ್ರೈಲರ್ ಗೆ ಗುದ್ದಿದೆ ಎಂದು ತಿಳಿದುಬಂದಿದೆ.
ರಾಣೇಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.