
ಕಲಬುರಗಿ,ಫೆ.2-ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ ಬಜೆಟ್ ಗೊತ್ತು ಗುರಿಯಿಲ್ಲದ ಬಜೆಟ್ ಆಗಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಟೀಕಿಸಿದ್ದಾರೆ.
ಬಜೆಎಟ್‍ನಲ್ಲಿ ರೂಪಾಯಿ ಕುಸಿತ ತಡೆಯಲು ಕಟ್ಟುನಿಟ್ಟಿನ ಕ್ರಮಗಳಿಲ್ಲ. ಸಾಮೂಹಿಕ ನೌಕರಿ ಒದಗಿಸಲು ಕಾರ್ಯಕ್ರಮಗಳಿಲ್ಲ. ಮಧ್ಯಮವರ್ಗದವರಿಗೆ, ರೈತರಿಗೆ ಹಾಗೂ ಅತಿಸಣ್ಣ, ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳಿಗೆ ಬಜೆಟ್ ನಲ್ಲಿ ಉತ್ತೇಜನವಿಲ್ಲ. ಗ್ರಾಮೀಣಾಭಿವೃದ್ಧಿ ವಿಚಾರದಲ್ಲಿ ಎಂದಿನಂತೆ ನಿರ್ಲಕ್ಷ್ಯತನ ಮುಂದುವರೆದಿದೆ. ಕುಡಿಯುವ ನೀರು, ನೈರ್ಮಲ್ಯ, ಮೂಲಭೂತ ಸೌಲಭ್ಯ, ಜೀವನೋಪಾಯ, ವಸತಿ ಮುಂತಾದ ಸೌಕರ್ಯ ಒದಗಿಸಲು ವಿಫಲವಾಗಿದೆ. ಐಟಿ ವಲಯದಲ್ಲಿ ಅತಿಹೆಚ್ಚು ರಫ್ತು ಮಾಡುವ ದೇಶದ ಐಟಿ ರಾಜಧಾನಿಯಾದ ಬೆಂಗಳೂರಿನಲ್ಲಿ ಐಟಿ ಉದ್ಯಮದ ವಿಸ್ತಾರಕ್ಕೆ ವಿಶೇಷ ಅನುದಾನವಿಲ್ಲ. ಒಟ್ಟಾರೆ ಇದೊಂದು ನಿರಾಶಾದಾಯ ಬಜೆಟ್ ಆಗಿದೆ ಎಂದು ತಿಳಿಸಿದ್ದಾರೆ.

























