Home ಜಿಲ್ಲೆ ಏ.೧೦ ರಿಂದ ಐದು ದಿನಗಳ ಕಾಲ ಬುದ್ಧ, ಬಸವ, ಬಾಬಾಸಾಹೇಬ ಅಂಬೇಡ್ಕರ್ ಪುಸ್ತಕ ಮೇಳ:ಸೂಳಿಭಾವಿ

ಏ.೧೦ ರಿಂದ ಐದು ದಿನಗಳ ಕಾಲ ಬುದ್ಧ, ಬಸವ, ಬಾಬಾಸಾಹೇಬ ಅಂಬೇಡ್ಕರ್ ಪುಸ್ತಕ ಮೇಳ:ಸೂಳಿಭಾವಿ

ಸಂಜೆವಾಣಿ ವಾರ್ತೆ,
ವಿಜಯಪುರ, ಏ. ೭ : ಏ.೧೦ ರಿಂದ ಐದು ದಿನಗಳ ಕಾಲ ಬುದ್ಧ, ಬಸವ ಬಾಬಾಸಾಹೇಬ ಅಂಬೇಡ್ಕರ್ ಪುಸ್ತಕ ಮೇಳವನ್ನು ಪ್ರಪ್ರಥಮ ಬಾರಿಗೆ ವಿಜಯಪುರದ ದರಬಾರ ಹೈಸ್ಕೂಲ್ ಮೈದಾನದಲ್ಲಿ ಆಯೋಜಿಸಲಾಗಿದ್ದು, ಮೇಳಕ್ಕೆ ಸಕಲ ಸಿದ್ಧತೆಗಳನ್ನು ಭರದಿಂದ ಕೈಗೊಳ್ಳಲಾಗುತ್ತಿದೆ ಎಂದು
ಲಡಾಯಿ ಪ್ರಕಾಶನದ ಮುಖ್ಯಸ್ಥ, ಪ್ರಗತಿಪರ ಚಿಂತಕ ಬಸವರಾಜ ಸೂಳಿಭಾವಿ ಹೇಳಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇ ಸಾಹಿತ್ಯ ಮೇಳ ವಿಜಯಪುರ ಬಳಗ ಹಾಗೂ ದಲಿತ, ಪ್ರಗತಿಪರ ಸಂಘಟನೆಗಳ ಸಹಯೋಗದಲ್ಲಿ ಈ ಮೇಳ ಆಯೋಜಿಸಲಾಗಿದ್ದು, ಸ್ವರಚಿತ ಪುಸ್ತಕಗಳಗಳೊಂದಿಗೆ ಸಾಹಿತಿಗಳ ಜಾಥಾ ಅಪೂರ್ವ ರೀತಿಯಲ್ಲಿ ನಡೆಯಲಿದ್ದು,ಸಾಹಿತಿಗಳೇ ಈ ಜಾಥಾಕ್ಕೆ ಚಾಲನೆ ನೀಡಲಿದ್ದಾರೆ.
ಎ.೧೦ ರಂದು ಮಧ್ಯಾಹ್ನ ೧೨ ಕ್ಕೆ ಡಿಎಸ್‌ಎಸ್ ರಾಜ್ಯ ಸಂಚಾಲಕ ಮಾವಳ್ಳಿ ಶಂಕರ ಪುಸ್ತಕ ಮೇಳಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಲಿದ್ದಾರೆ. ಬೆಳಗಾವಿ ಪ್ರಾದೇಶಿಕ ಆಯುಕ್ತೆ ಕೆ.ಎಂ. ಜಾನಕಿ ಅಧ್ಯಕ್ಷತೆ ವಹಿಸಲಿದ್ದಾರೆ. ಮುಂಬೈನ ಖ್ಯಾತ ಲೇಖಕ ಜಿ.ವಿ. ಪವಾರ ದಿಕ್ಸೂಚಿ ಭಾಷಣ ಮಂಡಿಸಲಿದ್ದಾರೆ ಎಂದರು.
ಅದೇ ದಿನ ಮಧ್ಯಾಹ್ನ ೩ ಕ್ಕೆ ಸಾಮಾಜಿಕ ಬದ್ಧತೆ – ಪತ್ರಕರ್ತನಾಗಿ ಅನುಭವಗಳು ಎಂಬ ವಿಚಾರಗೋಷ್ಠಿ ನಡೆಯಲಿದ್ದು, ಹಿರಿಯ ಪತ್ರಕರ್ತರಾದ ಬಿ.ಎಂ. ಹನೀಫ್, ಚಂದ್ರಕಾAತ ವಡ್ಡು ವಿಚಾರ ಮಂಡಿಸಲಿದ್ದು, ಹಿರಿಯ ಪತ್ರಕರ್ತ ರಫೀ ಭಂಡಾರಿ ಅಧ್ಯಕ್ಷತೆ ವಹಿಸಲಿದ್ದಾರೆ.
ಸಂಜೆ ೫ ಕ್ಕೆ ನನ್ನ ನೆಚ್ಚಿನ ಪುಸ್ತಕ – ವಿದ್ಯಾರ್ಥಿಗಳ ಮಾತು ಎಂಬ ಸಂವಾದ, ನಂತರ ಸಂಜೆ ೬ ಕ್ಕೆ ಕವಿಗೋಷ್ಠಿ, ಸಂಜೆ ೭ ಕ್ಕೆ ಬಂಜಾರಾ ನೃತ್ಯ ನಡೆಯಲಿದೆ. ಅದೇ ದಿನ ರಾತ್ರಿ ೮ ಕ್ಕೆ ಗಣೇಶ ಕಾಂಬಳೆ – ರಮೇಶ ನಾಯಕ ಅವರಿಂದ ಪವಾಡ ಬಯಲು ಕಾರ್ಯಕ್ರಮ ನಡೆಯಲಿದೆ.
೧೧ ರಂದು ಶಿಕ್ಷಕ ದಂಪತಿಗಳ ಮೆರವಣಿಗೆ ಎಂಬ ವಿನೂತನ ಕಾರ್ಯಕ್ರಮ ನಡೆಯಲಿದ್ದು, ಸಾವಿತ್ರಿಬಾಯಿ ಫುಲೆ ಮಾರ್ಗದಿಂದ ಪುಸ್ತಕ ಮೇಳದ ಸ್ಥಳದವರೆಗೆ ಈ ಮೆರವಣಿಗೆ ನಡೆಯಲಿದೆ, ಮಧ್ಯಾಹ್ನ ೧೨ ಕ್ಕೆ ಖ್ಯಾತ ಚಿಂತಕಿ ಡಾ.ಮೀನಾಕ್ಷಿ ಬಾಳಿ ದಿಕ್ಸೂಚಿ ಭಾಷಣ ಮಂಡಲಿಸದ್ದಾರೆ. ಸಂಜೆ ೪ ಕ್ಕೆ ಲೇಖಕರೊಂದಿಗೆ ಸಂವಾದ ನಡೆಯಲಿದೆ. ಸಂಜೆ ೬ ಕ್ಕೆ ಕವಿಗೋಷ್ಠಿ ನಡೆಯಲಿದೆ.
ಎ.೧೨ ರಂದು ಬಸವಾದಿ ಶರಣರ ವಚನಗಳ ಪವಿತ್ರ ಕಟ್ಟುಗಳ ಮೆರವಣಿಗೆ ನಡೆಯಲಿದೆ. ನಂತರ ನಡೆಯಲಿರುವ ಉಪನ್ಯಾಸ ಕಾರ್ಯಕ್ರಮದಲ್ಲಿ ಖ್ಯಾತ ಚಿಂತಕಿ ಡಾ.ಎಚ್.ಅನುಪಮಾ ವಿಶೇಷ ಉಪನ್ಯಾಸ ನೀಡಲಿದ್ದಾರೆ. ನಂತರ ಮುದ್ರಣ ಗುಮ್ಮಟ ಎಂಬ ಪುಸ್ತಕ ಬಿಡುಗಡೆ ಹಾಗೂ ಪ್ರಶಸ್ತಿ ಪ್ರದಾನ, ಛಾಯಾಚಿತ್ರಗಳ ಪ್ರದರ್ಶನ ನಡೆಯಲಿದೆ. ಎ.೧೩ ರಂದು ಕಾಕಾ ಕಾರಖಾನೀಸರ ಸ್ಮರಣೆ ನಡೆಯಲಿದ್ದು, ಡಾ.ಕೃಷ್ಣ ಕೊಲ್ಹಾರ ಕುಲಕರ್ಣಿ ಉಪನ್ಯಾಸ ಮಂಡಿಸಲಿದ್ದಾರೆ.
ಎ.೧೪ ರಂದು ಸಂವಿಧಾನ ಶಿಲ್ಪಿ ಡಾ.ಬಿ.ಅರ್. ಅಂಬೇಡ್ಕರ ಜಯಂತೋತ್ಸವ ನಡೆಯಲಿದ್ದು, ಖ್ಯಾತ ಚಿಂತಕ ಶಿವಸುಂದರ ಪ್ರಧಾನ ಭಾಷಣ ಮಂಡಿಸಲಿದ್ದಾರೆ ಎಂದರು.
ಪುನ: ಮಾನವೀಯತೆಯ ನೆಲೆಗಟ್ಟಿನಲ್ಲಿ ಮನುಕುಲವನ್ನು ಮರಳಿ ತರುವ ನಿಟ್ಟಿನಲ್ಲಿ ಪುಸ್ತಕ ಜಗತ್ತು ಕಾರ್ಯೋನ್ಮುಖವಾಗುವ ವೇದಿಕೆಯಾಗಿ ಈ ಮೇಳ ಆಯೋಜಿಸಲಾಗುತ್ತಿದೆ. ಇದು ಒಂದು ಸಾಹಿತ್ಯಿಕ ಜೊತೆಗೆ ಸಾಂಸ್ಕೃತಿಕ ಮೇಳವೂ ಹೌದು. ಜ್ಞಾನ ಕೊರತೆಯನ್ನೂ ಆಧುನಿಕ ಭಗೀರಥರು ನೀಗಿಸಲಿ
ಜಲ ನೀಡುವ ಮೂಲಕ ಅಪೂರ್ವ ಕಾರ್ಯ ಮಾಡಿರುವ ಆಧುನಿಕ ಭಗೀರಥರೆನಿಸಿಕೊಂಡಿರುವ ಸಚಿವ ಡಾ.ಎಂ.ಬಿ. ಪಾಟೀಲರು ಜಿಲ್ಲೆಯ ಜ್ಞಾನದ ಕೊರತೆಯನ್ನೂ ಸಹ ನೀಗಿಸುವ ಭಗೀರಥರಾಗಲಿ, ಈ ಕಾರ್ಯವನ್ನು ಅವರು ಕೈಗೊಳ್ಳುತ್ತಾರೆ ಎನ್ನುವ ವಿಶ್ವಾಸವಿದೆ ಎಂದು ಸೂಳಿಭಾವಿ ಆಶಯ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಪ್ರತಿ ಗ್ರಾಮದಲ್ಲಿ ಗ್ರಂಥಾಲಯ ಇರಬೇಕು. ಗ್ರಂಥಾಲಯ ಇಲ್ಲದೇ ಇರುವ ಗ್ರಾಮ ಇರಲೇಬಾರದು. ಈ ನಿಟ್ಟಿನಲ್ಲಿ ನಾವು ಆಶಯಪೂರ್ವಕ ಹೆಜ್ಜೆಯನ್ನು ಇರಿಸುತ್ತಿದ್ದೇವೆ ಎಂದರು.
ಪ್ರಮುಖರಾದ ರಾಜಶೇಖರ ಯಡಹಳ್ಳಿ, ಅನೀಲ್ ಹೊಸಮನಿ, ಡಾ.ದೊಡ್ಡಣ್ಣ ಭಜಂತ್ರಿ ಮೊದಲಾದವರು ಉಪಸ್ಥಿತರಿದ್ದರು.