ರಕ್ತಚಂದನ ಸಾಗಾಟ: ಮೂವರ ಸೆರೆ

ಬೆಂಗಳೂರು, ಸೆ. ೩- ಬ್ಲ್ಯಾಕ್ ಬಾಸ್ಟರ್ ಪುಷ್ಪ ಸಿನೆಮಾ ಮಾದರಿಯಲ್ಲಿ ಅಕ್ರಮವಾಗಿ ‘ರಕ್ತಚಂದನ’ ಚಂದನ ಸಾಗಾಟ ಹಾಗೂ ಮಾರಾಟ ಮಾಡುತ್ತಿದ್ದ ಆರೋಪದ ಮೇರೆಗೆ ಬೆಂಗಳೂರಲ್ಲಿ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಆಂಧ್ರಪ್ರದೇಶದ ನೆಲಮಲ್ಲ ಅರಣ್ಯದಿಂದ ಅಕ್ರಮವಾಗಿ ರಕ್ತ ಚಂದನ ಸಾಗಾಟ ಮಾಡಿ ಹೊಸಕೋಟೆ ತಾಲೂಕಿನ ಕಟ್ಟಿಗೆಹಳ್ಳಿಯಲ್ಲಿ ಬೇರೆಗೆ ಸ್ಥಳಾಂತರಿಸಲಾಗುತ್ತಿದ್ದ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಪೊಲೀಸರು ಮೂವರನ್ನು ವಶಕ್ಕೆ ಪಡೆದಿದ್ದಾರೆ.

ದಾಳಿಯ ವೇಳೆ ೨೫ ಲಕ್ಷ ರೂ.ಮೌಲ್ಯದ ಒಂದು ಕೆ.ಜಿ. ತೂಕದ ರಕ್ತ ಚಂದನದ ತುಂಡುಗಳನ್ನು ವಶಪಡಿಸಿಕೊಂಡಿದ್ದಾರೆ. ರಕ್ತ ಚಂದನ ತುಂಡುಗಳನ್ನು ಕೊರಿಯರ್ ಟ್ರಾನ್ಸ್ ಪೋರ್ಟ್ ಕಂಪನಿಯ ಮೂಲಕ ಹರಿಯಾಣಕ್ಕೆ ರಫ್ತು ಮಾಡಲು ಯತ್ನಿಸುತ್ತಿದ್ದರು ಎಂದು ಹೇಳಲಾಗಿದೆ.

ಬಂಧಿತ ಆರೋಪಿಗಳನ್ನು ಏಜಾಜ್ ಷರೀಫ್, ಫಯಾಜ್ ಷರೀಫ್ ಹಾಗೂ ಸಾಧಿಕ್ ಖಾನ್ ಎಂದು ಗುರುತಿಸಲಾಗಿದೆ. ರಕ್ತ ಚಂದನ ಸಾಗಾಟಕ್ಕೆ ಬಳಸಿದ್ದ ಟಾಟಾ ಏಸ್ ವಾಹನ ಜಪ್ತಿ ಮಾಡಿದ್ದು, ಘಟನೆ ಕುರಿತಂತೆ ಹೊಸಕೋಟೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.