
ಚನ್ನೈ, ಮಾ. ೧೫- ತಮಿಳುನಾಡಿನಲ್ಲಿ ಡಿಎಂಕೆ ಆಡಳಿತವನ್ನು ಕೊನೆಗಾಣಿಸಲು ಹರಸಾಹಸ ನಡೆಸಿರುವ ಬಿಜೆಪಿ ನಟ ವಿಜಯ್ ಸ್ಥಾಪಿಸಿರುವ ಟಿವಿಕೆ ಪಕ್ಷದ ಜತೆ ಮೈತ್ರಿ ಮಾಡಿಕೊಳ್ಳುವ ಪ್ರಸ್ತಾವವನ್ನು ಮುಂದಿಟ್ಟಿದೆ.
ಬಿಜೆಪಿ ಜತೆ ನಟ ವಿಜಯ್ ಮೈತ್ರಿ ಮಾಡಿಕೊಂಡರೆ ಟಿವಿಕೆಗೆ ಉಪಮುಖ್ಯಮಂತ್ರಿ ಸ್ಥಾನ ಹಾಗೂ ೮೦ ವಿಧಾನಸಭಾ ಕ್ಷೇತ್ರಗಳನ್ನು ಬಿಟ್ಟು ಕೊಡುವುದಾಗಿಯೂ ಬಿಜೆಪಿ ಹೇಳಿದೆ.
ನಟ ವಿಜಯನ್ ರವರ ಟಿವಿಕೆ ಪಕ್ಷವನ್ನು ಎನ್ಡಿಎ ತೆಕ್ಕೆಗೆ ತೆಗೆದುಕೊಂಡು ತಮಿಳುನಾಡಿನಲ್ಲಿ ಟಿಎಂಕೆ ಪಕ್ಷವನ್ನು ಎದುರಿಸುವ ತಂತ್ರವನ್ನು ಬಿಜೆಪಿ ಹೆಣೆದಿದ್ದು, ಬಿಜೆಪಿ ಮತ್ತು ಟಿವಿಕೆ ನಡುವೆ ಮೈತ್ರಿಯಾದರೆ ರಾಜ್ಯದಲ್ಲಿ ಚುನಾವಣಾ ಲೆಕ್ಕಾಚಾರಗಳು ಬದಲಾಗುತ್ತವೆ. ಅಧಿಕಾರವನ್ನು ಹಿಡಿಯಬಹುದು ಎಂಬ ಉಮೇದಿನೊಂದಿಗೆ ಬಿಜೆಪಿ ಟಿವಿಕೆ ಜತೆ ಮೈತ್ರಿ ಮಾತುಕತೆಗೆ ಮುಂದಾಗಿದೆ ಎಂದು ಹೇಳಲಾಗಿದೆ.
ಬಿಜೆಪಿ ಆಡಳಿತವಿರುವ ರಾಜ್ಯದ ಉಪಮುಖ್ಯಮಂತ್ರಿಯೊಬ್ಬರು ನಟ ವಿಜಯ್ ರವರನ್ನು ಸಂಪರ್ಕಿಸಿ ಮೈತ್ರಿಗೆ ಅವರನ್ನು ಒಪ್ಪಿಸುವ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಬಿಜೆಪಿಯ ಈ ಮೈತ್ರಿ ಪ್ರಸ್ತಾವವನ್ನು ನಟ ವಿಜಯ್ ಒಪ್ಪಿಕೊಳ್ಳುತ್ತಾರೆಯೇ ಎಂಬುದು ಕುತೂಹಲ ಮೂಡಿಸಿದೆ.
ನಟ ವಿಜಯ್ ಈಗಾಗಲೇ ಟಿವಿಕೆ ಪಕ್ಷ ಬಿಜೆಪಿ ಸೇರಿದಂತೆ ಯಾವ ಪಕ್ಷದೊಂದಿಗೂ ಮೈತ್ರಿ ಮಾಡಿಕೊಳ್ಳುವುದಿಲ್ಲ. ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಸ್ವತಂತ್ರವಾಗಿ ಟಿವಿಕೆ ಸ್ಪರ್ಧಿಸಲಿದೆ ಎಂದು ಘೋಷಿಸಿದ್ದಾರೆ.
ಹೀಗಿರುವಾಗ ಬಿಜೆಪಿ ಟಿವಿಕೆ ಜತೆ ಮೈತ್ರಿಗೆ ಮುಂದಾಗಿರುವುದು ನಾನಾ ಚರ್ಚೆಗೆ ಗ್ರಾಸವಾಗಿದೆ.
ತಮಿಳುನಾಡು ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿರುವ ನಟ ವಿಜಯ್ ಉಪಮುಖ್ಯಮಂತ್ರಿ ಸ್ಥಾನಕ್ಕೆ ಒಪ್ಪಿಕೊಳ್ಳುತ್ತಾರೆಯೇ ಎಂಬುದು ಕುತೂಹಲ ಮೂಡಿಸಿದೆ.
ನಟ ವಿಜಯ್ ತಮಿಳುನಾಡಿನಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿದ್ದು, ಅಭಿಮಾನಿಗಳ ಬೆಂಬಲವನ್ನು ನೆಚ್ಚಿಕೊಂಡೇ ಟಿವಿಕೆ ಪಕ್ಷ ಸ್ಥಾಪಿಸಿ ಚುನಾವಣಾ ಕಣಕ್ಕಿ ಇಳಿದಿದ್ದಾರೆ.
ನಟ ವಿಜಯ್ ಜತೆ ಮೈತ್ರಿ ಮಾಡಿಕೊಂಡರೆ ಚುನಾವಣಾ ಫಲಿತಾಂಶಗಳಲ್ಲಿ ಗಣನೀಯ ಪ್ರಗತಿ ಸಾಧಿಸಬಹುದು ಎಂಬ ಲೆಕ್ಕಾಚಾರದೊಂದಿಗೆ ಬಿಜೆಪಿ ನಟ ವಿಜಯ್ ಜತೆ ಮೈತ್ರಿ ಮಾತುಕತೆಗೆ ಮುಂದಾಗಿದೆ.






























