
ಅರಸೀಕೆರೆ, ಅ. ೧೧- ಜೆಡಿಎಸ್ ಮುಖಂಡ ಎನ್.ಆರ್. ಸಂತೋಷ್ ಅವರು ನಡೆಸಿದ ಪ್ರತಿಭಟನೆಯಲ್ಲಿ ಬಿಜೆಪಿ ಬಾವುಟವನ್ನು ಬಳಸಿಕೊಂಡಿದ್ದಾರೆ. ಅವರು ನಮ್ಮನ್ನು ಸಂಪರ್ಕಿಸಿದ್ದರೆ ಬೆಂಬಲವನ್ನು ನೀಡುತ್ತಿದ್ದೆವು. ಆದರೆ ಅವರು ನಮ್ಮ ಬೆಂಬಲವನ್ನು ಪಡೆಯದೆ ನಮ್ಮನ್ನು ಮಾತನಾಡಿಸದೆ ನಮ್ಮ ಬಾವುಟವನ್ನು ಬಳಸಿಕೊಂಡಿದ್ದಾರೆ. ನಮ್ಮ ಪಕ್ಷದ ಬಾವುಟವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ತಾಲ್ಲೂಕು ಬಿಜೆಪಿ ಅಧ್ಯಕ್ಷ ಯತೀಶ್ ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಪಕ್ಷದ ಕೆಲವರು ನಮ್ಮ ಯಾವುದೇ ಸಹಕಾರವನ್ನು ಕೇಳದೆ ನಮಗೆ ತಿಳಿಸದೆ ನಮ್ಮ ಅನುಮತಿ ಪಡೆಯದೇ ನಗರ ಅಧ್ಯಕ್ಷರಿಗೆ, ತಾಲ್ಲೂಕು, ಜಿಲ್ಲಾಧ್ಯಕ್ಷರ ಗಮನಕ್ಕೆ ತರದೆ ಸಂತೋಷ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಶಿವನ್ ರಾಜು, ಭಾಸ್ಕರ್, ಗಿರೀಶ್, ರಮೇಶ್ ನಾಯ್ಡು, ಇವರುಗಳಿಗೆ ನಾವು ಪಕ್ಷದಿಂದ ನೋಟಿಸ್ ಜಾರಿ ಮಾಡುತ್ತೇವೆ. ಈ ಹಿಂದೆಯೂ ಸಹ ಅವರಿಗೆ ನಾವು ಎರಡು ಮೂರು ಬಾರಿ ನೋಟಿಸ್ ಜಾರಿ ಮಾಡಿದ್ದೇವೆ. ಆದರೂ ಅವರು ಯಾವುದೇ ಉತ್ತರವನ್ನು ನೀಡಿಲ್ಲ. ಇನ್ನು ಮುಂದೆ ನಾವು ಸುಮ್ಮನಿರುವುದಿಲ್ಲ, ಇವರ ವಿರುದ್ಧ ಜಿಲ್ಲಾ ಮತ್ತು ರಾಜ್ಯಾಧ್ಯಕ್ಷರ ಗಮನಕ್ಕೆ ತಂದು ಇವರ ವಿರುದ್ಧ ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದಾರೆ. ಹಾಗಾಗಿ ಇವರುಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುತ್ತೇವೆ ಎಂದರು.
ನಗರಾಧ್ಯಕ್ಷ ಅವಿನಾಶ್ ನಾಯ್ಡು ಮಾತನಾಡಿ, ಬಿಜೆಪಿಯಲ್ಲಿ ಗೆದ್ದು ಜೆಡಿಎಸ್ ನವರ ಜತೆ ಹೋಗಿ ಅವರು ನಡೆಸುವ ಪ್ರತಿಭಟನೆಗೆ, ಅವರು ನಡೆಸುವ ಧರಣಿಗೆ ಸಹಕಾರ ನೀಡಿ ನಮ್ಮ ಬಾವುಟಗಳನ್ನು ಬಳಸಿಕೊಂಡಿರುವುದು ತಪ್ಪು. ಇದಕ್ಕೆ ಅವರು ತಕ್ಕ ಉತ್ತರ ಕೊಡಬೇಕಾಗುತ್ತದೆ. ಅವರ ವಿರುದ್ಧ ಪಕ್ಷ ವಿರುದ್ಧ ಚಟುವಟಿಕೆಯಲ್ಲಿ ತೊಡಗಿದ್ದಾರೆ ಎಂದು ನೋಟಿಸ್ ಜಾರಿ ಮಾಡಿ ಅವರಿಗೆ ತಕ್ಕ ಪಾಠವನ್ನು ಕಲಿಸುತ್ತೇವೆ ಮತ್ತು ಸೂಕ್ತ ಕ್ರಮವನ್ನು ಕೈಗೊಳ್ಳುತ್ತೇವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ದುಮ್ಮೆನಹಳ್ಳಿ ಗಂಗಾಧರ್, ಪುರುಷೋತ್ತಮ್, ಸಿಂಧು, ಮಂಜುನಾಥ್, ಸುನಿಲ್ ಶಾಸ್ತ್ರಿ, ಕಿರಣ್ ಮತ್ತಿತರರು ಉಪಸ್ಥಿತರಿದ್ದರು.