ಬೈಕ್ -ಬೊಲೆರೋ ಡಿಕ್ಕಿ: ಸ್ಥಳದಲ್ಲೇ ಯುವಕ ಸಾವು

ಯಾದಗಿರಿ,ಜ.31: ನಗರದ ಹೊರವಲಯದ ಮುಂಡರಗಿ ಸಮೀಪ ಶುಕ್ರವಾರ ಸಾಯಂಕಾಲ ಸುಮಾರು 4 ಗಂಟೆಗೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಹಾಗೂ ಎಟಿಎಂ (ಬೊಲೆರೋ) ವಾಹನ ಮುಖಾಮುಖಿ ಡಿಕ್ಕಿಯಾಗಿ ಓರ್ವ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಮೃತ ಯುವಕನನ್ನು ಶಾಹಿರ್ ಹುಸೇನ್ ಎಂದು ಗುರುತಿಸಲಾಗಿದ್ದು, ಮೂಲತಃ ಉತ್ತರ ಪ್ರದೇಶ (ಯುಪಿ) ರಾಜ್ಯದ ನಿವಾಸಿ ಎನ್ನಲಾಗಿದೆ. ಅಪಘಾತದ ವೇಳೆ ಬೈಕ್‍ನಲ್ಲಿ ಒಟ್ಟು ನಾಲ್ವರು ಪ್ರಯಾಣಿಸುತ್ತಿದ್ದು, ಇವರಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಮಹ್ಮದ್ ಅಲಿಯಾಸ್, ಮಹಮ್ಮದ್ ವಜಿದ್ ಹಾಗೂ ಮಹಮ್ಮದ್ ರಿಯಾನ್ ಎಂದು ಗುರುತಿಸಲಾಗಿದೆ. ಇವರ ಸ್ಥಿತಿ ಆತಂಕಕಾರಿಯಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಡಿಕ್ಕಿಯ ತೀವ್ರತೆಯಿಂದ ಬೈಕ್ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಗಾಯಾಳುಗಳಿಗೆ ಕೈಕಾಲುಗಳಲ್ಲಿ ತೀವ್ರ ಮುರಿತಗಳು ಹಾಗೂ ಆಂತರಿಕ ಗಾಯಗಳ ಶಂಕೆ ವ್ಯಕ್ತವಾಗಿದೆ. ಗಾಯಾಳುಗಳನ್ನು ತಕ್ಷಣವೇ ಯಾದಗಿರಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಅಪಘಾತದಲ್ಲಿ ಎಟಿಎಂ (ಬೊಲೆರೋ) ವಾಹನದ ಚಾಲಕ ಸಿದ್ದಲಿಂಗ ರೆಡ್ಡಿ ರಾಜಣ್ಣ ಕರ್ದಹಳ್ಳಿ ಅವರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ಕೂಡ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಎಟಿಎಂ ವಾಹನದ ಇನ್ನೊಬ್ಬ ಚಾಲಕನಿಗೂ ಲಘು ಗಾಯಗಳಾಗಿವೆ ಎಂದು ತಿಳಿದುಬಂದಿದೆ.
ಘಟನೆಯ ಸುದ್ದಿ ತಿಳಿದ ಸ್ಥಳೀಯರು ತಕ್ಷಣವೇ ಪೆÇಲೀಸರಿಗೆ ಹಾಗೂ ತುರ್ತು ಸೇವೆಗಳಿಗೆ ಮಾಹಿತಿ ನೀಡಿದ್ದು, ಸಂಚಾರಿ ಹಾಗೂ ಸ್ಥಳೀಯ ಠಾಣೆ ಪೆÇಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತದ ಹಿನ್ನೆಲೆಯಲ್ಲಿ ಕೆಲಕಾಲ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿದ್ದು, ಪೆÇಲೀಸರು ತ್ವರಿತವಾಗಿ ಸಂಚಾರವನ್ನು ಸುಗಮಗೊಳಿಸಿದ್ದಾರೆ.
ಪ್ರಾಥಮಿಕ ತನಿಖೆಯ ಪ್ರಕಾರ ಅತಿವೇಗ ಮತ್ತು ನಿರ್ಲಕ್ಷ್ಯ ಚಾಲನೆ ಅಪಘಾತಕ್ಕೆ ಕಾರಣವಾಗಿರಬಹುದೆಂದು ಶಂಕಿಸಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೆÇಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಮೃತ ಯುವಕನ ಕುಟುಂಬಸ್ಥರು ಹಾಗೂ ಸ್ನೇಹಿತರು ಆಸ್ಪತ್ರೆಗೆ ಹಾಗೂ ಅಪಘಾತ ಸ್ಥಳಕ್ಕೆ ಧಾವಿಸಿದ್ದು, ಅವರ ಆಕ್ರಂದನ ಮುಗಿಲು ಮುಟ್ಟಿತ್ತು .