Home ಜಿಲ್ಲೆ ಟ್ಯಾಟೂ ಹಾಕಿಸಿಕೊಳ್ಳುವ ಮುನ್ನ ಏಡ್ಸ್ನಿಂದ ಜಾಗೃತರಾಗಿ: ಸೋಮನಾಥ ಬಿರಾದಾರ

ಟ್ಯಾಟೂ ಹಾಕಿಸಿಕೊಳ್ಳುವ ಮುನ್ನ ಏಡ್ಸ್ನಿಂದ ಜಾಗೃತರಾಗಿ: ಸೋಮನಾಥ ಬಿರಾದಾರ

ಬೀದರ:ಫೆ.೨೮: ವಿವಿಧ ಜಾತ್ರೆಗಳಲ್ಲಿ ಹಾಗೂ ರಸ್ತೆ ಮೇಲೆ ಯುವಕ ಯುವತಿಯರು ಕೈಮೇಲೆ ಟ್ಯಾಟೂ ಹಾಕಿಸಿಕೊಳ್ಳುವ ಮುನ್ನಡ ಏಡ್ಸ್ ಎಚ್‌ಐವಿ ರೋಗದಿಂದ ಜಾಗರೂಕರಾಗಿರಬೇಕು. ಇದರಿಂದಲೂ ಏಡ್ಸ್ ಸಮಾಜದಲ್ಲಿ ಹರಡುತ್ತಿದೆ ಎಂದು ಕರ್ನಾಟಕ ಕಾಲೇಜಿನ ಪ್ರಾಚಾರ್ಯರಾದ ಸೋಮನಾಥ ಬಿರಾದಾರ ತಿಳಿಸಿದರು.
ಕರ್ನಾಟಕ ಕಲಾ ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಇಂದು ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಬೀದರ, ಕರ್ನಾಟಕ ರಾಜ್ಯ ಏಡ್ಸ್ ಪ್ರೈವೆನ್ಷನ್ ಸೊಸೈಟಿ, ಬೆಂಗಳೂರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ತಡೆಗಟ್ಟುವ ಘಟಕ, ಹಾಗೂ ಕರ್ನಾಟಕ ಕಾಲೇಜಿನ ಸಹಯೋಗದೊಂದಿಗೆ ರೆಡ್ ರಿಬ್ಬನ್ ಕ್ಲಬ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರಕ್ತದಾನ ಮಾಡುವಾಗ, ರಕ್ತ ಪರೀಕ್ಷೆ ಮಾಡಿಸಿಕೊಳ್ಳುವಾಗ ಜಾಗೃತಿ ವಹಿಸಬೇಕು. ನಮ್ಮ ಅಕ್ಕಪಕ್ಕದ ಮನೆಯವರಿಗೆ, ಸ್ನೇಹಿತರಿಗೆ ಸುರಕ್ಷತೆ ಕುರಿತು ತಿಳಿಸಬೇಕೆಂದು ಸಲಹೆ ನೀಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಜಿಲ್ಲಾ ಆರೋಗ್ಯ ಇಲಾಖೆಯ ಆಪ್ತ ಸಮಾಲೋಚಕಿ ಶ್ರೀಮತಿ ಸುನೀತಾ ಮಾತನಾಡಿ ಬೀದರ ಜಿಲ್ಲೆಯಲ್ಲಿ ಎಚ್‌ಐವಿ ಏಡ್ಸ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಇಂದು ಕೆಲವು ಪ್ರದೇಶಗಳಲ್ಲಿ ವಿಶೇಷವಾಗಿ ಸೌದತ್ತಿ ಯಲ್ಲಮ್ಮ ಕಡೆ ದೇವದಾಸಿ ಪದ್ಧತಿ ಇರುವ ಕಡೆ ಸೋಂಕು ಹೆಚ್ಚಾಗುತ್ತಾ ಹೋಗುತ್ತಿದೆ. ಇದನ್ನು ತಡೆಯುವ ಜವಾಬ್ದಾರಿ ಎಲ್ಲರ ಮೇಲಿದೆ. ವಿಶೇಷವಾಗಿ ಕಾಲೇಜಿನ ಯುವಕ ಯುವತಿಯರು ತಾವು ಜ್ಞಾನ ಪಡೆದುಕೊಳ್ಳುವುದರ ಜೊತೆಗೆ ಸಮಾಜದಲ್ಲಿ ಜಾಗೃತಿ ಮೂಡಿಸಬೇಕೆಂದು ತಿಳಿಸಿದರು.
ಕಾಲೇಜಿನ ಎ ಘಟಕದ ಎನ್.ಎಸ್.ಎಸ್ ಅಧಿಕಾರಿ ಡಾ. ದಿಲೀಪ್ ಮಾಲೆ ಪ್ರಸ್ತಾವಿಕವಾಗಿ ಮಾತನಾಡಿ ನಮ್ಮ ಕಾಲೇಜಿನಲ್ಲಿ ಪ್ರತಿ ವರ್ಷ ರೆಡ್ ರಿಬ್ಬನ್ ಕ್ಲಬ್ ಕಾರ್ಯಕ್ರಮವನ್ನು ಆಯೋಜಿಸಿ ವಿದ್ಯಾರ್ಥಿಗಳಿಗೆ ಏಡ್ಸ್ ಕುರಿತು ಅರಿವು ಮೂಡಿಸಲಾಗುತ್ತಿದೆ. ಪದವಿ ವಿದ್ಯಾರ್ಥಿಗಳಲ್ಲಿ ಹೆಚ್ಚು ಹೆಚ್ಚು ಅರಿವು ಮೂಡಿಸಿದಾಗ ಏಡ್ಸ್ ಹರಡದಂತೆ ತಡೆಗಟ್ಟಬಹುದು. ಯುವ ಜನತೆ ಕ್ಷಣಿಕ ಸುಖಕ್ಕಾಗಿ ಅಸುರಕ್ಷಿತ ಲೈಂಗಿಕ ಸಂಪರ್ಕ ಮಾಡುವದರ ಮೂಲಕ ಏಡ್ಸ್ ರೋಗಕ್ಕೆ ತುತ್ತಾಗುತ್ತಿದ್ದಾರೆ. ಇದನ್ನು ನಿಯಂತ್ರಿಸುವ ಸಲುವಾಗಿ ಸೋಂಕನ್ನು ಬರದಂತೆ ತಡೆಯುವ ಅವಶ್ಯಕತೆ ಇದೆ ಎಂದು ಹೇಳಿದರು.
ರೆಡ್ ರಿಬ್ಬನ್ ಕ್ಲಬ್ ಕಾರ್ಯಕ್ರಮದ ಅಂಗವಾಗಿ “ಸಾಮಾಜಿಕ ಪಿಡುಗಾಗಿ ಎಚ್‌ಐವಿ/ಏಡ್ಸ್ ರೋಗ” ಎಂಬ ವಿಷಯದಲ್ಲಿ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ವಿಜೇತರಾದ ಪೀಟರ್ ಬಿ.ಎ. (ಪ್ರಥಮ), ಕೀರ್ತನಾ ಬಿ.ಎಸ್. (ದ್ವಿತೀಯ), ಹಾಗೂ ಭುವನೇಶ್ವರಿ ಬಿ. ಎ (ತೃತೀಯ) ವಿಜೇತರಿಗೆ ಎನ್.ಎಸ್.ಎಸ್ ಬಿ ಘಟಕದ ಅಧಿಕಾರಿ ಪರಮೇಶ್ವರ್ ಬಹುಮಾನ ವಿತರಿಸಿದರು. ಪೀಠರ್ ನಿರೂಪಿಸಿದರೆ, ಶ್ರೀರಕ್ಷಾ ವಂದಿಸಿದರು. ಹಾಗೂ ಐಕ್ಯೂಎಸಿ ಸಂಯೋಜಕಿ ಡಾ. ಸೋಮೇಶ್ವರಿ ಮುದ್ದಾ, ಎನ್.ಸಿ.ಸಿ ಅಧಿಕಾರಿ ಡಾ. ಸಂತೋಷ ನಾಯಕ ಎನ್‌ಎಸ್‌ಎಸ್ ಅಧಿಕಾರಿ, ಆನಂದ, ಬ್ಲೆಸಿ ರಾಣಿ, ಜ್ಯೋತಿ ರಾಂಪುರೆ, ಶ್ರೀಮತಿ ಲಕ್ಷ್ಮೀ ಕುಂಬಾರ, ಮಧುಸೂಧನ ಕುಲಕರ್ಣಿ, ಎನ್.ಎಸ್.ಎಸ್ ಸ್ವಯಂ ಸೇವಕರು ಸೇರಿದಂತೆ ಇನ್ನಿತರರು ಸಮಾರಂಭದಲ್ಲಿ ಭಾಗವಹಿಸಿದರು.