ಕೋಟಿ ರೂ. ಮೌಲ್ಯದ ಸ್ವತ್ತು ವಶ:ಎಸ್ಪಿ ನಿಂಬರಗಿ

ವಿಜಯಪುರ, ಜ. 24 : ವಿವಿಧೆಡೆ ಬಂಗಾರ ಕಳವು, ಮೋಟಾರ್ ಬೈಕ್ ಕಳ್ಳತನ ಪ್ರಕರಣಗಳನ್ನು ಬೇಧಿಸಿ ಕೋಟ್ಯಾಂತರ ರೂ. ಮೌಲ್ಯದ ಬಂಗಾರ, ಮೋಟಾರ್ ಬೈಕ್ ಹಾಗೂ ಪೂರಕ ವಸ್ತುಗಳನ್ನು ಜಪ್ತು ಮಾಡಿಕೊಂಡಿದ್ದಾರೆ.
ವಿವಿಧ ಪೆÇಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ದಾಖಲಾದ 48 ಬಂಗಾರ, ಮೋಟಾರ್ ಬೈಕ್ ಕಳುವು ಪ್ರಕರಣಗಳಿಗೆ ಸಂಬಂಧಿಸಿದಂತೆ ಒಟ್ಟು 14 ಜನ ಅಂತರ ರಾಜ್ಯ ಹಾಗೂ ಅಂತರ ಜಿಲ್ಲಾ ಆರೋಪಿತರನ್ನು ಬಂಧಿಸಿ ಅವರಿಂದ ಅಂದಾಜು 65 ಲಕ್ಷ ರೂ. ಮೌಲ್ಯದ 426.2 ಗ್ರಾಂ ಬಂಗಾರದ ಆಭರಣಗಳನ್ನು ಮತ್ತು 20 ಲಕ್ಷ ರೂ. ನಗದು ಹಣ ಮತ್ತು ಕೃತ್ಯಕ್ಕೆ ಬಳಸಿದ 2 ಕಾರುಗಳನ್ನು ಹಾಗೂ 39 ಮೋಟಾರ್ ಬೈಕ್ ಜಪ್ತು ಮಾಡಿಕೊಂಡಿದ್ದು, ಆರೋಪಿತರಿಂದ 1,17,000 ರೂ. ಮೌಲ್ಯದ ವಸ್ತುಗಳ ಸ್ವತ್ತುಗಳನ್ನು ಜಪ್ತು ಮಾಡಿಕೊಂಡಿದ್ದಾರೆ ಎಂದು ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಹೇಳಿದರು.
ಈ ಎಲ್ಲ ಪ್ರಕರಣ ಬೇಧಿಸುವಲ್ಲಿ ಇಲಾಖೆಯ ಸಿಬ್ಬಂದಿ ಪ್ರಯತ್ನ ಪ್ರಶಂಸನೀಯ. ಕಳೆದ ಕೆಲವು ದಿನಗಳಿಂದ ಸರಿಸುಮಾರು 2 ಕೋಟಿ ರೂ.ಗಳಷ್ಟು ಮೌಲ್ಯದ ನಗದು ಹಾಗೂ ಬಂಗಾರವನ್ನು ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಮರಳಿ ನೀಡುವಲ್ಲಿ ಇಲಾಖೆ ಯಶಸ್ವಿಯಾಗಿದೆ ಎಂದರು.

ಬಸ್‍ನಲ್ಲಿ ಬಂಗಾರ ಕಳ್ಳತನ ಪ್ರಕರಣ : ಐವರ ಬಂಧನ

ಕಳೆದ 2025 ರ ಮೇ 30 ರಂದು ವಿಜಯಪುರ-ತಾಳಿಕೋಟೆ ಬಸ್‍ನಲ್ಲಿ ಪ್ರಯಾಣ ಬೆಳೆಸಿದ್ದ ಮಹಿಳೆಯ ಬಳಿ ಇದ್ದ 65 ಗ್ರಾಂ ಚಿನ್ನಾಭರಣವನ್ನು ಮನಗೂಳಿ ಬಳಿ ಕಳ್ಳತನ ಮಾಡಿದ ಪ್ರಕರಣವನ್ನು ಬೇಧಿಸಿರುವ ಪೆÇಲೀಸರು ಐದು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಅರಕೇರಿ ಗ್ರಾಮದ ಪ್ರಕಾಶ ವೆಂಕಟೇಶ ಭೋಯ್ರ್, ಅಂಕುಶ ಸಾಹೇಬರಾವ್ ಜಾಧವ, ಗೋವರ್ಧನ ವಿಠ್ಠಲ ಪವಾರ, ರಜನಿ ಶಿವು ಭೋವಿ, ಮಂಜು ಪ್ರಶಾಂತ ಭೋಯ್ರ ಎಂದು ಗುರುತಿಸಲಾಗಿದೆ.
ಮನಗೂಳಿ, ತಿಕೋಟಾ, ದೇವರಹಿಪ್ಪರಗಿ, ಬಬಲೇಶ್ವರ, ಆದರ್ಶನಗರ, ಗೋಲಗುಂಬಜ್, ಹಾಗೂ ನಿಡಗುಂದಿ ಪೆÇಲೀಸ್ ಠಾಣೆಗಳಿಗೆ ಸಂಬಂಧಿಸಿದಂತೆ ಒಟ್ಟು 8 ಪ್ರಕರಣಗಳಲ್ಲಿ ಕೃತ್ಯಕ್ಕೆ ಬಳಸಿದ 1 ಕಾರು ಹಾಗೂ ಒಟ್ಟು 426.2 ಗ್ರಾಂ ಬಂಗಾರದ ಆಭರಣಗಳನ್ನು ಹೀಗೆ ಒಟ್ಟು ಅಂದಾಜು 65 ಲಕ್ಷ ರೂ. ಮೌಲ್ಯದ ಮಾಲನ್ನು ಜಪ್ತು ಮಾಡಿಕೊಳ್ಳಲಾಗಿದೆ.
ಆರೋಪಿತರ ಪತ್ತೆಗಾಗಿ ರಚನೆ ಮಾಡಲಾಗಿದ್ದ ವಿಶೇಷ ತನಿಖಾ ತಂಡ ಕಾರ್ಯಾಚರಣೆಯಲ್ಲಿ ತೊಡಗಿದ್ದ ವೇಳೆ ಮನಗೂಳಿ ಗ್ರಾಮದ ಹತ್ತಿರ ಇರುವ ರಾಷ್ಟ್ರೀಯ ಹೆದ್ದಾರಿ-50 ರ ಹತ್ತಿರ ಮುಳವಾಡ ಕ್ರಾಸ್ ನಲ್ಲಿ ಸಂಶಯಾಸ್ಪದ ರೀತಿಯಲ್ಲಿ ಕಾರಿನಲ್ಲಿ ತೆರಳುತ್ತಿದ್ದ ಈ ಆರೋಪಿಗಳನ್ನು ಗುರುತಿಸಿದೆ. ಕಾರಿನಲ್ಲಿದ್ದ ಈ ಎಲ್ಲ ಆರೋಪಿಗಳಿಗೆ ಕಾರು ನಿಲ್ಲಿಸಿ ಎಂದು ಸೂಚನೆ ನೀಡಿದರೂ ಸಹ ನಿಲ್ಲಿಸದೇ ಇರುವ ಕಾರಣಕ್ಕೆ ಪೆÇಲೀಸರು ಸಹ ಕಾರನ್ನು ಹಿಂಬಾಲಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಿಚಾರಣೆ ನಡೆಸಿದಾಗ ಸತ್ಯಾಂಶ ಬಹಿರಂಗಗೊಂಡಿದೆ ಎಂದು ಲಕ್ಷ್ಮಣ ನಿಂಬರಗಿ ವಿವರಿಸಿದರು.

ಬಂಗಾರ ನಾಣ್ಯದ ಹೆಸರಲ್ಲಿ ವಂಚನೆ :ನಾಲ್ವರ ಬಂಧನ

ಬಂಗಾರ ನಾಣ್ಯ ಎಂದು ನಂಬಿಸಿ ಲಕ್ಷಾಂತರ ರೂ. ಹಣ ಪಡೆದಿದ್ದ ನಾಲ್ವರು ಆರೋಪಿಗಳನ್ನು ಪೆÇಲೀಸರು ಬಂಧಿಸಿದ್ದಾರೆ. ಮನಗೂಳಿ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ ವರ್ಷದ ಮೇ.8ರಂದು ಈ ಪ್ರಕರಣ ದಾಖಲಾಗಿದ್ದು, ನಕಲಿ ಬಂಗಾರ ನಾಣ್ಯಗಳನ್ನು ಅಸಲಿ ಎಂದು ಯಾಮಾರಿಸಿ ದೂರುದಾರರಿಂದ 26 ಲಕ್ಷ ರೂ. ಹಣ ಪಡೆದುಕೊಂಡು ಮೋಸ ಮಾಡಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಗಿದ್ದು, ಆರೋಪಿಗಳನ್ನು ವಿಜಯನಗರದ ಹಣಮಂತ ಉರ್ಫ್ ಸಂತೋಷ ಲಾಲ ಮಾನಪ್ಪ ಉರ್ಫ್ ಲಕ್ಷ್ಮಣ ಕೊರಚರ, ರಾಜಾ ಗೋವಿಂದ ಉರ್ಫ್ ವೆಂಕಟೇಶ ಕಾವಾಡಿ, ಹರೀಶ ಚೌಡಪ್ಪ ಕೊರಚರ, ಚೀರಂಜೀವಿ ದುರ್ಗಪ್ಪ ಕೊರಚರ ಎಂದು ಗುರುತಿಸಲಾಗಿದೆ. ಆರೋಪಿಗಳು ಮೋಸ ಮಾಡಿ ತೆಗೆದುಕೊಂಡು ಹೋದ ನಗದು ಹಣವನ್ನು ಹಾಗೂ ಕೃತ್ಯಕ್ಕೆ ಬಳಸಿದ 1 ಕಾರನ್ನು ಪೆÇಲೀಸರು ಜಪ್ತು ಮಾಡಿಕೊಂಡಿದ್ದಾರೆ.

ಬೈಕ್ ಕಳ್ಳತನ :ಮೂವರ ಬಂಧನ
ನಾಗಠಾಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮದಲ್ಲಿ ವಿವಿಧ ಬೈಕ್ ಕಳ್ಳತನದಲ್ಲಿ ಭಾಗಿಯಾದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಪೆÇಲೀಸರು ಯಶಸ್ವಿಯಾಗಿದ್ದಾರೆ.
ಆರೋಪಿಗಳನ್ನು ಸಿದ್ರಾಮ ಅರಕೇರಿ, ಮಂಜುನಾಥ ಉಕ್ಕಲಿ, ಆಕಾಶ ಮಠಪತಿ ಎಂದು ಗುರುತಿಸಲಾಗಿದೆ. ವಿವಿಧ ಠಾಣೆಗಳಲ್ಲಿ ದಾಖಲಾಗಿದ್ದ ಮೋಟಾರ್ ಬೈಕ್ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಆರೋಪಿಗಳಿಂದ ಒಟ್ಟು 20 ಮೋಟಾರ ಸೈಕಲ್ ಗಳನ್ನು ವಶಪಡಿಸಿಕೊಂಡಿದ್ದು 7 ಲಕ್ಷ ರೂ. ಮೌಲ್ಯದ ಬೈಕ್‍ಗಳನ್ನು ಪೆÇಲೀಸರು ಜಪ್ತು ಮಾಡಿಕೊಂಡಿದ್ದಾರೆ.
ವಿಶೇಷ ಪೆÇಲೀಸ್ ತನಿಖಾ ತಂಡ ಅಲಿಯಾಬಾದ್ ಬಳಿ ಕರ್ತವ್ಯ ನಿರ್ವಹಿಸುತ್ತಿರುವ ವೇಳೆ ಮೂವರು ವ್ಯಕ್ತಿಗಳು ಸಂಶಯಾಸ್ಪದವಾಗಿ ತಿರುಗಾಡುತ್ತಿರುವುದನ್ನು ನೋಡಿ ಅವರನ್ನು ವಿಚಾರಿಸಿದಾಗ ಸತ್ಯಾಂಶ ಹೊರಬಂದಿದೆ.
ಎಎಸ್‍ಪಿ ರಾಮನಗೌಡ ಹಟ್ಟಿ, ಡಿವೈಎಸ್‍ಪಿ ಟಿ.ಎಸ್. ಸುಲ್ಫಿ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.