Home ಮುಖಪುಟ ಸುದ್ದಿ ಅಪ್ಪು ೫೧ನೇ ಹುಟ್ಟುಹಬ್ಬ ‘ಪ್ರೇರಣಾ ದಿನ’ವಾಗಿ ಆಚರಣೆ

ಅಪ್ಪು ೫೧ನೇ ಹುಟ್ಟುಹಬ್ಬ ‘ಪ್ರೇರಣಾ ದಿನ’ವಾಗಿ ಆಚರಣೆ

ದಿ. ನಟ ಪುನೀತ್ ರಾಜ್‌ಕುಮಾರ್‌ರವರ ಹುಟ್ಟುಹಬ್ಬದ ಪ್ರಯುಕ್ತ ನಗರದ ಕಂಠೀರವ ಸ್ಟುಡಿಯೋ ಸಮಾಧಿಯಲ್ಲಿ ಹೂಗಳಿಂದ ಅಲಂಕಾರ ಮಾಡಿ ಹುಟ್ಟುಹಬ್ಬ ಆಚರಿಸಲಾಯಿತು.

ಬೆಂಗಳೂರು, ಮಾ.೧೭: ಕನ್ನಡ ಚಿತ್ರರಂಗದ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ೫೧ನೇ ಜನುಮ ದಿನವನ್ನು ಅಭಿಮಾನಿಗಳು ಹಾಗೂ ಕುಟುಂಬಸ್ಥರು ‘ಪ್ರೇರಣಾ ದಿನ’ವಾಗಿ ಆಚರಿಸಿದರು. ನಗರದ ಕಂಠೀರವ ಸ್ಟುಡಿಯೋ ಆವರಣದಲ್ಲಿರುವ ಅವರ ಸಮಾಧಿಗೆ ಕುಟುಂಬಸ್ಥರು ಹಾಗೂ ಸಾವಿರಾರು ಅಭಿಮಾನಿಗಳು ಭೇಟಿ ನೀಡಿ ಪುಷ್ಪನಮನ ಸಲ್ಲಿಸಿದರು.


ಡಾ. ಪುನೀತ್ ರಾಜ್‌ಕುಮಾರ್ ಅವರು ನಮ್ಮೊಂದಿಗಿದ್ದರೆ ಇಂದು ತಮ್ಮ ೫೧ನೇ ಜನುಮ ದಿನದ ಸಂಭ್ರಮಾಚರಣೆಯಲ್ಲಿ ತೊಡಗಿಸಿಕೊಂಡಿರುತ್ತಿದ್ದರು. ಆದರೆ ಅವರ ಅಕಾಲಿಕ ಅಗಲಿಕೆಯಿಂದ ನಾಲ್ಕು ವರ್ಷಗಳಾದರೂ ಅಭಿಮಾನಿಗಳ ಮನಸ್ಸಿನಲ್ಲಿ ಅವರ ನೆನಪುಗಳು ಇನ್ನೂ ಜೀವಂತವಾಗಿವೆ.


ಈ ಸಂದರ್ಭದಲ್ಲಿ ಅವರ ಧರ್ಮಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್, ಸಹೋದರರಾದ ಶಿವರಾಜ್‌ಕುಮಾರ್ ಹಾಗೂ ರಾಘವೇಂದ್ರ ರಾಜ್‌ಕುಮಾರ್, ಕುಟುಂಬದ ಸದಸ್ಯರಾದ ವಿನಯ್ ರಾಜ್‌ಕುಮಾರ್ ಮತ್ತು ಯುವರಾಜ್ ಕುಮಾರ್ ಸೇರಿದಂತೆ ಇತರ ಬಂಧುಗಳು ಸಮಾಧಿಗೆ ಪುಷ್ಪನಮನ ಸಲ್ಲಿಸಿ, ಸಮಾಧಿ ಮುಂದೆ ಕೇಕ್ ಕತ್ತರಿಸಿ ಅಪ್ಪುವನ್ನು ಸ್ಮರಿಸಿದರು.


ಪುನೀತ್ ರಾಜ್‌ಕುಮಾರ್ ಅವರು ೨೦೨೧ರ ಅಕ್ಟೋಬರ್ ೨೯ರಂದು ಹೃದಯಾಘಾತದಿಂದ ಅಕಾಲಿಕವಾಗಿ ನಿಧನರಾದರು. ಅವರ ಅಗಲಿಕೆಯಿಂದ ಚಿತ್ರರಂಗ ಮಾತ್ರವಲ್ಲ, ಕೋಟ್ಯಂತರ ಅಭಿಮಾನಿಗಳಿಗೂ ತುಂಬಲಾರದ ನಷ್ಟವಾಗಿದೆ.


ಜನಸಾಗರದ ಭಾವುಕ ನಮನ


ಜನುಮ ದಿನದ ಅಂಗವಾಗಿ ಸಮಾಧಿಗೆ ವಿಶೇಷವಾಗಿ ಹೂವಿನ ಅಲಂಕಾರ ಮಾಡಲಾಗಿತ್ತು. ಕಳೆದ ರಾತ್ರಿ ಅಭಿಮಾನಿಗಳು ಸಮಾಧಿ ಬಳಿ ಜಮಾಯಿಸಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.ಇಂದು ಮುಂಜಾನೆಯಿಂದಲೇ ಸಾವಿರಾರು ಅಭಿಮಾನಿಗಳು ಕಂಠೀರವ ಸ್ಟುಡಿಯೋ ಆವರಣಕ್ಕೆ ಆಗಮಿಸಿ ಸಮಾಧಿಗೆ ಪುಷ್ಪಗುಚ್ಛ ಅರ್ಪಿಸಿ ಕೇಕ್ ಕತ್ತರಿಸಿ ತಮ್ಮ ನೆಚ್ಚಿನ ನಟನಿಗೆ ಜನುಮ ದಿನದ ಶುಭಾಶಯ ಕೋರಿದರು.


ಈ ಬಾರಿ ಮಹಿಳೆಯೊಬ್ಬರು ಪುರಿಯಿಂದ ತಯಾರಿಸಿದ ವಿಶೇಷ ಹಾರವನ್ನು ತಂದು ಸಮಾಧಿಗೆ ಅರ್ಪಿಸಿದ್ದು ಗಮನ ಸೆಳೆಯಿತು. ಕೆಲ ಅಭಿಮಾನಿಗಳು ಅಪ್ಪುವಿನ ಭಾವಚಿತ್ರಗಳನ್ನು ಹಿಡಿದು ಜೈಕಾರ ಹಾಕಿದರು. ಇನ್ನೂ ಕೆಲವರು ಅವರ ಚಿತ್ರಗಳ ಡೈಲಾಗ್‌ಗಳನ್ನು ಹೇಳುತ್ತಾ ತಮ್ಮ ನೆಚ್ಚಿನ ನಟನನ್ನು ಸ್ಮರಿಸಿದರು. ಹಲವರು ಭಾವುಕರಾಗಿ ಕಣ್ಣೀರಿಟ್ಟ ದೃಶ್ಯವೂ ಕಂಡುಬಂತು. ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಬಂದ ಅಭಿಮಾನಿಗಳು ಸ್ವಯಂಪ್ರೇರಿತವಾಗಿ ರಕ್ತದಾನ ಶಿಬಿರ, ಅನ್ನಸಂತರ್ಪಣೆ, ಗೀತಗಾಯನ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸಿದ್ದರು. ದೇಶವಿದೇಶಗಳಿಂದಲೂ ಅಭಿಮಾನಿಗಳು ಆಗಮಿಸಿ ಅಪ್ಪು ಸಮಾಧಿಗೆ ನಮನ ಸಲ್ಲಿಸಿದರು. ಭದ್ರತೆ ನಿಟ್ಟಿನಲ್ಲಿ ಪೊಲೀಸರು ಕಠಿಣ ಬಂದೋಬಸ್ತ್ ಮಾಡಿದ್ದರು.


ಕುಟುಂಬಸ್ಥರ ಭಾವುಕ ನೆನಪು


ಸಮಾಧಿಗೆ ನಮನ ಸಲ್ಲಿಸಿದ ಬಳಿಕ ಮಾತನಾಡಿದ ನಟ ಶಿವರಾಜ್ ಕುಮಾರ್, “ಅಪ್ಪು ಬದುಕಿದ್ದರೆ ಇಂದು ೫೧ನೇ ಜನುಮ ದಿನದ ಸಂಭ್ರಮ ಆಚರಿಸುತ್ತಿದ್ದರು. ಅವರದ್ದು ಮರೆಯಲಾಗದ ವ್ಯಕ್ತಿತ್ವ. ಅವನು ನಮ್ಮೊಂದಿಗಿಲ್ಲ ಎಂದು ನಾವು ಅಂದುಕೊಂಡಿಲ್ಲ. ಸದಾ ಅಭಿಮಾನಿ ದೇವರುಗಳ ಮನಸ್ಸಿನಲ್ಲಿ ನೆಲೆಸಿದ್ದಾನೆ” ಎಂದು ಹೇಳಿದರು.


ನಟ ರಾಘವೇಂದ್ರ ರಾಜ್ ಕುಮಾರ್ ಮಾತನಾಡಿ, “ಅಪ್ಪು ಮರೆಯಲಾಗದ ವ್ಯಕ್ತಿತ್ವ. ಅವರ ಅಭಿಮಾನಿಗಳ ಅಪಾರ ಪ್ರೀತಿಗೆ ನಾನು ಚಿರ ಋಣಿ” ಎಂದರು.
ನಟ ಯುವರಾಜ್ ಕುಮಾರ್ ತಮ್ಮ ಚಿಕ್ಕಪ್ಪನ ನೆನಪನ್ನು ಹಂಚಿಕೊಂಡು, “ಅವರದ್ದು ಮೇರು ವ್ಯಕ್ತಿತ್ವ. ಅವರೊಟ್ಟಿಗೆ ಕಳೆದ ಕ್ಷಣಗಳು ಸ್ಮರಣೀಯ. ನಾವು ಒಟ್ಟಿಗೆ ಊಟ ಮಾಡುತ್ತಿದ್ದೆವು. ಹೊಸ ಎಲೆಕ್ಟ್ರಾನಿಕ್ ವಸ್ತುಗಳ ಬಗ್ಗೆ ಅವರಿಗೆ ವಿಶೇಷ ಆಸಕ್ತಿ ಇತ್ತು. ನಾನು ಮತ್ತು ಅಣ್ಣ ವಿನಯ್ ರಾಜ್‌ಕುಮಾರ್ ಪ್ರತೀ ವರ್ಷದ ಹುಟ್ಟುಹಬ್ಬದಂದು ಅವರಿಗೆ ಟೀಶರ್ಟ್ ಉಡುಗೊರೆಯಾಗಿ ನೀಡುತ್ತಿದ್ದೆವು” ಎಂದು ಹೇಳಿದರು. “ಅವರ ತತ್ವಾದರ್ಶಗಳು ನಮಗೆಲ್ಲ ಮಾದರಿ. ಅವರು ಹಾಕಿಕೊಟ್ಟ ದಾರಿಯಲ್ಲಿ ನಾವು ಕೆಲಸ ಮಾಡಬೇಕಿದೆ,” ಎಂದು ಅವರು ಹೇಳಿದರು.


ಕನ್ನಡಿಗರ ಹೃದಯದಲ್ಲಿ ಶಾಶ್ವತವಾಗಿ ಉಳಿದಿರುವ ಅಪ್ಪುವಿನ ನೆನಪಿನಲ್ಲಿ ಈ ವರ್ಷದ ಜನುಮ ದಿನವೂ ಅಭಿಮಾನಿಗಳ ಪ್ರೀತಿ ಮತ್ತು ಗೌರವದಿಂದ ಭಾವುಕರಾಗಿ ಆಚರಿಸಲಾಯಿತು.