
ಬೀದರ್: ನಗರದ ಕುಂಬಾರವಾಡಾ ಮುಖ್ಯ ರಸ್ತೆಯಲ್ಲಿ ನೂತನವಾಗಿ ನಿರ್ಮಿಸಲಾದ ಮಂದಿರದಲ್ಲಿ ಮೂರು ದಿನಗಳ ಕಾಲ ನಡೆದ ಶ್ರೀ ಬೀರಲಿಂಗೇಶ್ವರ ದೇವರ ಮೂರ್ತಿ ಪ್ರಾಣ ಪ್ರತಿಷ್ಠಾಪನಾ ಮಹೋತ್ಸವವು ರವಿವಾರ ಅತ್ಯಂತ ವೈಭವದಿಂದ ಸಂಪನ್ನಗೊಂಡಿತು.
ಮಹೋತ್ಸವದ ಕೊನೆಯ ದಿನವಾದ ಭಾನುವಾರ ಬೆಳಿಗ್ಗೆ ಶ್ರೀ ಬೀರಲಿಂಗೇಶ್ವರ, ಶ್ರೀ ಮಾಳಿಂಗರಾಯ ಹಾಗೂ ಮಹಾತ್ಮ ಬೊಮ್ಮಗೊಂಡೇಶ್ವರ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ ನೆರವೇರಿತು. ನಂತರ ಮಂದಿರದ ಶಿಖರಕ್ಕೆ ಭವ್ಯ ಕಳಸಾರೋಹಣ ಮಾಡುವ ಮೂಲಕ ಧಾರ್ಮಿಕ ವಿಧಿವಿಧಾನಗಳನ್ನು ಪೂರೈಸಲಾಯಿತು.
ಮಾಜಿ ಸಚಿವ ಬಂಡೆಪ್ಪ ಖಾಶೇಂಪುರ ಹಾಗೂ ವಿಧಾನ ಪರಿಷತ್ ಮಾಜಿ ಸಭಾಪತಿ ರಘುನಾಥರಾವ್ ಮಲ್ಕಾಪುರೆ ಅವರು ನೂತನವಾಗಿ ನಿರ್ಮಿಸಲಾದ ಸಭಾ ಭವನ ಮತ್ತು ಈರಕಾರ ಭವನಗಳನ್ನು ಉದ್ಘಾಟಿಸಿದರು. ಇದಕ್ಕೆ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಅಮೃತರಾವ್ ಚಿಮಕೋಡೆ ಕೈಜೋಡಿಸಿದರು.
2004ರಲ್ಲಿ ತಾವು ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದಾಗ ಆರಂಭವಾದ ಈ ಅಭಿವೃದ್ಧಿ ಕಾರ್ಯ ಇಂದು ಭವ್ಯ ರೂಪ ಪಡೆದಿದೆ. ಸರ್ಕಾರದಿಂದ ಮಂಜೂರಾದ 20 ಲಕ್ಷ ರೂ. ಅನುದಾನ ಮತ್ತು ಭಕ್ತರು ನೀಡಿದ ದೇಣಿಗೆಯನ್ನು ಸಮಿತಿಯವರು ಅತ್ಯಂತ ಪ್ರಾಮಾಣಿಕವಾಗಿ ಬಳಸಿದ್ದಾರೆ ಎಂದು ಬಂಡೆಪ್ಪ ಖಾಶೇಂಪುರ ಮೆಚ್ಚುಗೆ ವ್ಯಕ್ತಪಡಿಸಿದರು.
?”ಬಂದ ಪ್ರತಿಯೊಂದು ಪೈಸೆಗೂ ನ್ಯಾಯ ಒದಗಿಸಿ, ಅತ್ಯಂತ ಪಾರದರ್ಶಕವಾಗಿ ಕೆಲಸ ಮಾಡಲಾಗಿದೆ. ನಮ್ಮಲ್ಲಿ ಎಷ್ಟು ಹಾಸಿಗೆ ಇದೆಯೋ ಅಷ್ಟೇ ಕಾಲು ಚಾಚೋಣ ಎಂಬ ಮಿತವ್ಯಯದ ತತ್ವದಡಿ ಸುಂದರವಾದ ಗುಡಿ ಮತ್ತು ಸಭಾಂಗಣ ನಿರ್ಮಿಸಿರುವುದು ಶ್ಲಾಘನೀಯ,” ಎಂದರು.
ವಿಧಾನ ಪರಿಷತ್ ಮಾಜಿ ಸಭಾಪತಿ ರಘುನಾಥರಾವ್ ಮಲ್ಕಾಪುರೆ ಮಾತನಾಡಿ, ದೇವಸ್ಥಾನದಲ್ಲಿ ನಿರಂತರ ಪೂಜೆ ನಡೆಯಲು ಭಕ್ತರಿಂದ ದೇಣಿಗೆ ಪಡೆದು ಬ್ಯಾಂಕ್‍ನಲ್ಲಿ ಶಾಶ್ವತ ಠೇವಣಿ ಇಡುವಂತೆ ಸಲಹೆ ನೀಡಿದರು. ಪ್ರತಿ ಭಾನುವಾರ ಭಜನೆ ಮತ್ತು ಸತ್ಸಂಗಗಳ ಮೂಲಕ ಮುಂದಿನ ಪೀಳಿಗೆಗೆ ಸಂಸ್ಕøತಿಯನ್ನು ಧಾರೆ ಎರೆಯಬೇಕು ಎಂದು ಅವರು ತಿಳಿಸಿದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಅಮೃತರಾವ್ ಚಿಮಕೋಡೆ ಅವರು ಮಾತನಾಡಿ, “ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ಮಾತು ಅಕ್ಷರಶಃ ಸತ್ಯ. ತಾಯಿಯ ಋಣ ಮತ್ತು ಶಿಕ್ಷಣದ ಮಹತ್ವವನ್ನು ಪ್ರತಿಯೊಬ್ಬರೂ ಅರಿಯಬೇಕು,” ಎಂದು ತಿಳಿಸಿದರು. ಬಸವಣ್ಣ ಮತ್ತು ಕನಕದಾಸರ ತತ್ವಗಳಂತೆ ಸಮಾಜದಲ್ಲಿ ಸಮಾನತೆ ಕಾಣುವಂತೆ ಅವರು ಕರೆ ನೀಡಿದರು.
ಶ್ರೀ ಬೀರಲಿಂಗೇಶ್ವರ ದೇವಸ್ಥಾನದ ಸೇವಾ ಸಮಿತಿ ಅಧ್ಯಕ್ಷ ಪಿ.ಎಸ್. ಇಟಕಂಪಳ್ಳಿ ಮಾತನಾಡಿ, ಸಮಿತಿಯಿಂದ ಅಹಲ್ಯಾಬಾಯಿ ಹೋಳ್ಕರ್ ಮಹಿಳಾ ಸ್ವಸಹಾಯ ಸಂಘ ಸೇರಿದಂತೆ ವಿವಿಧ ಸಂಘಗಳ ಮೂಲಕ ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಒತ್ತು ನೀಡಲಾಗುತ್ತಿದೆ. ಈಗಾಗಲೇ ಸುಮಾರು 10.25 ಲಕ್ಷ ರೂ. ನಿಧಿಯನ್ನು ಸಂಗ್ರಹಿಸಿ ಪಾರದರ್ಶಕವಾಗಿ ಅಭಿವೃದ್ಧಿ ಕೆಲಸಗಳಿಗೆ ಬಳಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಬಸವಕಲ್ಯಾಣ ಗೌರನ ಶ್ರೀ ಬೀರಲಿಂಗೇಶ್ವರ ಮಠದ ಶ್ರೀ ಬೀರಪ್ಪ ಮುತ್ಯ, ಮಾಜಿ ಜಿಲ್ಲಾ ಪಂಚಾಯತ ಅಧ್ಯಕ್ಷ ಭಾರತಿಬಾಯಿ ಶೇರಿಕಾರ, ಅಖಿಲ ಭಾರತ ಗೊಂಡ ಆದಿವಾಸಿ ಸಂಘದ ಕರ್ನಾಟಕ ಘಟಕದ ಪ್ರಧಾನ ಕಾರ್ಯದರ್ಶಿ ಮಾಳಪ್ಪ ಅಡಸಾರೆ, ಮಾಜಿ ಜಿಲ್ಲಾ ಪಂಚಾಯತ ಅಧ್ಯಕ್ಷ ಬಾಬು ಖಾಶೇಂಪುರ, ಮಾಜಿ ಗ್ರಾಮ ಪಂಚಾಯತ ಅಧ್ಯಕ್ಷ ಕಾಮಶೆಟ್ಟಿ ಹಳಿಯಂಬರ, ಮುಖಂಡರಾದ ಈಶ್ವರ ಮಲ್ಕಾಪುರ, ಭೀಮರಾವ್ ಜನಾಪೇಟ್, ಸಂತೋಷ ಜೋಳದಾಪಕೆ, ಬಾಬುರಾವ ಸಂಗೊಳಗಿ, ಅಶೋಕ್ ಮುದಾಳೆ, ಗುರುನಾಥ ಮುದಾಳೆ, ಶ್ರೀಪತಿ ಮೇತ್ರೆ, ವಿಠಲರಾವ ಪೀಠಗೋಡ, ರಘುನಾಥ ಭುರೆ, ಕಲ್ಯಾಣರಾವ ಅಡಸಾರೆ, ಜಗನ್ನಾಥ ಜಮಗಿ, ಧನ್ನರಾಜ್ ಗುಡಮೆ, ಲೋಕೇಶ್ ಮೇತ್ರೆ, ಸಂಜು ಡೊಳ್ಳೆ, ಬಾಬುರಾವ್ ಸೇಳಕೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.






















