
ಕಲಬುರಗಿ,ಅ.18-ಶಹಾಬಾದ ತಾಲ್ಲೂಕಿನ ಮುತ್ತಗಾ ಗ್ರಾಮದಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ ಮೂರ್ತಿ ವಿರೂಪಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಎಸ್‍ಪಿ ಅಡ್ಡೂರು ಶ್ರೀನಿವಾಸಲು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅ.10 ರಂದು ಬೆಳಗಿನಜಾವ ಮುತ್ತಗಾ ಗ್ರಾಮದಲ್ಲಿ ನಿಶಶರಣ ಅಂಬಿಗರ ಚೌಡಯ್ಯನವರ ಮೂರ್ತಿಯನ್ನು ದುಷ್ಕರ್ಮಿಗಳು ವಿರೂಪಗೊಳಿಸಿದ್ದರು. ಈ ಬಗ್ಗೆ ಶಹಾಬಾದ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಗಳ ಪತ್ತೆಗೆ ಹೆಚ್ಚುವರಿ ಎಸ್‍ಪಿ ಮಹೇಶ್ ಮೇಘಣ್ಣನವರ್, ಶಹಾಬಾದ ಡಿಎಸ್‍ಪಿ ಶಂಕರಗೌಡ ಪಾಟೀಲ ಅವರ ಮಾರ್ಗದರ್ಶನದಲ್ಲಿ ಶಹಾಬಾದ ಪಿಐ ನಟರಾಜ ಲಾಡೆ, ಚಿತ್ತಾಪುರ ಸಿಪಿಐ ಚಂದ್ರಶೇಖರ ತಿಗಡಿ, ಕಾಳಗಿ ಸಿಪಿಐ ಜಗದೇವಪ್ಪ ಪಾಳಾ ಅವರ ನೇತೃತ್ವದಲ್ಲಿ ವಾಡಿ ಪಿಎಸ್‍ಐ ತಿರುಮಲೇಶ, ಪಿಎಸ್‍ಐಗಳಾದ ಗೌತಮ, ಸಿದ್ದಲಿಂಗ, ಚಂದ್ರಕಾಂತ, ಎಎಸ್‍ಐಗಳಾದ ಗುಂಡಪ್ಪ, ಮಲ್ಲಿಕಾರ್ಜುನ, ಸಿಬ್ಬಂದಿಗಳಾದ ನಾಗೇಂದ್ರ, ಮಲ್ಲಿಕಾರ್ಜುನ, ದೊಡ್ಡಪ್ಪ, ಬಲರಾಮ, ಸಮತೋಷ, ಹುಸೇನ ಪಾಷಾ, ಬಳಿಯನ ಸಿದ್ದಯ್ಯಾ, ಆರೀಫ್ ಅವರನ್ನು ಒಳಗೊಂಡ ಮೂರು ತಂಡ ರಚಿಸಲಾಗಿತ್ತು. ಈ ತಂಡ ತನಿಖೆ ನಡೆಸಿ ಜೀವಣಗಿ ಗ್ರಾಮದ ಮಲ್ಲಿಕಾರ್ಜುನ ತಂದೆ ವಿಶ್ವರಾಧ್ಯ ಪಾಟೀಲ, ಮುತ್ತಗಿ ಗ್ರಾಮದ ಸಾಬಣ್ಣ ತಂದೆ ಮಲ್ಲಪ್ಪ ಪಟ್ಟೆದಾರ ಮತ್ತು ಶಿವರಾಜ ತಂದೆ ಶಂಕರ ನಾಟಿಕಾರ ಎಂಬುವವರನ್ನು ಬಂಧಿಸಿ ಮೊಬೈಲ್‍ಗಳನ್ನು ಜಪ್ತಿ ಮಾಡಿದೆ. ಬಂಧಿತ ಮೂವರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ವಿವರಿಸಿದರು.
ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯವನ್ನು ಅವರು ಶ್ಲಾಘಿಸಿದರು.