
ಆಳಂದ,ಅ.29-ಇಲ್ಲಿನ ತಾಲೂಕು ಪಂಚಾಯಿತಿ ಕಚೇರಿಯು ಮಂಗಳವಾರ ಬೆಳಿಗ್ಗೆ 11 ಗಂಟೆಯಾದರೂ ಸಿಬ್ಬಂದಿಗಳಿಲ್ಲದೆ ಬಿಕೋ ಎನ್ನುತಲಿತ್ತು.
ಕಚೇರಿಯೊಳಗೆ ಕೇವಲ ಇಬ್ಬರು ಕ್ಲರ್ಕ್‍ಗಳು ಕಾರ್ಯನಿರ್ವಹಿಸುತ್ತಿದ್ದರೆ, ಇತರ ಅಧಿಕಾರಿಗಳು ಯಾರೂ ಹಾಜರಿರಲಿಲ್ಲ. ಕಚೇರಿಯೊಳಗೆ ನಿಷ್ಕ್ರಿಯತೆ ಮತ್ತು ನಿರ್ಲಕ್ಷ್ಯ ಆವರಿಸಿಕೊಂಡಿದ್ದು, ಜನಸಾಮಾನ್ಯರ ಕೆಲಸಗಳು ನಿಂತು ಹೋಗುವ ಪರಿಸ್ಥಿತಿ ಉಂಟಾಗಿದೆ. ತಾಲೂಕಿನ ವಿವಿಧ ಶಾಖೆಗಳಲ್ಲಿಯೂ ಇದೇ ದೃಶ್ಯ ಕಂಡುಬರುತ್ತಿದ್ದು, ಅಧಿಕಾರಿಗಳ ಲಗಾಮಿಲ್ಲದ ಆಡಳಿತಕ್ಕೆ ಇದು ಸಾಕ್ಷಿಯಾಗಿದೆ. ಕೆಲವರು ಕಚೇರಿಗೆ ಹಾಜರಾದರೂ ಕೇವಲ ಕಾಟಾಚಾರಕ್ಕಾಗಿ ಬಂದು ತೆರಳುವಂತಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಕೆಲಸಕ್ಕೆ ಕರೆಯಬೇಡಿ, ಊಟಕ್ಕೆ ಮರೆಯಬೇಡಿ” ಎಂಬ ನಾಣುನುಡಿಯಂತೆ, ಅಧಿಕಾರಿಗಳು ಸಂಬಳಕ್ಕಾಗಿ ಮಾತ್ರ ಕಚೇರಿಯ ಹೆಸರು ಉಳಿಸಿಕೊಂಡಿರುವಂತಾಗಿದೆ. ಕರ್ತವ್ಯ ನಿರ್ವಹಣೆಯಲ್ಲಿ ಗಂಭೀರ ಶಿಸ್ತಿನ ಕೊರತೆ ಗೋಚರಿಸುತ್ತಿದ್ದು, ಇದರಿಂದ ಸಾರ್ವಜನಿಕರ ಕೆಲಸಗಳಿಗೆ ತೊಂದರೆ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಮೇಲಾಧಿಕಾರಿಗಳು ಮತ್ತು ಜನಪ್ರತಿನಿಧಿಗಳು ತಕ್ಷಣ ಕ್ರಮ ಕೈಗೊಂಡು ಕರ್ತವ್ಯಲೋಪ ತೋರಿಸುವ ಅಧಿಕಾರಿಗಳಿಗೆ ತಕ್ಕ ಪಾಠ ಕಲಿಸುವುದು ಅಗತ್ಯ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಈ ಕುರಿತು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಾನಪ್ಪ ಕಟ್ಟಿಮನಿ ಅವರು ಪ್ರತಿಕ್ರಿಯೆ ನೀಡುತ್ತ “ನಾನು ಗಣತಿ ಕರ್ತವ್ಯಕ್ಕಾಗಿ ಹೊರಗಡೆ ಇದ್ದೆ. ಕಚೇರಿಯಲ್ಲಿ ಸಿಬ್ಬಂದಿಗಳು ಇಲ್ಲದಿರುವುದು ಗಮನಕ್ಕೆ ಬಂದಿದೆ. ಈ ಕುರಿತು ಶೀಘ್ರದಲ್ಲೇ ನೋಟಿಸ್ ಜಾರಿ ಮಾಡಲಾಗುವುದು,” ಎಂದು ಸ್ಪಷ್ಟಪಡಿಸಿದರು.






























