Home ಜಿಲ್ಲೆ ಗೋಡಂಬಿ ಬೆಳೆಯನ್ನು ಬಂಜರು ಭೂಮಿಯಲ್ಲಿ ಬೆಳೆಯಲು ಸಲಹೆ

ಗೋಡಂಬಿ ಬೆಳೆಯನ್ನು ಬಂಜರು ಭೂಮಿಯಲ್ಲಿ ಬೆಳೆಯಲು ಸಲಹೆ

ಬೀದರ,ಮಾ.14: ಬಂಗಾರದ ಬೆಳೆ ಎಂದೇ ಕರೆಯಲ್ಪಡುವ ಗೋಡಂಬಿ ಬೆಳೆಯನ್ನು ರೈತರು ಕಪ್ಪು ಮಣ್ಣಿನಲ್ಲಿ ಬೆಳೆಯದೆ, ಕೆಂಪು ಮಣ್ಣಿನಲ್ಲಿ ಮತ್ತು ಬಂಜರು ಭೂಮಿಯಲ್ಲಿ ಮಾತ್ರ ಬೆಳೆಯಬೇಕು. ಇದನ್ನು ಬೆಳೆಯಲು ತೋಟಗಾರಿಕೆ ಇಲಾಖೆಯ ಸಹಾಯ ಸಹಕಾರ ಮತ್ತು ತೋಟಗಾರಿಕೆ ವಿಜ್ಞಾನಿಗಳ ತಾಂತ್ರಿಕ ಸಲಹೆ ಪಡೆದು ಹೆಚ್ಚಿನ ಲಾಭ ಪಡೆಯಬೇಕೆಂದು ಬೀದರ ತೋಟಗಾರಿಕಾ ಕಾಲೇಜಿನ ಡೀನ್ ಡಾ.ಎಸ್.ವಿ.ಪಾಟೀಲ್ ಹೇಳಿದರು.
ಅವರು ಬೀದರ ತಾಲೂಕಿನ ಕಮಠಾಣಾ ಗ್ರಾಮದ ನಾಗನಾಥರಾವ ನಿಡೋದೆ ಅವರ ಗೋಡಂಬಿ ಹೊಲದಲ್ಲಿ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಮಿಷನ್ ಅಡಿಯಲ್ಲಿ ಗೋಡಂಬಿ ಬೆಳೆಯ ಮೇಲೆ ರೈತರಿಗಾಗಿ ಆಯೋಜಿಸಿದ ಒಂದು ದಿನದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಳೆದ 14 ವರ್ಷಗಳಿಂದ ಮೂರು ಎಕರೆ ಪ್ರದೇಶದಲ್ಲಿ ಗೋಡಂಬಿ ಬೆಳೆಯನ್ನುಯಶಸ್ವಿಯಾಗಿ ಬೆಳೆದು ವಾರ್ಷಿಕ 2.50 ಲಕ್ಷ ರೂಪಾಯಿಗೂ ಅಧಿಕ ಲಾಭ ಪಡೆಯುತ್ತಿರುವ ನಾಗನಾಥರಾವ ನಿಡೋದೆ ಮಾತನಾಡಿ, ಗೋಡಂಬಿ ಬೆಳೆಯನ್ನು ಬೆಳೆಯಲು ರೈತರಿಗೆ ಸ್ವಲ್ಪ ಆರ್ಥಿಕ ಸಹಾಯ ನೀಡುವ ಯಾವುದಾದರೂ ಒಂದು ಯೋಜನೆಯನ್ನು ಜಾರಿಗೊಳಿಸಿ ಎಂದು ಮನವಿ ಮಾಡಿದರು. ಮೂರ್ನಾಲ್ಕು ವರ್ಷ ರೈತರು ಗೋಡಂಬಿ ಬೆಳೆಯಲು ಶ್ರಮಿಸಿದರೆ ನಂತರ ಪ್ರತಿ ವರ್ಷ ನಿರಂತರ ಆದಾಯ ಪಡೆಯಬಹುದು ಎಂದು ಹೇಳಿದರು.
ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬೀದರ ತೋಟಗಾರಿಕೆ ಕಾಲೇಜು ಮತ್ತು ಕೊಚ್ಚಿಯ ಗೋಡಂಬಿ ಮತ್ತು ಕೋಕೋ ಅಭಿವೃದ್ಧಿ ನಿರ್ದೇಶನಾಲಯದ ಸಹಯೋಗದಲ್ಲಿ ಆಯೋಜಿಸಿದ ಈ ಕಾರ್ಯಕ್ರಮದಲ್ಲಿ ತೋಟಗಾರಿಕೆ ಕಾಲೇಜಿನ ಡಾ.ಮಹ್ಮದ್ ಫಾರೂಕ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕುಶಾಲರಾವ ಮುಖ್ಯ ಅತಿಥಿಗಳಾಗಿದ್ದರು.
ತೋಟಗಾರಿಕೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕರುಗಳಾದ ಡಾ.ವಿ.ಪಿ.ಸಿಂಗ್ ಗೋಡಂಬಿ ಉತ್ಪಾದನೆಯಲ್ಲಿ ತಾಂತ್ರಿಕತೆ,ಡಾ.ಅಬ್ದುಲ್ ಕರೀಂ ಎಂ. ಗೋಡಂಬಿ ಬೆಳೆಯ ರೋಗ ನಿರ್ವಹಣೆ, ಡಾ. ರಾಜಕುಮಾರ ಎಂ. ಗೋಡಂಬಿ ಬೆಳೆಯ ಕೀಟ ನಿರ್ವಹಣೆ ಮತ್ತು ಡಾ. ಹರೀಶ ಟಿ. ಗೋಡಂಬಿ ಸುಗ್ಗಿಯ ನಂತರದ ಸಂಸ್ಕರಣೆ ಮತ್ತು ಮೌಲ್ಯವರ್ಧಿತ ಉತ್ಪನ್ನಗಳು ಕುರಿತು ರೈತರಿಗೆ ತಾಂತ್ರಿಕ ಸಲಹೆ ಮತ್ತು ಮಾರ್ಗದರ್ಶನ ನೀಡಿದರು. ತೋಟಗಾರಿಕೆ ಕಾಲೇಜಿನ ವಿಜಯ ಮಹಾಂತೇಶ ಕಾರ್ಯಕ್ರಮ ನಿರೂಪಿಸಿದರು. ತರಬೇತಿ ಕಾರ್ಯಕ್ರಮದಲ್ಲಿ ಸುಮಾರು 50 ರೈತರು ಪಾಲ್ಗೊಂಡಿದ್ದರು.