Home ಮುಖಪುಟ ಸುದ್ದಿ ವಕ್ಫ್ ಒತ್ತುವರಿ ಆಸ್ತಿ ತೆರವಿಗೆ ಕ್ರಮ

ವಕ್ಫ್ ಒತ್ತುವರಿ ಆಸ್ತಿ ತೆರವಿಗೆ ಕ್ರಮ

ಬೆಂಗಳೂರು, ಮಾ. ೧೬- ರಾಜ್ಯದಲ್ಲಿ ವಕ್ಫ್ ಆಸ್ತಿಗಳ ಒತ್ತುವರಿಯನ್ನು ತೆರವುಗೊಳಿಸಿ ಆಸ್ತಿಗಳನ್ನು ಮರಳಿ ಪಡೆಯಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ವಸತಿ, ವಕ್ಫ್ ಹಾಗೂ ಅಲ್ಪಸಂಖ್ಯಾತ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್ ವಿಧಾನಸಭೆಯಲ್ಲಿಂದು ತಿಳಿಸಿದರು.


ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್‌ನ ಎಂ.ವೈ.ಪಾಟೀಲ್ ರವರ ಪ್ರಶ್ನೆಗೆ ಉತ್ತರ ನೀಡಿದ ಅವರು, ರಾಜ್ಯದಲ್ಲಿ ೧,೧೨,೮೬೦ ಎಕರೆ ವಕ್ಫ್ ಆಸ್ತಿ ಇದೆ. ಈ ಆಸ್ತಿ ಸರ್ಕಾರದಿಂದ ಬಂದದ್ದಲ್ಲ. ಖಾಸಗಿ ವ್ಯಕ್ತಿಗಳು ಸಮಾಜದ ಅಭಿವೃದ್ಧಿಗೆ ಕೊಟ್ಟಿದ್ದು. ಇದರಲ್ಲಿ ಸುಮಾರು ೧೭ ಸಾವಿರ ಎಕರೆ ಒತ್ತುವರಿಯಾಗಿದೆ. ಈ ಒತ್ತುವರಿಯನ್ನು ಮಾಡಿದವರು ಮುಸ್ಲಿಂ ಸಮುದಾಯದವರೇ ಎಂದು ಹೇಳಿದರು.


ವಕ್ಫ್ ಆಸ್ತಿ ಒತ್ತುವರಿ ತೆರವಿಗಾಗಿ ವಕ್ಫ್ ಅದಾಲತ್‌ನ್ನು ನಡೆಸಿದ್ದೇವೆ. ವಕ್ಫ್ ಅದಾಲತ್‌ನ ಬಗ್ಗೆ ಹಿಂದೆ ಪ್ರತಿಪಕ್ಷಗಳು ಟೀಕೆ ಮಾಡಿದ್ದವು. ಆದರೆ ಈ ಅದಾಲತ್ ನಡೆಸಿರುವುದು ವಕ್ಫ್ ಆಸ್ತಿ ಉಳಿಸಲು ಎಂದು ಅವರು ಹೇಳಿದರು.


ದೇವಸ್ಥಾನ, ಶಾಲೆಗಳಿಗೆ ಬಳಕೆಯಾಗಿರುವ ವಕ್ಫ್ ಆಸ್ತಿಗಳನ್ನು ನಾವು ಹಾಗೆಯೇ ಬಿಟ್ಟಿದ್ದೇವೆ. ಉಳಿದಂತೆ ವಕ್ಫ್ ಆಸ್ತಿಗಳನ್ನು ಒತ್ತುವರಿ ಮಾಡಿಕೊಂಡಿರುವುದನ್ನು ತೆರವು ಮಾಡುತ್ತಿದ್ದೇವೆ ಎಂದು ಅವರು ಹೇಳಿದರು.


ಈ ಹಂತದಲ್ಲಿ ಮಧ್ಯೆ ಪ್ರವೇಶಿಸಿ ಮಾತನಾಡಿದ ಪ್ರತಿಪಕ್ಷ ನಾಯಕ ಆರ್. ಅಶೋಕ್, ವಕ್ಫ್ ಆಸ್ತಿ ಒತ್ತುವರಿ ತೆರವು ಮಾಡಿ. ನಮ್ಮದೇನು ಅಭ್ಯಂತರವಿಲ್ಲ. ಬೆಂಗಳೂರಿನ ವಿನ್‌ಸರ್‌ಮ್ಯಾನರ್ವಲ್ ಹೋಟೆಲ್ ಇರುವ ಜಾಗ ಸಹ ವಕ್ಫ್ ಆಸ್ತಿ. ಆ ಬಗ್ಗೆಯೂ ಸಚಿವರೇ ಮಾತನಾಡಿ. ವಕ್ಫ್ ಆಸ್ತಿ ಕಬಳಿಕೆಯ ಬಗ್ಗೆ ತನಿಖೆ ನಡೆಸಿ. ನಮ್ಮದು ನಮ್ಮದೇ, ನಿಮ್ಮದು ನಮ್ಮದೇ ಎಂದಾಗಬಾರದು ಎಂದು ಹೇಳಿದರು.


ಆಗ ಮಾತು ಮುಂದುವರೆಸಿದ ಸಚಿವ ಜಮೀರ್ ಅಹಮದ್ ಖಾನ್, ವಕ್ಫ್ ಆಸ್ತಿಗಳನ್ನು ಯಾರೇ ಒತ್ತುವರಿ ಮಾಡಿಕೊಂಡಿದ್ದರೂ ಅವುಗಳನ್ನು ವಾಪಸ್ ಪಡೆಯುತ್ತೇವೆ. ಅಫ್ಜಲ್ ಪುರ ತಾಲ್ಲೂಕಿನಲ್ಲೂ ೩೦ ವಕ್ಫ್ ಆಸ್ತಿಗಳನ್ನು ಒತ್ತುವರಿ ಮಾಡಲಾಗಿತ್ತು. ಅವುಗಳಲ್ಲಿ ೨೩ ಪ್ರಕರಣಗಳನ್ನು ಇತ್ಯರ್ಥಪಡಿಸಿ ಸ್ವಾಧೀನಕ್ಕೆ ಪಡೆದಿದ್ದೇವೆ ಎಂದು ತಿಳಿಸಿದರು.