
ಕಲಬುರಗಿ,ಮಾ.25-ಬೈಕ್ ಡಿಕ್ಕಿ ಹೊಡೆದು ವ್ಯಕ್ತಿಯೊಬ್ಬನ ಸಾವಿಗೆ ಕಾರಣನಾದ ಆರೋಪಿಗೆ ಮತ್ತು ಆತನಿಗೆ ವಿಮೆ ಮಾಡಿಸದ ಮತ್ತು ವಾಹನ ಚಾಲನೆ ಲೈಸನ್ಸ್ ಹೊಂದದೇ ಇರುವ ಬೈಕ್ ಓಡಿಸಲು ನೀಡಿದ ಆರೋಪಿಗೆ ಇಲ್ಲಿನ 4ನೇ ಹೆಚ್ಚುವರಿ ಸಿ.ಜೆ.ಎಂ ಮತ್ತು ಜೆ.ಎಂ.ಎಫ್.ಸಿ.ನ್ಯಾಯಾಲಯ ಕಾರಾಗೃಹ ಶಿಕ್ಷೆ ವಿಧಿಸಿದೆ.
2021 ರಲ್ಲಿ ಕಲಬುರಗಿ-ಹುಮನಾಬಾದ ರಸ್ತೆಯಲ್ಲಿ ಬರುವ ಕಪನೂರ ಗ್ರಾಮದ ಅಪ್ಪ ಮೀಲ್ಸ್ ಹತ್ತಿರ ಹುಸೇನಿ ತಂದೆ ಸುಭಾಷ ಕೂನಾಳೆ ಎಂಬುವವರು ಬೈಕ್ ಮೇಲೆ ತಮ್ಮ ಚಿಕ್ಕಪ್ಪ ಮಲ್ಲಿಕಾರ್ಜುನ ಮಂಡಲಿ ಎಂಬುವವರನ್ನು ಕೂಡಿಸಿಕೊಂಡು ಕೋಹಿನೂರವಾಡಿಯಿಂದ ಕಲಬುರಗಿಗೆ ಬಂದು ಚಿಕ್ಕಪ್ಪನನ್ನು ಬಿಟ್ಟು ಅದೇ ಬೈಕ್‍ನಲ್ಲಿ ಊರಿಗೆ ಹೋಗುವಾಗÀ ಮಹಾಗಾಂವ ಕಡೆಯಿಂದ ಕಲಬುರಗಿಗೆ ಬರುತ್ತಿದ್ದ ಬೈಕ್ ಡಿಕ್ಕಿ ಹೊಡೆದು ಸ್ಥಳದಲ್ಲಿಯೇ ಮೃತಪಟ್ಟಿದ್ದ. ಈ ಸಂಬಂಧ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ಸಂಚಾರಿ ಪೊಲೀಸ್ ಠಾಣೆ-2 ರಫೀಕ್ ಮುಲ್ಲಾ, ಸುಮಂಗಲಾ ಮತ್ತು ಬಿ.ಅಮರೇಶ ಅವರು ಆರೋಪಿತರ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿ ಕಲಬುರಗಿಯ 4ನೇ ಹೆಚ್ಚುವರಿ ಸಿ.ಜೆ.ಎಂ.ಮತ್ತು ಜೆ.ಎಂ.ಎಫ್.ಸಿ ನ್ಯಾಯಾಧೀಶ ದೇಶಮುಖ ಶಿವಕುಮಾರ ಅವರು ಆರೋಪಿ ಜುಬೈರ್ ಅಲ್ಲಾಮಗೆ 5 ಸಾವಿರ ರೂ.ದಂಡ ಮತ್ತು 2 ದಿನದ ಕಾರಾಗೃಹ ಶಿಕ್ಷೆ ಮತ್ತು ಈತನಿಗೆ ವಿಮೆ ಮಾಡಿಸಿದ ಮತ್ತು ವಾಹನ ಚಾಲನೆ ಲೈಸನ್ಸ್ ಹೊಂದದೇ ಇರುವ ಬೈಕ್ ಓಡಿಸಲು ನೀಡಿದ ಆರೋಪಿ ನಂ.2 ಈತನಿಗೆ 1 ಸಾವಿರ ರೂ.ದಂಡ ಮತ್ತು ಒಂದು ದಿನದ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.
ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕ ಶಿವಶರಣಪ್ಪ ಹೋತಪೇಟ್ ವಾದ ಮಂಡಿಸಿದ್ದರು.




























