
ಅಥಣಿ :ಡಿ.೮: ಮಾನಸಿಕ ಮತ್ತು ದೈಹಿಕ ಬೆಳವಣಿಗೆಗೆ ಕ್ರೀಡೆಗಳು ಸಹಕಾರಿಯಾಗುವುದರ ಜತೆಗೆ ಎಲ್ಲರ ಜೊತೆ ಬಾಂಧವ್ಯವನ್ನು ಗಟ್ಟಿಗೊಳಿಸುತ್ತದೆ. ಯುವಜನರು ಕ್ರೀಡೆಗಳಲ್ಲಿ ಹೆಚ್ಚು ಹೆಚ್ಚು ತೊಡಗಿಸಿಕೊಳ್ಳಬೇಕು. ಕ್ರೀಡೆಗಳಲ್ಲಿ ಸೋಲು-ಗೆಲುವು ಸಾಮಾನ್ಯ, ಪ್ರತಿಯೊಬ್ಬರೂ ಕ್ರೀಡಾ ಮನೋಭಾವವನ್ನು ಬೆಳೆಸಿಕೊಂಡು ಸೋಲು-ಗೆಲುವನ್ನು ಸಮನಾಗಿ ಸ್ವೀಕರಿಸಿ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳುವಂತಾಗಬೇಕು ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಅವರು ಪಟ್ಟಣದ ಭೋಜರಾಜ ದೇಸಾಯಿ ಕ್ರೀಡಾಂಗಣದಲ್ಲಿ ಜರುಗಿದ ೨೦೨೫-೨೬ ನೆ ಸಾಲಿನ ರಾಜ್ಯಮಟ್ಟದ ಪದವಿ ಪೂರ್ವ ಕಾಲೇಜುಗಳ ಹ್ಯಾಂಡ್ ಬಾಲ್ ಪಂದ್ಯಾವಳಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿಕೊಂಡು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಸೋಲು ಗೆಲುವು ಒಂದೇ ನಾಣ್ಯದ ಎರಡು ಮುಖಗಳು. ಸತತ ಪರಿಶ್ರಮದ ಜೊತೆಗೆ ಮುಖ್ಯವಾಗಿ ಗುರಿ ಇಟ್ಟುಕೊಂಡು ಕಲುಷಿತ ಆಹಾರ ತ್ಯಜಿಸಿ ಉತ್ತಮ ದೇಶಿ ಆಹಾರದ ಜೊತೆಗೆ ಸದೃಢ ಶರೀರ ಹೊಂದಿ ಅತ್ಯುನ್ನತ ಸಾಧನೆ ಮಾಡಬೇಕು ಎಂದರು
ಕ್ರೀಡಾಪಟುಗಳಿಗೆ ಸಾಧಿಸುವ ಛಲಬೇಕು. ನಾವು ಕೂಡ ನಮ್ಮ ತಾಲೂಕಿನ ರಾಷ್ಟ್ರಮಟ್ಟದ ಅಥ್ಲೆಟಿಕ್ ಆಟಗಾರ್ತಿ ಕಲಾವತಿ ಕೊಳವಿ ಅವರಂತೆ ಸಾಧನೆ ಮಾಡೇ ಮಾಡುತ್ತೇನೆ ಎಂಬ ಭರವಸೆ ಇರಬೇಕು. ಇಂದು ಅಥಣಿ ಹೆಸರನ್ನು ರಾಜ್ಯ ಮಟ್ಟದಲ್ಲಿ ಪರಿಚಯಿಸಿದ ಕೀರ್ತಿ ಜೆ ಎ ಪದವಿಪೂರ್ವ ಕಾಲೇಜಿಗೆ ಸಲ್ಲುತ್ತದೆ. ರಾಜ್ಯದ ೩೩ ಜಿಲ್ಲೆಯ ಎಲ್ಲ ಕ್ರೀಡಾಪಟುಗಳು ನಮ್ಮ ತಾಲೂಕನ್ನು ಹಾಗೂ ಜೆ ಎ ಕಾಲೇಜನ್ನು ಸ್ಮರಣೆಯಲ್ಲಿಡುವಂತೆ ನಾವೆಲ್ಲ ನೋಡಿಕೊಳ್ಳಬೇಕು. ನಮ್ಮ ತಾಲೂಕಿಗೆ ದೊರೆತಿರುವ ಅವಕಾಶವನ್ನು ಎಲ್ಲರೂ ಯಾವುದೇ ಕುಂದು ಕೊರತೆಗಳಾಗದಂತೆ ನೋಡಿಕೊಂಡು ಯಶಸ್ವಿಯಾಗಿ ಜರುಗಲು ಶ್ರಮಿಸೋಣ. ನನ್ನಿಂದ ಯಾವುದೇ ಸಹಾಯ ಬೇಕಾದರೆ ಸಂಪೂರ್ಣ ಸಹಕಾರ ನೀಡುತ್ತೇನೆ ಎಂದು ಹೇಳಿದರು.
ಈ ವೇಳೆ ಪ್ರಾಸ್ತಾವಿಕ ನುಡಿಗಳನ್ನಾಡಿದ ಜೆ ಎ ಪ ಪೂ ಕಾಲೇಜಿನ ಶೈಕ್ಷಣಿಕ ಅಭಿವೃದ್ಧಿ ಸಮಿತಿ ಅಧ್ಯಕ್ಷ ಸಂದೀಪ ಸಂಗೊರಾಮ ಮಾತನಾಡಿ ನಮ್ಮ ಸಂಸ್ಥೆ ಸದಾ ಕ್ರೀಡೆಗಳಿಗೆ ಪ್ರೋತ್ಸಾಹ ನೀಡುತ್ತಾ ಬಂದಿದೆ .೩೩ ಜಿಲ್ಲೆಯ ೬೬ ತಂಡಗಳು ೧೦೫೨ ವಿದ್ಯಾರ್ಥಿಗಳು ಆಟವಾಡುತ್ತಿದ್ದಾರೆ. ಆಟ ಆಡಲು ಬಂದಿರುವ ಎಲ್ಲ ಕ್ರೀಡಾ ಪಟುಗಳು ಮುಕ್ತವಾಗಿ ಆಟ ಆಡಿ ಯಾವುದೇ ಅಡ್ಡಿ ಆತಂಕ ಆಗದಂತೆ ಆಟ ಆಡಿ ಜೊತೆಗೆ ಅನುಭವ ಪಡೆದುಕೊಳ್ಳಿ ತಮಗೆಲ್ಲರಿಗೂ ನಮ್ಮ ಸಂಸ್ಥೆ ಎಲ್ಲ ಸೌಲಭ್ಯ ಕಲ್ಪಿಸಿಕೊಡುವುದು ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಚಿಕ್ಕೋಡಿ ಪಿಯು ಉಪನಿರ್ದೇಶಕ ಪಾಂಡುರAಗ ಭಂಡಾರಿ ಮಾತನಾಡಿ ಅವರು ಕ್ರೀಡಾ ಪಟುಗಳು ಉತ್ತಮ ರೀತಿಯಲ್ಲಿ ಆಟ ಆಡಿ ಇಲ್ಲಿ ಎಲ್ಲ ನಿರ್ಣಾಯಕರು ನಿಷ್ಪಕ್ಷಪಾತವಾಗಿ ನಿರ್ಣಯ ನೀಡಲಿದ್ದಾರೆ. ನಮ್ಮ ಶೈಕ್ಷಣಿಕ ಜಿಲ್ಲೆಯ ವ್ಯಾಪ್ತಿಯ ಅಥಣಿಯಲ್ಲಿ ಕ್ರೀಡಾಕೂಟ ನಡೆಯುತ್ತಿರುವುದು ಸಂತೋಷ ತಂದಿದೆ ಇಲಾಖೆಗೆ ಧನ್ಯವಾದ ತಿಳಿಸುವುದಾಗಿ ಹೇಳಿದರು.
ಜೆ ಇ ಸಂಸ್ಥೆ ಕಾರ್ಯಧ್ಯಕ್ಷ ಡಾ. ರಾಮ ಬಿ ಕುಲಕರ್ಣಿ ಮಾತನಾಡುತ್ತ ಕ್ರೀಡೆ ಅಂದರೆ ಶಿಸ್ತು ಸಂಯಮವುಳ್ಳದ್ದು. ಮುಖ್ಯವಾಗಿ ವಿದ್ಯಾರ್ಥಿಗಳಿಗೆ ಇಂದು ಹಬ್ಬದ ದಿನ.ಹ್ಯಾಂಡ್ ಬಾಲ್ ಇತಿಹಾಸ ನೋಡಿದಾಗ ಹ್ಯಾಂಡ್ ಬಾಲ್ ಡೆನ್ಮಾರ್ಕ್ ನಲ್ಲಿ
ಆರಂಭವಾದ ಕ್ರೀಡೆ ಇಂದಿನವರೆಗೂ ಬೆಳೆದು ಬಂದಿದೆ. ಎಲ್ಲ ಆಟಗಾರರು ಪ್ರಾಮಾಣಿಕವಾಗಿ ಧೈರ್ಯದಿಂದ ಆಟ ಆಡಿ ನಾವು ನಿಮ್ಮ ಜೊತೆಗೆ ಇರುತ್ತೇವೆ. ಕ್ರೀಡಾ ಸ್ಪರ್ದಾಳುಗಳಲ್ಲಿ ಕೆಲವರು ಮಾತ್ರ ಬಹುಮಾನ ಪಡೆಯಲು ಸಾಧ್ಯ.ಎಲ್ಲರೂ ಬಹುಮಾನ ಪಡೆಯಲು ಸಾಧ್ಯವಿಲ್ಲ.ಎಲ್ಲರೂ ಉತ್ತಮವಾಗಿ ಆಟವಾಡಿ ನಿಮ್ಮ ಜೊತೆಗೆ ಇಲ್ಲಿಯ ಅನುಭವಗಳನ್ನು ಕೊಂಡೋಯ್ಯಿರಿ ಎಲ್ಲ ಕ್ರೀಡಾಪಟುಗಳಿಗೆ ನಮ್ಮ ಸಂಸ್ಥೆಯ ಪರವಾಗಿ ಶುಭಾಶಯಗಳನ್ನು ಕೋರುತ್ತೇನೆ ಎಂದು ಹೇಳಿದರು.
ಪಟ್ಟಣದ ಸಿದ್ಧೇಶ್ವರ ದೇವಸ್ಥಾನದಿಂದ ಕಾರ್ಯಕ್ರಮಕ್ಕೆ ಉಪಸ್ಥಿತರಿರುವ ಎಲ್ಲಾ ಗಣ್ಯರು ಕ್ರೀಡಾಪಟುಗಳು ಸೇರಿ ಭವ್ಯ ಮೆರವಣಿಗೆ ಮೂಲಕ ಕ್ರೀಡಾಂಗಣದಲ್ಲಿರುವ ವೇದಿಕೆಯತ್ತ ಆಗಮಿಸಿದರು. ವಿವಿಧ ಜಿಲ್ಲೆಗಳಿಂದ ಆಗಮಿಸಿದ ಎಲ್ಲ ಕ್ರೀಡಾಪಟುಗಳಿಗೆ ಊಟ, ವಸತಿ, ಅರೋಗ್ಯ ಸೇರಿದಂತೆ ಸಕಲ ವ್ಯವಸ್ಥೆ ಮಾಡಲಾಗಿದೆ.
ಈ ವೇಳೆ ಜೆ ಎ ಕಾಲೇಜಿನ ಪ್ರಾಚಾರ್ಯ ಎಂ ಪಿ ಮೇತ್ರಿ ಸ್ವಾಗತಿಸಿ ಮಾತನಾಡುತ್ತಾ ನಮ್ಮ ಮಹಾವಿದ್ಯಾಲಯ ದಲ್ಲಿ ರಾಜ್ಯ ಮಟ್ಟದ ಹ್ಯಾಂಡ್ ಬಾಲ್ ಸ್ಪರ್ಧೆ ಜರುಗುತ್ತಿರುವುದು ಹೆಮ್ಮೆಯ ಹಾಗೂ ಸಂತೋಷದ ಸಂಗತಿ. ಈ ಜವಾಬ್ದಾರಿ ನೀಡಿದ ಇಲಾಖೆಗೆ ಧನ್ಯವಾದಗಳು ಅರ್ಪಿಸುತ್ತೇವೆ. ಅಥಣಿಯ ಮಹಾಜನತೆ ಹಾಗೂ ದಾನಿಗಳು ನಮಗೆ ಸಹಕಾರ ನೀಡಿದ್ದಾರೆ. ಅವರೆಲ್ಲರ ಸಹಕಾರ, ಆಡಳಿತ ಮಂಡಳಿ ಸಹಕಾರ, ಸಿಬ್ಬಂದಿ ವರ್ಗದ ಸಹಕಾರದಿಂದ ಕ್ರೀಡಾಕೂಟ ಯಶಸ್ವಿಯಾಗಿ ಜರುಗುತ್ತಿದೆ.ಇಲಾಖೆ ನೀಡಿರುವ ಜವಾಬ್ದಾರಿ ಯಶಸ್ವಿಯಾಗಿ ನಿಭಾಯಿಸುತ್ತೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷೆ ಶಿವಲೀಲಾ ಬುಟಾಳಿ. ಕಲಾವತಿ ಕೊಳವಿ. ಜಿಲ್ಲಾ ಕ್ರೀಡಾ ಸಂಯೋಜಕ ಅಜಯ ಮೊನೆ, ಆಡಳಿತ ಮಂಡಳಿ ಸದಸ್ಯರಾದ ಅನಿಲ ದೇಶಪಾಂಡೆ ಹಿಡಕಲ್, ಆನಂದ ಟೋಣಪಿ, ಅಥರ್ವ ದೇಶಪಾಂಡೆ,ಪುರಸಭೆ ಸದಸ್ಯ ರಾಜಶೇಖರ ಗುಡೋಡಗಿ,ನ್ಯಾಯವಾದಿ ಕೆ ಎ ವನಜೋಳ, ಎ ಎಂ ಖೋಬ್ರಿ, ಪ್ರಮೋದ ಪವಾರ ದೇಸಾಯಿ ಹಾಗೂ ಎಲ್ಲ ಸಿಬ್ಬಂದಿ ವರ್ಗ, ಪಟ್ಟಣದ ಗಣ್ಯರು, ಕ್ರೀಡಾ ಪ್ರೇಮಿಗಳು ವಿವಿಧ ಕಾಲೇಜುಗಳ ಉಪನ್ಯಾಸಕರು ಸೇರಿದಂತೆ ಹಲವರು ಉಪಸ್ಥಿತರಿದ್ದರು.
























