ಗುಂಡಿಕ್ಕಿ ಆಪ್ ನಾಯಕ ಲಕ್ಕಿ ಹತ್ಯೆ

ಜಲಂಧರ್,ಫೆ.೬-ಪಂಜಾಬ್‌ನಲ್ಲಿ ಆಡಳಿತಾರೂಢ ಆಮ್ ಆದ್ಮಿ ಪಕ್ಷದ ನಾಯಕರೊಬ್ಬರನ್ನು ಹಾಡುಹಗಲೇ ಗುಂಡಿಕ್ಕಿ ಕೊಲ್ಲಲಾಗಿದೆ. ಗುರುದ್ವಾರದಿಂದ ಹೊರಬಂದ ನಂತರ ಲಕ್ಕಿ ಒಬೆರಾಯ್ ಮೇಲೆ ದಾಳಿ ನಡೆಸಲಾಗಿದೆ.


ಆಮ್ ಆದ್ಮಿ ಪಕ್ಷದ ನಾಯಕ ಲಕ್ಕಿ ಒಬೆರಾಯ್ ಅವರನ್ನು ಇಂದು ಬೆಳಿಗ್ಗೆ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಜಲಂಧರ್‌ನ ಗುರುದ್ವಾರದ ಹೊರಗೆ ಈ ಘಟನೆ ನಡೆದಿದೆ. ಒಬೆರಾಯ್ ಗುರುದ್ವಾರದಿಂದ ಹೊರಬಂದು ಕಾರಿನಲ್ಲಿ ಕುಳಿತಿದ್ದರು. ಅದೇ ಸಮಯದಲ್ಲಿ, ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ೮ ರಿಂದ ೧೦ ಸುತ್ತು ಗುಂಡು ಹಾರಿಸಿದ್ದಾರೆ .ಐದು ಗುಂಡುಗಳು ತಗುಲಿ ಲಕ್ಕಿ ಒಬೆರಾಯ್ ಗಂಭೀರವಾಗಿ ಗಾಯಗೊಂಡರು. ಅವರನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ವೈದ್ಯರು ಅವರನ್ನು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು.


ಗುಂಡಿನ ದಾಳಿಯಲ್ಲಿ ಸುತ್ತಮುತ್ತಲಿನ ಕಾರುಗಳು ಸಹ ಹಾನಿಗೊಳಗಾದವು.
ಜಲಂಧರ್‌ನ ಜನದಟ್ಟಣೆಯ ಮಾಡೆಲ್ ಟೌನ್ ಪ್ರದೇಶದ ಗುರುದ್ವಾರ ಸಾಹಿಬ್‌ನಲ್ಲಿ ಈ ಘಟನೆ ನಡೆದಿದೆ.


ಘಟನೆ ನಂತರ ವಿರೋಧ ಪಕ್ಷಗಳು ಮುಖ್ಯಮಂತ್ರಿ ಭಗವಂತ್ ಮಾನ್ ವಿರುದ್ಧ ಹರಿಹಾಯ್ದಿದ್ದು ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿ ಹದಗೆಟ್ಟದೆ ರಾಜ್ಯದಲ್ಲಿ ಅಪರಾಧಗಳು ಮಿತಿಮೀರಿವೆ ಎಂದು ಬಿಜೆಪಿ ಆರೋಪಿಸಿದೆ. ಆಡಳಿತ ಪಕ್ಷದ ನಾಯಕರು ಸಹ ರಾಜ್ಯದಲ್ಲಿ ಸುರಕ್ಷಿತವಾಗಿಲ್ಲ ಎಂದು ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್ ಹೇಳಿದೆ.


ವಿಧಾನಸಭೆಯ ವಿರೋಧ ಪಕ್ಷದ ನಾಯಕ ಪ್ರತಾಪ್ ಸಿಂಗ್ ಬಜ್ವಾ ರಾಜ್ಯ ಸರ್ಕಾರವನ್ನು ಟೀಕಿಸಿದರು. ಮುಖ್ಯಮಂತ್ರಿ ಭಗವಂತ್ ಮಾನ್ ಅವರ ಆಳ್ವಿಕೆಯಲ್ಲಿ ಪಂಜಾಬ್‌ನಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ ಎಂದು ಅವರು ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್ ಹ್ಯಾಂಡಲ್‌ನಲ್ಲಿ ಬರೆದಿದ್ದಾರೆ.