
ಕೆಂಭಾವಿ:ಜ.30:ಉತ್ತಮ ಸಂಸ್ಕøತಿ ಹಾಗೂ ಸಂಸ್ಕಾರ ಉಳಿಸಿ ಬೆಳೆಸಿದಲ್ಲಿ ನಮ್ಮ ಮುಂದಿನ ತಲೆಮಾರುಗಳು ನೆಮ್ಮದಿಯಿಂದ ಜೀವನ ಮಾಡಲು ಸಾಧ್ಯ ಎಂದು ಡಿಸಿಸಿ ಬ್ಯಾಂಕ್ ನಿರ್ದೇಶಕ ಸುರೇಶ ಸಜ್ಜನ ಹೇಳಿದರು.
ಪಟ್ಟಣದ ಸಮೀಪ ಮುದನೂರ ಗ್ರಾಮದ ಶ್ರೀ ಕಂಠಿ ಕೋರಿಸಿದ್ದೇಶ್ವರ ಶಾಖಾಮಠದಲ್ಲಿ ಜರುಗಿದ ಶ್ರೀ ಕಂಠಿ ಹನುಮಂತ ದೇವರ 28 ನೆ ಜಾತ್ರಾ ಮಹೋತ್ಸವ, ಸದ್ಗುರು ಶ್ರೀ ಕೋರಿಸಿದ್ದೇಶ್ವರರ ಪಲ್ಲಕ್ಕಿ ಉತ್ಸವ, ಶ್ರೀ ಮಠದ ಪೂಜ್ಯರ ಪಟ್ಟಾಧಿಕಾರದ 8 ನೆ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ನಮ್ಮ ದೇಶದ ಸಂಸ್ಕೃತಿ ಹಾಗೂ ಸಂಸ್ಕಾರ ಹೆಚ್ಚಿಸಲು ದೇಶದ ಪ್ರಧಾನಿಯವರು ಹನ್ನೇರಡು ಜೋರ್ತಿಲಿಂಗಗಳನ್ನು ಅಭಿವೃದ್ಧಿ ಪಡಿಸಲು ಸತತವಾಗಿ ಪ್ರಯತ್ನಿಸುತ್ತಿದ್ದಾರೆ. ಅದೇ ರೀತಿಯಲ್ಲಿ ಕಂಠಿ ಶ್ರೀಗಳು ಸಹ ಈ ಭಾಗದಲ್ಲಿ ಅನೇಕ ಸತ್ಕಾರ್ಯಗಳನ್ನು ಮಾಡುತ್ತಾ ಜನರಿಗೆ ಉತ್ತಮ ಸಂದೇಶಗಳನ್ನು ನೀಡುತ್ತಿದ್ದಾರೆ. ಸಂತರ, ಶರಣರ ತ್ಯಾಗದ ಜೀವನ ನಮಗೆ ಮಾರ್ಗದರ್ಶಿಯಾಗಬೇಕು. ಋಷಿಗಳ, ಮಹಾನುಭಾವರ ತ್ಯಾಗವು ಭಾರತದ ತುಂಬ ಹರಡಿ ಜ್ಞಾನಪೂರ್ಣಗೊಳಿಸಿದೆ ಎಂದು ಹೇಳಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಷ.ಬ್ರ. ಸಿದ್ಧ ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು, ಇಳೆ ನಿಮ್ಮ ದಾನ, ಬೆಳೆ ನಿಮ್ಮ ದಾನ ಎಂದು ಶರಣರು ಎಲ್ಲವನ್ನು ಪರಮಾತ್ಮನಿಗೆ ಸಮರ್ಪಿಸಿದರು. ಜಗವ ಬೆಳಗುವ ದೀಪ ಉರಿಯಲು ಬತ್ತಿ, ಎಣ್ಣೆ ಎರಡೂ ಬೇಕು. ಹಾಗೆ ನಮ್ಮ ಜೀವ ಜ್ಯೋತಿ ಬೆಳಗಲು ಮಹಾತ್ಮರು, ಸಂತರು ನೀಡಿದ ಜ್ಞಾನದ ಮಾತುಗಳನ್ನು ಬಳಸಿಕೊಂಡು ಬೆಳಕಾಗಬೇಕು. ಸಾಮಾನ್ಯ ಪ್ರಪಂಚದಿಂದ ಅಸಾಮಾನ್ಯದೆಡೆಗೆ ಹೋಗಲು ಮನಸ್ಸನ್ನು ಮೇಲ್ಮುಖವಾಗಿ ಎತ್ತರಿಸುವುದು. ನಿಸರ್ಗದ ಮಧ್ಯದಲ್ಲಿಯೂ ತ್ಯಾಗ ಹರಡಿಕೊಂಡಿದೆ. ಗಿಡ, ಮರವಾಗಿ ಎತ್ತರ ಬೆಳೆದರೂ ಎಲೆಗಳು, ಹೂ, ಹಣ್ಣುಗಳು ನೆಲಕ್ಕೆ ಬೀಳುತ್ತವೆ. ಅದುವೆ ಬೀಜವಾಗಿ ಮೊಳೆತು ಮತ್ತೆ ಎತ್ತರಕ್ಕೆ ಬೆಳೆಯುತ್ತದೆ. ಹೀಗೆ ಮಾನವ ತ್ಯಾಗ ಮಾಡಿದಾಗ ಉನ್ನತ ಹಂತ ತಲುಪುತ್ತಾನೆ. ಒಬ್ಬರ ತ್ಯಾಗ ಇನ್ನೊಬ್ಬರ ಪೆÇೀಷಣೆಯಾಗುತ್ತದೆ. ತ್ಯಾಗ ಮಾಡಿದ ಮನುಷ್ಯ ಒಂದಿಲ್ಲ ಒಂದು ದಿನ ಎತ್ತರಕ್ಕೆ ಏರುತ್ತಾನೆ. ಕಾಯ ಪ್ರಸಾದ, ಜೀವ ಪ್ರಸಾದ, ಭಾವ ಪ್ರಸಾದ ಎಂದ ಅಕ್ಕಮಹಾದೇವಿ, ತನ್ನ ಶರೀರ ತನ್ನದಲ್ಲ ಎಂದು ಬಾವಿಸಿದ್ದಳು. ಇದು ದೇವನ ಪ್ರಸಾದ ಎಂಬ ತ್ಯಾಗಭಾವ ಅವರದಾಗಿತ್ತು.
ಹೆಣ್ಣುಮಕ್ಕಳು ತನ್ನ ಬಂಧು, ಬಳಗ, ಹೆತ್ತವರ ತೊರೆದು ಬಂದರೂ ಹೊಸಬರ ಮಧ್ಯದಲ್ಲಿ ತ್ಯಾಗದಿಂದ ಜೀವನ ನಡೆಸುತ್ತಾರೆ. ತಮ್ಮ ಮನೆ ಬೆಳಗಲು ಹಗಲು-ರಾತ್ರಿ ಪರಿಶ್ರಮ ಪಡುವ ತಾಯಂದಿರೇ ಪರಮ ತ್ಯಾಗಿಗಳು. ಲೌಕಿಕದಲ್ಲೂ , ಪಾರಮಾರ್ಥದಲ್ಲೂ ತ್ಯಾಗ. ಇದೆಲ್ಲ ಭಗವಂತನದ್ದು, ನನ್ನದಲ್ಲ ಎಂಬ ಭಾವ ಇದ್ದಾಗ ಮಾತ್ರ ಪರಮ ಶಾಂತಿ ಅನುಭವಿಸಲು ಸಾಧ್ಯ ಎಂದು ನುಡಿದರು.
ಪ್ರಮುಖರಾದ ದೇವು ಮುದನೂರ, ಬಸವರಾಜ ಮೇಲಿನಮನಿ, ಬಸವರಾಜ ಸಜ್ಜನ, ನಾಗಯ್ಯಸ್ವಾಮಿ ಹುಣಸಗಿ ಮಾತನಾಡಿದರು. ಮುಖಂಡರಾದ ಹನುಮಪ್ಪನಾಯಕ (ಬಬ್ಲುಗೌಡ), ಬಿ.ಜಿ.ಪಾಟೀಲ ಮುರಹಾಳ, ಬಸನಗೌಡ ಮಾಲಿಪಾಟೀಲ,ಚನ್ನಪ್ಪಗೌಡ ಬೆಕಿನಾಳ, ಬಸವರಾಜ ಹಂಚಲಿ,ಚನ್ನಯ್ಯಸ್ವಾಮಿ ಹಿರೇಮಠ, ಮಹಾಂತಯ್ಯಸ್ವಾಮಿ ಸುರಗಿಮಠ, ಹಣಮಂತ್ರಾಯಗೌಡ ರಸ್ತಾಪುರ, ರುದ್ರು ಮರಕಲ್, ಬಸಯ್ಯ ಗುತ್ತೇದಾರ, ಬಸಣ್ಣ ವಾಲಿಕಾರ, ಶರಣಪ್ಪ ಸಾಹಯ, ಸುಭಾಸರೆಡ್ಡಿ ಹೊಸಮನಿ, ಸಾಹೇನಬಗೌಡ, ಹರೀಶ ಸೇರಿದಂತೆ ಅನೇಕರಿದ್ದರು.
ಶಿಕ್ಷಕ ದೇವಿಂದ್ರಪ್ಪ ಕರಡಕಲ್ ನಿರೂಪಿಸಿದರು. ಕೃಷ್ಣರೆಡ್ಡಿ ಮುದನೂರ ಸ್ವಾಗತಿಸಿದರು. ಸಿದ್ದು ಚೌಧರಿ ವಂದಿಸಿದರು.
























