
ಯಾದಗಿರಿ:ಮಾ.೨೬:ಗ್ರಾಮೀಣ ಜನತೆಗೆ ಸಮೀಪದಲ್ಲೇ ಮೂಲಭೂತ ಆರೋಗ್ಯ ಸೇವೆಗಳನ್ನು ಒದಗಿಸುವ ಉದ್ದೇಶದಿಂದ ಗೌಡಗೆರಾ ಗ್ರಾಮದಲ್ಲಿ ಆಯೋಜಿಸಲಾದ ಸಾರ್ವಜನಿಕ ಆರೋಗ್ಯ ಶಿಬಿರ ಜನಮೆಚ್ಚುಗೆಗೆ ಪಾತ್ರವಾಗಿ ಯಶಸ್ವಿಯಾಗಿ ನೆರವೇರಿತು.
ಸ್ವಾಮಿ ವಿವೇಕಾನಂದ ಯುವ ಚಳವಳಿ, ಸೈದಾಪುರ್ ಮತ್ತು ಡಾನ್ ಬೋಸ್ಕೊ ಮೊಬೈಲ್ ಕ್ಲಿನಿಕ್ ತಂಡಗಳ ಸಹಯೋಗದಲ್ಲಿ ನಡೆದ ಈ ಶಿಬಿರವನ್ನು ಸರಳವಾಗಿ ಸಸಿ ನೆಡುವ ಮೂಲಕ ಚಾಲನೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಅತಿಥಿಗಳು, ಆರೋಗ್ಯ ಕಾಳಜಿ ಹಾಗೂ ಪರಿಸರ ಸಂರಕ್ಷಣೆ ಪರಸ್ಪರ ಸಂಬAಧ ಹೊಂದಿರುವುದರಿAದ ಎರಡರ ಮೇಲೂ ಸಮಾನ ಗಮನ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
ಶಿಬಿರದ ಅಂಗವಾಗಿ ಗ್ರಾಮಸ್ಥರಿಗೆ ವಿವಿಧ ಆರೋಗ್ಯ ಪರೀಕ್ಷೆಗಳು ನಡೆಸಲಾಗಿದ್ದು, ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿ ಸ್ಥಳದಲ್ಲೇ ಚಿಕಿತ್ಸೆ ಹಾಗೂ ಸಲಹೆಗಳನ್ನು ನೀಡಿದರು. ಕ್ಷಯರೋಗದ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮ ವಿಶೇಷ ಆಕರ್ಷಣೆಯಾಗಿದ್ದು, ರೋಗದ ಲಕ್ಷಣಗಳು ಮತ್ತು ತಡೆ ಕ್ರಮಗಳ ಬಗ್ಗೆ ವಿವರವಾದ ಮಾಹಿತಿ ನೀಡಲಾಯಿತು.
ಒಟ್ಟು ೮೦ಕ್ಕೂ ಹೆಚ್ಚು ಗ್ರಾಮಸ್ಥರು ಶಿಬಿರದ ಪ್ರಯೋಜನ ಪಡೆದಿದ್ದು, ರಕ್ತದೊತ್ತಡ, ಶುಗರ್ ಸೇರಿದಂತೆ ಹಲವು ಸಾಮಾನ್ಯ ಆರೋಗ್ಯ ತಪಾಸಣೆಗಳನ್ನು ಮಾಡಿಸಿಕೊಂಡರು. ಗರ್ಭಿಣಿಯರು ಮತ್ತು ತಾಯಂದಿರಿಗೆ ಪೌಷ್ಟಿಕ ಆಹಾರ ಹಾಗೂ ಆರೋಗ್ಯ ಕಾಳಜಿ ಕುರಿತು ವಿಶೇಷ ಮಾರ್ಗದರ್ಶನ ನೀಡಲಾಯಿತು.
ಈ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಪ್ರತಿನಿಧಿಗಳು ಹಾಗೂ ಸ್ಥಳೀಯ ಮುಖಂಡರು ಪಾಲ್ಗೊಂಡು ಶಿಬಿರಕ್ಕೆ ಬೆಂಬಲ ನೀಡಿದರು. ಆರೋಗ್ಯ ಇಲಾಖೆಯ ಸಿಬ್ಬಂದಿ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರು ಸಹ ಕಾರ್ಯನಿರ್ವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಇದೇ ಸಂದರ್ಭದಲ್ಲಿ, ಗ್ರಾಮದಲ್ಲಿನ ವಿಶೇಷ ಅಗತ್ಯವಿರುವ ಬಾಲಕನಿಗೆ ಉಚಿತವಾಗಿ ವೀಲ್‌ಚೇರ್ ವಿತರಿಸಲಾಗಿದ್ದು, ಈ ಸೇವೆಗೆ ಗ್ರಾಮಸ್ಥರಿಂದ ಕೃತಜ್ಞತೆ ವ್ಯಕ್ತವಾಯಿತು.
ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಜಾಗೃತಿ ಹೆಚ್ಚಿಸುವ ದೃಷ್ಟಿಯಿಂದ ಇಂತಹ ಶಿಬಿರಗಳು ಅತ್ಯಂತ ಅಗತ್ಯವಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಅಗತ್ಯವಿದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟರು.




























