
ಬೆಂಗಳೂರು,ಮೇ.7-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ, ಕರ್ನಾಟಕ ಸರ್ಕಾರ ಜಾರಿಗೊಳಿಸಿರುವ ಇ-ಸ್ವತ್ತು ಸೌಲಭ್ಯವನ್ನು ಮತ್ತಷ್ಟು ಸರಳಗೊಳಿಸುವ ಕುರಿತು ಮಹತ್ವದ ಚರ್ಚೆ ನಡೆಯಿತು. ರಾಜ್ಯದ ಇತರ ಜಿಲ್ಲೆಗಳಿಗೆ ಹೋಲಿಸಿದರೆ, ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಅತಿ ಹೆಚ್ಚು ಅರ್ಜಿಗಳು ಸ್ವೀಕೃತಗೋಂಡಿದ್ದು, ಕೆಲವು ತಾಂತ್ರಿಕ ತೊಂದರೆಗಳಿಂದ ಬಹಳಷ್ಟು ಅರ್ಜಿಗಳು ವಿಲೇವಾರಿ ಆಗದೆ ಉಳಿದಿವೆ, ತೊಡಕುಗಳನ್ನು ನಿವಾರಿಸುವ ಮೂಲಕ ಅರ್ಜಿಗಳನ್ನು ತ್ವರಿತ ಗತಿಯಲ್ಲಿ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಬೇಕೆಂದು ಸಭೆಯಲ್ಲಿ ಹಾಜರಿದ್ದ ಎರಡೂ ಜಿಲ್ಲೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಸಚಿವ ಪ್ರಿಯಾಂಕ್ ಖರ್ಗೆ ಸೂಚಿಸಿದರು.
ಸಾರ್ವಜನಿಕರು ಇ-ಸ್ವತ್ತು ಸೇವೆಯನ್ನು ಪಡೆಯುವ ಸಂದರ್ಭದಲ್ಲಿ ಎದುರಿಸುತ್ತಿರುವ ತಾಂತ್ರಿಕ ಮತ್ತು ಆಡಳಿತಾತ್ಮಕ ತೊಂದರೆಗಳ ಬಗ್ಗೆ ಗಮನ ಹರಿಸಿದ ಸಚಿವ ಪ್ರಿಯಾಂಕ್ ಖರ್ಗೆ, ಪ್ರಕ್ರಿಯೆಯನ್ನು ಜನಸ್ನೇಹಿಗೊಳಿಸಲು ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನಗಳನ್ನು ನೀಡಿದರು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿ, ವಿವಿಧ ಸಮಸ್ಯೆಗಳ ಬಗ್ಗೆ ವಿವರಿಸಿದರು.
ಸಭೆಯಲ್ಲಿ ಮುಖ್ಯವಾಗಿ ಕೆಳಗಿನ ಅಂಶಗಳ ಮೇಲೆ ಚರ್ಚೆ ನಡೆಯಿತು:ಇ-ಸ್ವತ್ತು ಅರ್ಜಿಗಳ ಪ್ರಕ್ರಿಯೆಯನ್ನು ವೇಗಗೊಳಿಸುವುದು ದಾಖಲೆ ಪರಿಶೀಲನೆ ವಿಧಾನವನ್ನು ಸರಳೀಕರಿಸುವುದು ಸಾರ್ವಜನಿಕರಿಗೆ ತ್ವರಿತ ಸೇವೆ ಒದಗಿಸಲು ತಾಂತ್ರಿಕ ಸುಧಾರಣೆಗಳನ್ನು ತರಲು ಕ್ರಮ,ಗ್ರಾಮ ಪಂಚಾಯತ್ ಮಟ್ಟದಲ್ಲಿ ಜಾಗೃತಿ ಮತ್ತು ಸಹಾಯ ಕೇಂದ್ರಗಳನ್ನು ಬಲಪಡಿಸುವುದು.





















