Home ಜಿಲ್ಲೆ ಕಲಬುರಗಿ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಲು ಆಗ್ರಹ

ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಲು ಆಗ್ರಹ

ಕಲಬುರಗಿ :ಮೇ.7: ಕಲಬುರಗಿ ಜಿಲ್ಲೆಯಲ್ಲಿ ಅಕ್ರಮ ಮದ್ಯ ಮಾರಾಟ ನಿಷೇಧಕ್ಕೆ ನೀಡಲಾಗಿದ್ದ ಮನವಿ ಪತ್ರಕ್ಕೆ ಚಿತ್ತಾಪೂರ ವಲಯ ಅಬಕಾರಿ ಇಲಾಖೆಯ ಅಧಿಕಾರಿಗಳು ಸ್ಪಂದಿಸಿರುವುದು ಸ್ವಾಗತಾರ್ಹ ಬೆಳವಣಿಗೆ ಎಂದು ಕರ್ನಾಟಕ ಕದಂಬ ಪಡೆ ಜಿಲ್ಲಾಧ್ಯಕ್ಷ ಚನ್ನವೀರ ದಸ್ತಾಪೂರ ತಿಳಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಅಕ್ರಮ ಮದ್ಯ ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಅಬಕಾರಿ ಇಲಾಖೆ ಭರವಸೆ ನೀಡಿರುವುದು ಸಂತಸದ ವಿಚಾರ ಎಂದರು. 2024-25ನೇ ಸಾಲಿನಲ್ಲಿ 173 ಹಾಗೂ 2025-26ನೇ ಸಾಲಿನಲ್ಲಿ 177 ಕಡೆ ದಾಳಿ ನಡೆಸಿ, ಒಟ್ಟು 163.77 ಲೀಟರ್ ಅಕ್ರಮ ಮದ್ಯ, 59.768 ಲೀಟರ್ ಬೀಯರ್, 1697 ಲೀಟರ್ ಕಲಬೆರಕೆ ಸೇಂದಿ, 50.5 ಲೀಟರ್ ಕಳ್ಳಭಟ್ಟಿ ಸರಾಯಿ, 126 ಲೀಟರ್ ಬೆಲ್ಲದ ಕೋಳೆ ಹಾಗೂ 26.300 ಕೆ.ಜಿ. ಸಿ.ಹೆಚ್ ಪೌಡರ್ ಜಪ್ತಿ ಮಾಡಿರುವುದಾಗಿ ಇಲಾಖೆ ಹಿಂಬರಹದಲ್ಲಿ ತಿಳಿಸಿದೆ ಎಂದು ಹೇಳಿದರು.
ಗ್ರಾಮೀಣ ಭಾಗಗಳಲ್ಲಿ ಅನೇಕ ಯುವಕರು, ರೈತರು ಮತ್ತು ಕೂಲಿ ಕಾರ್ಮಿಕರು, ವಿಶೇಷವಾಗಿ ಹಿಂದುಳಿದ ವರ್ಗದ ಜನರು ಮದ್ಯಪಾನದ ದಾಸ್ಯಕ್ಕೆ ಒಳಗಾಗಿ ತಮ್ಮ ಬದುಕು ಹಾಳು ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಅನೇಕ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿದ್ದು, ಮಹಿಳೆಯರು ತಮ್ಮ ಗಂಡಂದಿರು ಹಾಗೂ ಮಕ್ಕಳನ್ನು ಕಳೆದುಕೊಂಡು ನೋವಿನ ಬದುಕು ನಡೆಸುವಂತಾಗಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಮದ್ಯಪಾನ ಮತ್ತು ಧೂಮಪಾನ ನಿಯಂತ್ರಣಕ್ಕೆ ಕಠಿಣ ಕ್ರಮ ಕೈಗೊಂಡು ಗ್ರಾಮೀಣ ಜನರ ಜೀವನ ರಕ್ಷಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಕಲ್ಯಾಣ ಕರ್ನಾಟಕ ಭಾಗವು ಈಗಾಗಲೇ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ಕೈಗಾರಿಕಾ ಕ್ಷೇತ್ರಗಳಲ್ಲಿ ಹಿಂದುಳಿದಿದ್ದು, ಇಂತಹ ಪ್ರದೇಶಗಳಲ್ಲಿ ಕಾನೂನುಬಾಹಿರವಾಗಿ ಮದ್ಯ ಮಾರಾಟ ನಡೆಯುತ್ತಿರುವುದು ಮತ್ತಷ್ಟು ಹಾನಿಕಾರಕವಾಗಿದೆ. ಈ ಬಗ್ಗೆ ಸಂಬಂಧಪಟ್ಟ ಜನಪ್ರತಿನಿಧಿಗಳು ಹಾಗೂ ಅಬಕಾರಿ ಇಲಾಖೆ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಅಕ್ರಮ ಮದ್ಯ ತಯಾರಿಕೆ ಮತ್ತು ಮಾರಾಟ ತಡೆಯಲು ಸರ್ಕಾರ ಕಾನೂನು ತಿದ್ದುಪಡಿ ಬಗ್ಗೆ ಚಿಂತನೆ ನಡೆಸುತ್ತಿರುವುದು ಒಳ್ಳೆಯ ಬೆಳವಣಿಗೆ. ಆದರೆ ಗ್ರಾಮೀಣ ಭಾಗಗಳಲ್ಲಿ ನಡೆಯುತ್ತಿರುವ ಅಕ್ರಮ ಮಾರಾಟವನ್ನು ಸಂಪೂರ್ಣವಾಗಿ ನಿಲ್ಲಿಸಲು ಪರಿಣಾಮಕಾರಿ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.