
ಬೀದರ, ಮೇ 7:ಬೀದರ ತಾಲೂಕಿನ ರಂಜೋಳ ಖೇಣಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ 2025-26ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆ-1ರಲ್ಲಿ ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಅಭಿನಂದನಾ ಸಮಾರಂಭ ಹಾಗೂ ಶಾಲಾ ಉದ್ಯಾನವನದ ಉದ್ಘಾಟನಾ ಕಾರ್ಯಕ್ರಮವನ್ನು ಭವ್ಯವಾಗಿ ಆಯೋಜಿಸಲಾಯಿತು.
ಕಾರ್ಯಕ್ರಮಕ್ಕೆ ಬೀದರ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಶೈಲೇಂದ್ರ ಬೆಲ್ದಾಳೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಶಾಲೆಯೊಳಗೆ ಪ್ರವೇಶಿಸಿದಾಗ ಉದ್ಯಾನವನದಂತೆ ಭಾಸವಾಗುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಹಳೆಯ ಗೋಡೆಗಳಿಗೆ ಹೊಸ ಜೀವ ತುಂಬಿದ ಚಿತ್ರಕಲಾ ಶಿಕ್ಷಕ ವಿಷ್ಣುಕಾಂತ ಠಾಕುರ್ ಅವರ ಕಾರ್ಯವನ್ನು ಶ್ಲಾಘಿಸಿದರು. ಶಾಲೆಯ ಸುಂದರ ವಾತಾವರಣ ನಿರ್ಮಾಣಕ್ಕೆ ಶ್ರಮಿಸಿದ ಮುಖ್ಯಗುರು ಮಂಜುನಾಥ ಎನ್.ಆರ್. ಅವರ ಸೇವೆಯನ್ನು ಪ್ರಶಂಸಿಸಿದರು.
ವಿದ್ಯಾರ್ಥಿಗಳು ಕಠಿಣ ಪರಿಶ್ರಮ, ಶಿಸ್ತು ಹಾಗೂ ಸ್ಪಷ್ಟ ಗುರಿಯೊಂದಿಗೆ ಮುಂದುವರಿದರೆ ಉನ್ನತ ಸಾಧನೆ ಸಾಧ್ಯವೆಂದು ತಿಳಿಸಿದ ಅವರು, ಭವಿಷ್ಯದ ಗುರಿಗಳನ್ನು ನಿಗದಿಪಡಿಸಿಕೊಂಡು ನಿರಂತರವಾಗಿ ಶ್ರಮಿಸಬೇಕೆಂದು ಸಲಹೆ ನೀಡಿದರು. ಶಾಲೆಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳ ಸಾಧನೆಗೆ ಶಿಕ್ಷಕರ ಪರಿಶ್ರಮ ಹಾಗೂ ಪಾಲಕರ ಬೆಂಬಲ ಪ್ರಮುಖ ಕಾರಣವೆಂದು ತಿಳಿಸಲಾಯಿತು.
ಇದೇ ವೇಳೆ ಶಾಲೆಯ ಸುಂದರೀಕರಣ ಮತ್ತು ಉದ್ಯಾನವನ ನಿರ್ಮಾಣಕ್ಕೆ ಸಹಕರಿಸಿದ ದಾನಿಗಳು, ಹಳೆಯ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರನ್ನು ಗೌರವಿಸಲಾಯಿತು. ಅವರ ಸಹಕಾರದಿಂದ ಶಾಲೆಯ ವಾತಾವರಣ ಇನ್ನಷ್ಟು ಆಕರ್ಷಕವಾಗಿದ್ದು, ವಿದ್ಯಾರ್ಥಿಗಳಿಗೆ ಉತ್ತಮ ಅಧ್ಯಯನ ವಾತಾವರಣ ಸೃಷ್ಟಿಯಾಗಿದೆ ಎಂದು ಅಭಿಪ್ರಾಯ ವ್ಯಕ್ತವಾಯಿತು.
ಮುಖ್ಯಗುರು ಮಂಜುನಾಥ ಎನ್.ಆರ್. ಮಾತನಾಡಿ, ಶಾಲೆಯ ಸಾಧನೆಗೆ ಶಿಕ್ಷಕರ ಸಮರ್ಪಿತ ಸೇವೆ ಹಾಗೂ ಪಾಲಕರ ಸಹಕಾರ ಕಾರಣವಾಗಿದ್ದು, ಮುಂದಿನ ವರ್ಷಗಳಲ್ಲಿ ಇನ್ನಷ್ಟು ಉತ್ತಮ ಫಲಿತಾಂಶ ತರುವ ದಿಟ್ಟ ನಿಲುವು ನಮ್ಮದು ಎಂದು ತಿಳಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಮದರ್ ಖಾನ್ ಅವರು ಮಾತನಾಡಿ, ಶಿಕ್ಷಕರ ಕೊರತೆಯ ನಡುವೆಯೂ ಶಾಲೆ ಅತ್ಯುತ್ತಮ ಫಲಿತಾಂಶ ಸಾಧಿಸಿರುವುದನ್ನು ಶ್ಲಾಘಿಸಿ, ಮುಂದೆಯೂ ಇದೇ ರೀತಿಯ ಶ್ರಮ ಮುಂದುವರಿಸಲು ಸೂಚಿಸಿದರು.
ಕಾರ್ಯಕ್ರಮದಲ್ಲಿ ಪಿಎಂ ಪೆÇೀಷಣ್ ಅಭಿಯಾನದ ಸಹಾಯಕ ನಿರ್ದೇಶಕ ಝಾಕೀರ್ ಹುಸೇನ್, ಡಯಟ್ ಉಪನ್ಯಾಸಕರಾದ ಸಂತೋಷ್ ಪುಜಾರಿ, ಗೀತಾ ಗಡ್ಡಿ, ಎಸ್ಡಿಎಂಸಿ ಅಧ್ಯಕ್ಷರು ಮತ್ತು ಸದಸ್ಯರು, ಶಿಕ್ಷಕರು, ಪಾಲಕರು, ಹಳೆಯ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಸತ್ಯನಾರಾಯಣ ಹಾಗೂ ರೇಖಾ ಕಾರ್ಯಕ್ರಮ ನಿರ್ವಹಣೆ ಮಾಡಿದರು. ವಿಷ್ಣುಕಾಂತ ಠಾಕುರ್ ಸ್ವಾಗತಿಸಿದರು. ಸಚಿನ್ ವಂದನಾರ್ಪಣೆ ಸಲ್ಲಿಸಿದರು.





















