
ಕಲಬುರಗಿ,ಏ.8-ಜಿಲ್ಲೆಯ ಚಿಂಚೋಳಿ, ಮಿರಿಯಾಣ, ಸುಲೇಪೇಟ್, ಸೇಡಂ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾದಿಗಿರಿ ಜಿಲ್ಲೆಯ ಜೀನಕೇರಿ ತಾಂಡಾದ ಮಾರುತಿ ತಂದೆ ಸಕ್ರೆಪ್ಪ ಜಾಧವ (25) ಎಂಬಾತನನ್ನು ಬಂಧಿಸಿರುವ ಚಿಂಚೋಳಿ ಪೊಲೀಸರು 1.90 ಲಕ್ಷ ರೂ.ನಗದು, 2 ಲಕ್ಷ ರೂ.ಮೌಲ್ಯದ ಕಾರು ಜಪ್ತಿ ಮಾಡಿದ್ದಾರೆ.
ಮನೆ ಮುಂದೆ ಕಟ್ಟಲಾಗಿದ್ದ 60 ಸಾವಿರ ರೂ.ಮೌಲ್ಯದ 5 ಆಡು, 2 ಆಡು ಮರಿ ಕಳವಾಗಿವೆ ಎಂದು ಐನೋಳ್ಳಿ ಗ್ರಾಮದ ಹಣಮಂತ ತಳವಾರ ಎಂಬುವವರು ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು.
ಈ ದೂರಿನ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿತರ ಪತ್ತೆಗೆ ಎಸ್‍ಪಿ ಅಡ್ಡೂರು ಶ್ರೀನಿವಾಸಲು, ಚಿಂಚೋಳಿ ಉಪ ವಿಭಾಗದ ಡಿವೈಎಸ್‍ಪಿ ಸಂಗಮನಾಥ ಎಸ್.ಹಿರೇಮಠ ಅವರ ಮಾರ್ಗದರ್ಶನದಲ್ಲಿ ಸಿಪಿಐ ಕಪೀಲದೇವ ಗಡಾದ್, ಪಿಎಸ್‍ಐ ಗಂಗಮ್ಮ ಅವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ಸವಿಕುಮಾರ, ಯಮನೂರಪ್ಪ, ಓಂಕಾರ, ರಮೇಶ, ಮಾಂತೇಶ ಅವರನ್ನು ಒಳಗೊಂಡ ತಂಡ ರಚಿಸಲಾಗಿತ್ತು.
ಯಾದಗಿರಿ ನಗರದಲ್ಲಿ ಆರೋಪಿತರು ಕಳ್ಳತನ ಮಾಡುವ ಹೋಗುತ್ತಿದ್ದಾರೆ ಎಂಬ ಮಾಹಿತಿ ಅರೆತ ತಂಡ ಆರೋಪಿಗಳು ಹೊರಟಿದ್ದ ಕಾರನ್ನು ತಡೆದು ಮಾರುತಿ ಜಾಧವ ಎಂಬಾತನನ್ನು ವಶಕ್ಕೆ ಪಡೆದಿದ್ದು, ಉಳಿದ ಮೂವರು ಪರಾರಿಯಾಗಿದ್ದಾರೆ.
ಬಂಧಿತ ಆರೋಪಿಯಿಂದ 1.90 ಲಕ್ಷ ರೂ.ನಗದು, 2 ಲಕ್ಷ ರೂ.ಮೌಲ್ಯದ ಕಾರು ವಶಕ್ಕೆ ಪಡೆದಿದ್ದಾರೆ. ಪರಾರಿಯಾದ ಆರೋಪಿಗಳ ಪತ್ತೆಗೆ ಜಾಲ ಬೀಸಿದ್ದಾರೆ.




















