Home ಮುಖಪುಟ ಸುದ್ದಿ ರೆಪೋ ದರ ಯಥಾಸ್ಥಿತಿ

ರೆಪೋ ದರ ಯಥಾಸ್ಥಿತಿ

ಮುಂಬೈ, ಏ.೮: ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಇತ್ತೀಚಿನ ದ್ವೈಮಾಸಿಕ ಹಣಕಾಸು ನೀತಿಯನ್ನು ಪ್ರಕಟಿಸಿದ್ದು, ಪ್ರಮುಖ ಬಡ್ಡಿ ದರಗಳಲ್ಲಿ ಯಾವುದೇ ಬದಲಾವಣೆ ಮಾಡದಿರಲು ನಿರ್ಧರಿಸಿದೆ. ಈ ಕುರಿತು ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಅವರು ಇಂದು ಅಧಿಕೃತ ಮಾಹಿತಿ ನೀಡಿದ್ದಾರೆ.


ಆರ್ಥಿಕ ಸ್ಥಿತಿಗತಿ ಮತ್ತು ಹಣಕಾಸಿನ ಬೆಳವಣಿಗೆಗಳನ್ನು ಕೂಲಂಕಷವಾಗಿ ಪರಿಶೀಲಿಸಿದ ನಂತರ ಹಣಕಾಸು ನೀತಿ ಸಮಿತಿಯು ರೆಪೊ ದರವನ್ನು ಶೇ. ೫.೨೫ ರಷ್ಟು ಯಥಾಸ್ಥಿತಿಯಲ್ಲಿಡಲು ಸರ್ವಾನುಮತದಿಂದ ನಿರ್ಧರಿಸಿದೆ.


ರೆಪೊ ದರದಲ್ಲಿ ಬದಲಾವಣೆ ಇಲ್ಲದ ಕಾರಣ, ಎಸ್‌ಡಿಎಫ್ ದರವು ಶೇ. ೫ ರಷ್ಟು ಹಾಗೂ ಎಂಎಸ್‌ಎಫ್ ಮತ್ತು ಬ್ಯಾಂಕ್ ದರಗಳು ಶೇ. ೫.೫ ರಷ್ಟೇ ಮುಂದುವರಿಯಲಿವೆ. ಮಾರುಕಟ್ಟೆಯಲ್ಲಿನ ದ್ರವ್ಯತೆ ಮತ್ತು ಹಣದುಬ್ಬರವನ್ನು ಗಮನದಲ್ಲಿಟ್ಟುಕೊಂಡು, ಆರ್‌ಬಿಐ ತನ್ನ ‘ತಟಸ್ಥ’ ನಿಲುವನ್ನು ಮುಂದುವರಿಸಲು ತೀರ್ಮಾನಿಸಿದೆ.


“ಕಳೆದ ಮೂರು ದಿನಗಳಿಂದ ನಡೆದ ಸುದೀರ್ಘ ಸಮಾಲೋಚನೆಯ ನಂತರ, ಪ್ರಸ್ತುತ ಜಾಗತಿಕ ಮತ್ತು ದೇಶೀಯ ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ,” ಎಂದು ಗವರ್ನರ್ ಮಲ್ಹೋತ್ರಾ ತಿಳಿಸಿದ್ದಾರೆ.


ಗ್ರಾಹಕರ ಮೇಲೆ ಏನು ಪರಿಣಾಮ?


ಆರ್‌ಬಿಐ ರೆಪೊ ದರವನ್ನು ಹೆಚ್ಚಿಸದ ಕಾರಣ, ಬ್ಯಾಂಕ್ ಸಾಲಗಳ ಮೇಲಿನ ಬಡ್ಡಿದರ ಸದ್ಯಕ್ಕೆ ಏರಿಕೆಯಾಗುವುದಿಲ್ಲ. ಇದು ಮನೆ ಮತ್ತು ವಾಹನ ಸಾಲಗಾರರಿಗೆ ಸಮಾಧಾನಕರ ಸುದ್ದಿಯಾಗಿದೆ.


ವಾಣಿಜ್ಯ ಬ್ಯಾಂಕುಗಳು ತಮ್ಮ ತುರ್ತು ಹಣಕಾಸಿನ ಅಗತ್ಯಗಳಿಗಾಗಿ ಭಾರತೀಯ ರಿಸರ್ವ್ ಬ್ಯಾಂಕ್‌ನಿಂದ ಪಡೆಯುವ ಸಾಲದ ಮೇಲಿನ ಬಡ್ಡಿಗೆ ರೆಪೊ ದರ ಎಂದು ಕರೆಯಲಾಗುತ್ತದೆ. ದರ ಕಡಿಮೆಯಾದರೆ ಬ್ಯಾಂಕ್ ಸಾಲಗಳು ಅಗ್ಗವಾಗುತ್ತವೆ.

ಆರ್‌ಬಿಐ ಏಕೆ ದರಗಳನ್ನು ಬದಲಾಯಿಸಿಲ್ಲ?


ಜಾಗತಿಕ ಅನಿಶ್ಚಿತತೆ, ಇಂಧನ ಬೆಲೆ ಏರಿಕೆ ಮತ್ತು ಹಣದುಬ್ಬರದ ಅಪಾಯಗಳನ್ನು ಗಮನದಲ್ಲಿಟ್ಟುಕೊಂಡು ಆರ್‌ಬಿಐ ಮುನ್ನೆಚ್ಚರಿಕೆ ಕ್ರಮವಾಗಿ ದರಗಳನ್ನು ಸ್ಥಿರವಾಗಿರಿಸಿದೆ.


ಬಡ್ಡಿ ದರಗಳು ಸ್ಥಿರವಾಗಿದ್ದರೆ ಹೂಡಿಕೆದಾರರಲ್ಲಿ ವಿಶ್ವಾಸ ಮೂಡುತ್ತದೆ. ಇದು ಉತ್ಪಾದನೆ ಮತ್ತು ಸೇವಾ ವಲಯದಲ್ಲಿ ಹೆಚ್ಚಿನ ಹೂಡಿಕೆಗೆ ಕಾರಣವಾಗಿ ಜಿಡಿಪಿ ಪ್ರಗತಿಗೆ ಪೂರಕವಾಗುತ್ತದೆ. ಭಾರತೀಯ ಆರ್ಥಿಕತೆಯು ಸವಾಲುಗಳ ನಡುವೆಯೂ ಸದೃಢವಾಗಿ ಬೆಳೆಯುತ್ತಿದೆ. ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಅವರ ನೇತೃತ್ವದ ಸಮಿತಿಯು ಕೈಗೊಂಡ ನಿರ್ಧಾರವು ಸಮತೋಲಿತವಾಗಿದೆ. ಜಾಗತಿಕ ಪೂರೈಕೆ ಸರಪಳಿಯ ಅಡೆತಡೆಗಳನ್ನು ಸರ್ಕಾರ ಮತ್ತು ಆರ್‌ಬಿಐ ಸೂಕ್ಷ್ಮವಾಗಿ ಗಮನಿಸುತ್ತಿವೆ. ಬ್ಯಾಂಕ್ ಸಾಲಗಾರರಿಗೆ ಈ ಬಾರಿಯ ಹಣಕಾಸು ನೀತಿಯು ಯಾವುದೇ ಹೊಸ ಹೊರೆ ನೀಡಿಲ್ಲ ಎಂಬುದು ಸಮಾಧಾನದ ವಿಷಯ.