Home ಜಿಲ್ಲೆ ಮೈಸೂರು ಸಂವಿಧಾನ ಗ್ರಂಥ ಮಾತ್ರವಲ್ಲ ದೇಶದ ಆತ್ಮ

ಸಂವಿಧಾನ ಗ್ರಂಥ ಮಾತ್ರವಲ್ಲ ದೇಶದ ಆತ್ಮ

ಸಂಜೆವಾಣಿ ನ್ಯೂಸ್
ಮೈಸೂರು: ಏ.07:-
ಸಂವಿಧಾನವನ್ನು ದೇಶದ ಗ್ರಂಥ ಎಂದುಕೊಳ್ಳಬಾರದು. ಅದು ದೇಶದ ಆತ್ಮ. ಸಂವಿಧಾನದೊಳಗಿರುವ ಆಶಯಗಳನ್ನು ಸಾಕಾರಗೊಳಿಸುವುದು ಕಟ್ಟಕಡೆಯ ವ್ಯಕ್ತಿಯ ಕರ್ತವ್ಯ ಎಂದು ಚಿಂತಕ ನಾ.ದಿವಾಕರ ಹೇಳಿದರು.

ನಗರದ ಮಾನಸ ಗಂಗೋತ್ರಿಯ ಡಾ.ಬಾಬು ಜಗಜೀವನರಾಂ ಅಧ್ಯಯನ ಸಂಶೋಧನ ಮತ್ತು ವಿಸ್ತರಣ ಕೇಂದ್ರದ ಸಭಾಂಗಣದಲ್ಲಿ ಪರಿಶಿಷ್ಟ ಜಾತಿ, ಪಂಗಡದ ವಿಶೇಷ ಘಟಕದ ಸಹಯೋಗದೊಂದಿಗೆ ನಡೆದ ಭಾರತ ಸಂವಿಧಾನದ ಪ್ರಸ್ತಾವನೆಯ ಆಶಯಗಳು ಮತ್ತು ಬಾಬು ಜಗಜೀವನರಾಮ್ ವಿಶೇಷ ಉಪನ್ಯಾಸ ಹಾಗೂ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು.

ಸ್ವಾತಂತ್ರ್ಯೋತ್ತರ ಭಾರತದಲ್ಲಿ ದೇಶವನ್ನು ಸಾರ್ವಭೌಮ, ಸ್ವಾವಲಂಬಿ ರಾಷ್ಟ್ರವನ್ನಾಗಿ ಕಟ್ಟುವ ಕನಸು ಕಂಡಿದ್ದ ದಾರ್ಶನಿಕರಲ್ಲಿ ಡಾ.ಬಾಬೂ ಜಗಜೀವನರಾಮ್ ಕೂಡ ಒಬ್ಬರು. ಡಾ.ಬಾಬು ಜಗಜೀವನರಾಮ್ ಸಚಿವರಾಗಿ ಅನೇಕ ನೀತಿಗಳನ್ನು ಸಾಂವಿಧಾನಿಕ ಆಶಯ ಪೂರೈಸಲು ಜಾರಿಗೊಳಿಸಿದರು ಎಂದರು.

ಪ್ರತಿಯೊಬ್ಬ ವಿದ್ಯಾರ್ಥಿಯೂ ಬಾಬು ಜಗಜೀವನರಾಂ ಅವರ ಬಗ್ಗೆ ತಿಳಿದುಕೊಳ್ಳಬೇಕು. ಒಂದೇ ಒಂದು ಕಪ್ಪುಚುಕ್ಕೆ, ಸುಳ್ಳು ಆರೋಪವನ್ನು ಅವರ ವೈಯಕ್ತಿಕ, ರಾಜಕೀಯ ಜೀವನದಲ್ಲಿ ಕಾಣಲು ಸಾಧ್ಯವಿಲ್ಲ. ಪ್ರಮುಖ ಸಚಿವ ಹುದ್ದೆಗಳನ್ನು ನಿಭಾಯಿಸಿ ಅವುಗಳಲ್ಲಿ ಅನೇಕ ಕ್ರಾಂತಿಕಾರಿ ತೀರ್ಮಾನಗಳನ್ನು ತೆಗೆದುಕೊಂಡಿದ್ದರು ಎಂದು ತಿಳಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪೆÇ್ರ.ಎನ್.ಕೆ.ಲೋಕನಾಥ್, ಶಿಕ್ಷಣ ಮಾತ್ರ ಸಾಮಾನ್ಯ ವ್ಯಕ್ತಿಯನ್ನು ಅಸಮಾನ್ಯ ವ್ಯಕ್ತಿಯನ್ನಾಗಿ ರೂಪಿಸುವ ಶಕ್ತಿ ಹೊಂದಿದೆ. ಇದಕ್ಕೆ ಸ್ಪಷ್ಟ ಉದಾಹರಣೆ ಎಂದರೆ ಡಾ.ಬಾಬು ಜಗಜೀವನರಾಂ ಎಂದು ಹೇಳಿದರು.
ಬಾಬು ಜಗಜೀವನರಾಂ ಸಾಮಾನ್ಯರಲ್ಲಿ ಸಾಮಾನ್ಯ ವ್ಯಕ್ತಿ. ಆದರೆ, ಅವರು ಪಡೆದ ಶಿಕ್ಷಣ ಅವರನ್ನು ಅಸಮಾನ್ಯರನ್ನಾಗಿ ಮಾಡಿತು. ಇದರಿಂದ ಇಡೀ ದೇಶ ಅವರನ್ನು ಗುರುತಿಸಿತು. ಬಿಹಾರ ಈಗಲೂ ಸಹ ಹಿಂದುಳಿದ ರಾಜ್ಯ. ಬಿಹಾರದಲ್ಲಿ ಉನ್ನತ ಶಿಕ್ಷಣ ಪಡೆದು ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದಲ್ಲಿ ಕಠಿಣ ಶ್ರಮದಿಂದ ಓದುವ ಮೂಲಕ ತೇರ್ಗಡೆ ಹೊಂದುತ್ತಿದ್ದರು ಎಂದು ತಿಳಿಸಿದರು.

ಡಾ.ಬಾಬು ಜಗಜೀವನರಾಂ ಅವರ ಮಾತುಗಳು ಮದನ್‍ಮೋಹನ್ ಮಾಳವೀಯ ಅವರ ಮೆಚ್ಚುಗೆಗೆ ಪಾತ್ರವಾಗುತ್ತಿದ್ದವು. ಕೇವಲ ಓದಿದರೆ ಸಾಲದು ಸಾಮಾಜಿಕವಾಗಿ ಕೆಲಸ ಮಾಡಬೇಕೆಂಬ ಕಾರಣದಿಂದ ರಾಜಕೀಯಕ್ಕೆ ಡಾ.ಬಾಬು ಜಗಜೀವನರಾಂ ಬರುತ್ತಾರೆ. ಈ ಸಂದರ್ಭದಲ್ಲಿ ಇವರ ಜತೆ ಸುಭಾಷ್ ಚಂದ್ರ ಬೋಸ್ ಸೇರಿದಂತೆ ಅನೇಕ ಸಾಧಕರು ಇರುತ್ತಾರೆ. ಸಾಮಾನ್ಯ ವ್ಯಕ್ತಿ ಎಂತೆಂತಾ ಸಾಧಕ ವ್ಯಕ್ತಿಗಳೊಂದಿಗೆ ಹೋಗಲು ಸಾಧ್ಯವಾಗಿದ್ದು ಶಿಕ್ಷಣದಿಂದ ಮಾತ್ರ ಎಂದು ಹೇಳಿದರು.

ಬದಲಾವಣೆ ತರಬೇಕಾದರೆ ಅಧಿಕಾರ ಇರಬೇಕು ಎಂದು ತಿಳಿದ ಜಗಜೀವನರಾಂ ಮುಂದೆ ರಾಜಕೀಯಕ್ಕೆ ಬಂದ ನಂತರ ಅನೇಕ ಬದಲಾವಣೆ ತರುತ್ತಾರೆ. ಕಾರ್ಮಿಕ ಸಚಿವರಾಗಿ, ರಕ್ಷಣಾ ಸಚಿವರಾಗಿ ಅನೇಕ ಜನಪರ ಹಾಗೂ ದೇಶದ ಪರ ದುಡಿಯುತ್ತಾರೆ. ದೇಶದಲ್ಲಿ ಆಹಾರದ ಕೊರತೆ ಉಂಟಾದಾಗ ದೇಶ ಹಸಿವಿನಿಂದ ಇರಬಾರದೆಂದು ಹಸಿರು ಕ್ರಾಂತಿ ಮಾಡಿದರು ಎಂದರು.

ಕಾರ್ಯಕ್ರಮದಲ್ಲಿ ಮಹಾರಾಣಿ ಮಹಿಳಾ ಕಲಾ ಕಾಲೇಜಿನ ಪ್ರಾಂಶುಪಾಲೆ ಪೆÇ್ರ.ಎಂ.ಎಸ್.ಅನಿತಾ, ಬಾಬು ಜಗಜೀವನರಾಂ ಅಧ್ಯಯನ ಕೇಂದ್ರದ ನಿರ್ದೇಶಕ ಪೆÇ್ರ.ಕೆ.ಸದಾಶಿವ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ವಿಶೇಷ ಘಟಕದ ಉಪ ಕುಲಸಚಿವ ಕೆ.ಎನ್.ಮಂಜುನಾಥ್, ಸಂದರ್ಶಕ ಪ್ರಾಧ್ಯಾಪಕ ಹೆಚ್.ಆರ್.ಭೀಮಾಶಂಕರ್ ಸೇರಿದಂತೆ ಇತರರಿದ್ದರು.