
ಸಿ.ಟಿ. ರವಿ ಟೀಕೆ
ಬಾಗಲಕೋಟೆ. ಏ. ೪ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಒಬ್ಬರೇ ಮಾಡಿದ ಸಾಲ ೫ ಲಕ್ಷ ಕೋಟಿಗೂ ಹೆಚ್ಚು ಎಂದು ಬಿಜೆಪಿ ರಾಷ್ಟ್ರಿಯ ಮಾಜಿ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಅವರು ದೂರಿದ್ದಾರೆ.
ಬಾಗಲಕೋಟೆಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯದ ಒಟ್ಟು ಸಾಲ ೮ ಲಕ್ಷದ ೩೨ ಸಾವಿರ ಕೋಟಿ ಆಗಿದೆ. ಅದರಲ್ಲಿ ಸಿದ್ದರಾಮಯ್ಯನವರು ಒಬ್ಬರೇ ಮಾಡಿದ ಸಾಲ ೫ ಲಕ್ಷ ಕೋಟಿಗೂ ಹೆಚ್ಚು ಎಂದು ಗಮನ ಸೆಳೆದರು. ೨೦೨೩-೨೪ರಲ್ಲಿ ೯೦,೨೮೦ ಕೋಟಿ, ೨೦೨೪-೨೫ರಲ್ಲಿ ೧ ಲಕ್ಷದ ೭ ಸಾವಿರ ಕೋಟಿ, ೨೦೨೫-೨೬ರಲ್ಲಿ ೧ ಲಕ್ಷದ ೧೬ ಸಾವಿರ ಕೋಟಿ, ೨೦೨೬-೨೭ರಲ್ಲಿ ೧ ಲಕ್ಷದ ೩೨ ಸಾವಿರ ಕೋಟಿ ರೂ. ಎಂದು ವಿವರಿಸಿದರು.
ಒಟ್ಟು ೮ ವರ್ಷದಲ್ಲಿ ಅವರು ಮುಖ್ಯಮಂತ್ರಿಯಾಗಿ ಮಾಡಿದ ಸಾಲ ಶೇ ೬೦ರಷ್ಟಿದೆ. ಕಳೆದ ೩೦ ವರ್ಷಗಳಲ್ಲಿ ಜೆ.ಎಚ್.ಪಟೇಲ್, ಎಸ್.ಎಂ.ಕೃಷ್ಣ, ಧರ್ಮಸಿಂಗ್, ಎಚ್.ಡಿ.ಕುಮಾರಸ್ವಾಮಿ, ಯಡಿಯೂರಪ್ಪ, ಸದಾನಂದ ಗೌಡ, ಜಗದೀಶ ಶೆಟ್ಟರ್, ಬಸವರಾಜ ಬೊಮ್ಮಾಯಿ ಹೀಗೆ ಎಷ್ಟು ಜನ ಮುಖ್ಯಮಂತ್ರಿಗಳಿದ್ದರೋ ಅವರೆಲ್ಲ ಮಾಡಿದ ಸಾಲ ಶೇ ೪೦ ಆಗಿತ್ತು. ಆದರೆ, ಸಿದ್ದರಾಮಯ್ಯ ಅವರೊಬ್ಬರೇ ಮಾಡಿದ ಸಾಲ ಶೇ ೬೦ರಷ್ಟು ಹೀಗಿರುವಾಗ ನಿಮ್ಮನ್ನು ಸಾಲದ ರಾಮಯ್ಯ ಎಂದು ಕರೆಯುವುದು ಸರಿ ಅಲ್ಲವೇ ಎಂದು ಪ್ರಶ್ನಿಸಿದರು.
ತಿಮ್ಮಾಪುರ ಅವರ ಅಬಕಾರಿ ಹಗರಣ ೬ ಸಾವಿರ ಕೋಟಿ
ಬಾಗಲಕೋಟೆ ಕುಟುಂಬ ಆರ್.ಬಿ.ತಿಮ್ಮಾಪುರ ಅವರ ಅಬಕಾರಿ ಹಗರಣ ೬ ಸಾವಿರ ಕೋಟಿ, ಮುಡಾ ಹಗರಣ, ದರೋಡೆ ಕಾರಣಕ್ಕೆ ನೀವು ಸುದ್ದಿಯಲ್ಲಿದ್ದಿರಿ. ಡ್ರಗ್ಸ್ ಕಾರಣಕ್ಕೆ ಸುದ್ದಿಯಲ್ಲಿದ್ದಿರಿ. ರೈತರ ಆತ್ಮಹತ್ಯೆಯಲ್ಲಿ ರಾಜ್ಯ ೨ನೇ ಸ್ಥಾನದಲ್ಲಿ ಇರುವುದು ಒಳ್ಳೆಯ ಸುದ್ದಿಯೇ ಎಂದು ಕೇಳಿದರು. ಸರಕಾರಿ ನೌಕರರು, ಪ್ರಾಮಾಣಿಕ ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಂಡದ್ದು ಒಳ್ಳೆಯ ಸುದ್ದಿಯೇ ಎಂದು ಪ್ರಶ್ನಿಸಿದರು.
ವಾಟರ್ಮನ್ ಸಂಬಳ ಇಲ್ಲ ಎಂದು ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡದ್ದು ಒಳ್ಳೆಯ ಸುದ್ದಿಯೇ? ಶಾಸಕನ ಭ್ರಷ್ಟಾಚಾರಕ್ಕೆ ಬೇಸತ್ತು ಒಬ್ಬ ಸಬ್ ಇನ್ಸ್ಪೆಕ್ಟರ್ ಆತ್ಮಹತ್ಯೆ ಮಾಡಿಕೊಂಡದ್ದು ಒಳ್ಳೆಯ ಸುದ್ದಿಯೇ ಎಂದು ಕೇಳಿದರು. ಈ ರೀತಿ ದಿನಬೆಳಗಾದರೆ ಕೆಟ್ಟ ಕಾರಣಕ್ಕೆ ಈ ಸರಕಾರ ಸುದ್ದಿಯಲ್ಲಿದೆ ಎಂದು ಟೀಕಿಸಿದರು. ಬಾಣಂತಿಯರು, ಹಸುಗೂಸುಗಳ ಸರಣಿ ಸಾವು, ಸರಕಾರಿ ಆಸ್ಪತ್ರೆಯಲ್ಲಿ ಔಷಧಿ ಸರಬರಾಜು ಇಲ್ಲ- ಇವು ಒಳ್ಳೆಯ ಸುದ್ದಿಗಳೇ ಎಂದು ಕೇಳಿದರು.
ಕಾಂಗ್ರೆಸ್ ಸರಕಾರವು ಒಂದೋ ಭ್ರಷ್ಟಾಚಾರದ ಕಾರಣಕ್ಕೆ ಮುಖಪುಟದಲ್ಲಿ ಸುದ್ದಿಯಾಗಿ ಕಾಣಿಸಿಕೊಂಡಿದೆ. ಇನ್ನೊಂದು ಬೆಲೆ ಏರಿಕೆ, ಐಪಿಎಲ್ ಮ್ಯಾಚ್ನಲ್ಲಿ ಆರ್ಸಿಬಿ ವಿಜಯೋತ್ಸವವನ್ನು ಇವರೇ ಗೆದ್ದವರಂತೆ ಆಚರಿಸಲು ಹೋಗಿ ಕಾಲ್ತುಳಿತದಿಂದ ೧೧ ಜನರ ಅಮಾಯಕರ ಸಾವಿಗೆ ಕಾರಣವಾದುದು- ಈ ಥರ ಕೆಟ್ಟ ಕಾರಣಕ್ಕಾಗಿ ಈ ಸರಕಾರವು ಸುದ್ದಿಯಲ್ಲಿದ್ದುದನ್ನು ನಾವು ನೋಡಬಹುದು ಎಂದರು.
ಬಾಗಲಕೋಟೆಗೆ ಏನು ಒಳ್ಳೆಯ ಕಾರ್ಯ ಮಾಡಿದ್ದೀರೆಂದು ಹೇಳಿ
ಮುಖ್ಯಮಂತ್ರಿ ಮತ್ತು ಸಚಿವರು ತಾವು ಮಾಡಿದ ಒಳ್ಳೆಯ ಕಾರ್ಯವನ್ನು ಹೇಳಲಿ ಎಂದು ಸವಾಲು ಹಾಕಿದರು. ಬಾಗಲಕೋಟೆಗೆ ಏನು ಒಳ್ಳೆಯ ಕಾರ್ಯ ಮಾಡಿದ್ದೀರೆಂದು ಹೇಳಿ ಎಂದು ಒತ್ತಾಯಿಸಿದರು. ಚುನಾವಣೆ ಬರದೇ ಇದ್ದರೆ ಇಲ್ಲಿನ ಮೆಡಿಕಲ್ ಕಾಲೇಜಿಗೆ ಅಡಿಗಲ್ಲೂ ಬೀಳುತ್ತಿರಲಿಲ್ಲ ಎಂದು ವ್ಯಂಗ್ಯವಾಡಿದರು. ನೀವು ೨೦೧೪ರ ಚುನಾವಣೆಯಲ್ಲೇ ಬಾಗಲಕೋಟೆಗೆ ಮೆಡಿಕಲ್ ಕಾಲೇಜು ಕೊಡುವುದಾಗಿ ಭಾಷಣ ಮಾಡಿ ಹೋಗಿದ್ದೀರಿ ಎಂಬುದನ್ನು ನೆನಪಿಸಿದರು

























