
ಸಂಜೆವಾಣಿ ವಾರ್ತೆ,
ವಿಜಯಪುರ, ಏ.೩: ಅಕ್ಕಮಹಾದೇವಿ ಅಧ್ಯಾತ್ಮಿಕ ಸ್ವಾತಂತ್ರ್ಯದ ಸಂಕೇತ. ಅವರ ವಚನಗಳು ಕನ್ನಡ ಸಾಹಿತ್ಯದ ಅತ್ಯುನ್ನತ ಅನುಭಾವ ಕಾವ್ಯವಾಗಿದ್ದು, ಅವು ವೈರಾಗ್ಯ, ಭಕ್ತಿ ಮತ್ತು ಸ್ತ್ರೀವಾದದ ಮಿಶ್ರಣವಾಗಿವೆ.ಆಕೆಯ ವಚನಗಳು ಇಂದಿಗೂ ಪ್ರಸ್ತುತವಾಗಿದ್ದು, ವ್ಯಕ್ತಿತ್ವ ವಿಕಸನಕ್ಕೆ ದಾರಿದೀಪವಾಗಿವೆ ಎಂದು ಶಿಕ್ಷಕ ಸಾಹಿತಿ ಸಂತೋಷ ಬಂಡೆ ಹೇಳಿದರು.
ನಗರದ ಬಂಜಾರಾ ಶಿಕ್ಷಣ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ ಅಕ್ಕಮಹಾದೇವಿ ಜಯಂತಿ ಆಚರಣೆಯಲ್ಲಿ ‘ಅಕ್ಕಮಹಾದೇವಿಯ ವಚನಗಳ ಪ್ರಸ್ತುತತೆ’ ಕುರಿತು ಅವರು ಮಾತನಾಡಿದರು.
ಅಕ್ಕಳು ತನ್ನ ವಚನಗಳಲ್ಲಿ ಬುದ್ದಿಗಿಂತ ಭಾವಕ್ಕೆ,
ಮಾತಿಗಿಂತ ಕ್ರಿಯೆಗೆ, ಅಧಿಕಾರಕ್ಕಿಂತ ಅಂತಃಕರಣಕ್ಕೆ ಹೆಚ್ಚಿನ ಮಹತ್ವ ನೀಡಿದ್ದಾರೆ. ಅಕ್ಕಳ ಮಾತು ಪಾಂಡಿತ್ಯದ ಪ್ರದರ್ಶನ ಆಗಿರದೇ, ಅಂತರAಗದಲ್ಲಿ ಹಚ್ಚಿಟ್ಟ ದೀಪದಂತಿದೆ. ಅಕ್ಕ ಒಬ್ಬ ಕವಯತ್ರಿ-ಅನುಭಾವಿ-ಜ್ಞಾನದ ಬೆಳಕಾಗಿ ಕನ್ನಡ ಸಾಹಿತ್ಯದ ದೃವತಾರೆಯಾಗಿದ್ದಾಳೆ ಎಂದು ಹೇಳಿದರು.
ಶಿಕ್ಷಕ ಜಟ್ಟಪ್ಪ ಮಾದರ ಮಾತನಾಡಿ, ಅಕ್ಕಳನ್ನು ಭಕ್ತಿ, ಜ್ಞಾನ, ವೈರಾಗ್ಯಗಳ ಖಣಿ ಎಂದು ಶರಣರು ಬಣ್ಣಿಸಿರುವರು. ಆದಕಾರಣ ಶರಣರಿಗೆ ಬಸವಣ್ಣ ಪ್ರಮುಖರಾದಂತೆ ಶರಣೆಯರಿಗೆ ಅಕ್ಕಮಹಾದೇವಿ ಆದರ್ಶರಾಗಿರುವರು ಎಂದರು.
ಕಾಲೇಜಿನ ಉಪಪ್ರಾಚಾರ್ಯ ಟಿ ಬಿ ಪವಾರ ಅಧ್ಯಕ್ಷತೆ ವಹಿಸಿ ಮಾತನಾಡಿ, ಕನ್ನಡ ಸಾಹಿತ್ಯದ ಮೊದಲ ಬಂಡಾಯ ಕವಯತ್ರಿ, ವಚನಗಾರ್ತಿ, ಮಹಿಳೆಯರ ಪ್ರತಿನಿಧಿಯಾಗಿ, ಸಾಮಾಜಿಕ ಬದಲಾವಣೆಗೆ ಶ್ರಮಿಸಿದ ಅಕ್ಕಮಹಾದೇವಿಯ ಬದುಕೇ ಒಂದು ಮಹಾಕಾವ್ಯ ಎಂದು ಹೇಳಿದರು.
ಉಪನ್ಯಾಸಕ ಅಮರೇಶ ಸಾಲಕ್ಕಿ ಪ್ರಾಸ್ತಾವಿಕವಾಗಿ ಮಾತನಾಡಿ,ಚನ್ನಮಲ್ಲಿಕಾರ್ಜುನನನ್ನು ಪತಿಯೆಂದು ಭಾವಿಸಿ ಆಕೆ ತೋರಿದ ಉತ್ಕಟ ಪ್ರೇಮ, ಲೌಕಿಕ ಬಂಧನಗಳ ತ್ಯಾಗ, ಮತ್ತು ನಿರ್ಭಯವಾದ ಆತ್ಮಸಾಕ್ಷಾತ್ಕಾರ ಅವಳ ವಚನಗಳ ಮುಖ್ಯ ವಸ್ತುವಾಗಿದೆ ಎಂದು ಹೇಳಿದರು.
ಉಪನ್ಯಾಸಕ ಎಸ್ ಎಂ ಕುಂಬಾರ ವೇದಿಕೆಯಲ್ಲಿದ್ದರು. ಪ್ರಶಿಕ್ಷಣಾರ್ಥಿ ಪೂಜಾ ಚವ್ಹಾಣ ಪ್ರಾರ್ಥಿಸಿದರು. ಶಿವಾನಂದ ತೋಟದ ನಿರೂಪಿಸಿದರು. ಪ್ರಶಿಕ್ಷಣಾರ್ಥಿಗಳು, ಬೋಧಕ- ಬೋಧಕೇತರ ಸಿಬ್ಬಂದಿಯವರು ಉಪಸ್ಥಿತರಿದ್ದರು.























