
ಯತಿರಾಜ್ 7ನೇ ಚಿತ್ರಕ್ಕೆ ಸ್ಕ್ರಿಪ್ಟ್ ಪೂಜೆ
ಯುಗಾದಿ ಹಬ್ಬದ ಶುಭಸಂದರ್ಭದಲ್ಲಿ ಹೊಸ ಹಾರರ್ ಕಥೆಯೊಂದಿಗೆ ನಿರ್ದೇಶಕ ಯತಿರಾಜ್ ಮತ್ತೆ ಸುದ್ದಿಯಲ್ಲಿದ್ದಾರೆ. ಬೆಂಗಳೂರಿನ ಪ್ರಶಾಂತನಗರದ ಪ್ರಶಾಂತ ಗಣಪತಿ ದೇವಾಲಯದಲ್ಲಿ ಸರಳವಾಗಿ ನಡೆದ ಸ್ಕ್ರಿಪ್ಟ್ ಪೂಜೆಯೊಂದಿಗೆ ಅವರ ಏಳನೇ ನಿರ್ದೇಶನದ ಸಿನಿಮಾ ಅಧಿಕೃತವಾಗಿ ಶುರುವಾಗಿದೆ.
ಪತ್ರಕರ್ತನಾಗಿ, ನಟನಾಗಿ, ಇದೀಗ ನಿರ್ದೇಶಕರಾಗಿ ವಿಭಿನ್ನ ಪ್ರಯೋಗಗಳನ್ನು ಮಾಡುತ್ತಿರುವ ಯತಿರಾಜ್, ಈ ಬಾರಿ ಸಂಪೂರ್ಣ ಹಾರರ್ ಜಾನರ್ಗೆ ಕಾಲಿಟ್ಟಿದ್ದಾರೆ. ಹಾಸ್ಯ ಹಾಗೂ ಭಾವನಾತ್ಮಕ ಅಂಶಗಳನ್ನು ಬೆರೆಸಿಕೊಂಡಿರುವ ಈ ಕಥೆ ಪ್ರೇಕ್ಷಕರಿಗೆ ಹೊಸ ಅನುಭವ ನೀಡಲಿದೆ ಎನ್ನಲಾಗಿದೆ.
ಸುನಿ ವಿನಿ ಪ್ರಸ್ತುತಪಡಿಸುತ್ತಿರುವ ಈ ಚಿತ್ರ ವೃದ್ಧಿ ಎಂಟರ್ಪ್ರೈಸಸ್ ಬ್ಯಾನರ್ನಲ್ಲಿ ನಿರ್ಮಾಣವಾಗುತ್ತಿದ್ದು, ಟಿ.ಆರ್. ಚೇತನ್ ಬಂಡವಾಳ ಹೂಡುತ್ತಿದ್ದಾರೆ. ಇನ್ನೂ ಹೆಸರಿಡದ ಈ ಸಿನಿಮಾ ಮೇ ತಿಂಗಳಲ್ಲಿ ಚಿತ್ರೀಕರಣಕ್ಕೆ ಸಜ್ಜಾಗಿದ್ದು, ಕಲಾವಿದರ ಆಯ್ಕೆ ಪ್ರಕ್ರಿಯೆ ಮುಂದುವರಿದಿದೆ.
ಸಂಗೀತ ನಿರ್ದೇಶಕ ವಿಜಯ್ ಹರಿತ್ಸ್ ಮತ್ತೆ ಯತಿರಾಜ್ ಜೊತೆ ಕೈಜೋಡಿಸುತ್ತಿದ್ದು, ಸಂಭಾಷಣೆಗಳನ್ನು ಶ್ರೀಕಾಂತ್ ರಚಿಸುತ್ತಿದ್ದಾರೆ. ಪ್ರಚಾರ ಕಲೆಯನ್ನು ಸುಧೀಂದ್ರ ವೆಂಕಟೇಶ್ ನೋಡಿಕೊಳ್ಳಲಿದ್ದು, ಅರುಣ್ ಕುಮಾರ್ ಸಹ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ. ಚಿತ್ರತಂಡದ ಉಳಿದ ಸದಸ್ಯರ ಆಯ್ಕೆ ಕೂಡ ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ.


























