Home ಸಿನೆಮಾ ಯಾವ ಮೋಹನ ಮುರಳಿ ಕರೆಯಿತು’ ಟ್ರೇಲರ್ ಬಿಡುಗಡೆ

ಯಾವ ಮೋಹನ ಮುರಳಿ ಕರೆಯಿತು’ ಟ್ರೇಲರ್ ಬಿಡುಗಡೆ

ಸಸ್ಪೆನ್ಸ್ ಜೊತೆ ಸೆಂಟಿಮೆಂಟ್ ಸರ್ಪ್ರೈಸ್!

ಭಾವನೆ, ರಹಸ್ಯ ಮತ್ತು ಥ್ರಿಲ್ಲರ್ ಪ್ಯಾಕೇಜ್ ಆಗಿ ಬರುತ್ತಿರುವ ‘ಯಾವ ಮೋಹನ ಮುರಳಿ ಕರೆಯಿತು’ ಸಿನಿಮಾ ಇದೇ ಮಾರ್ಚ್ 27ರಂದು ರಾಜ್ಯಾದ್ಯಂತ ತೆರೆಗೆ ಬರಲು ಸಿದ್ಧವಾಗಿದೆ. ಇತ್ತೀಚೆಗೆ ಬಿಡುಗಡೆಯಾದ ಟ್ರೇಲರ್ ಪ್ರೇಕ್ಷಕರ ಗಮನ ಸೆಳೆಯುತ್ತಿದ್ದು, ಕಥೆಯ ಒಳಹಂದರದ ಮೇಲೆ ಕುತೂಹಲ ಹೆಚ್ಚಿಸಿದೆ.

ಪ್ರಕೃತಿ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಶರಣಪ್ಪ ಗೌರಮ್ಮ ನಿರ್ಮಿಸಿರುವ ಈ ಚಿತ್ರಕ್ಕೆ ಒಂದು ವಿಭಿನ್ನ ಹಿನ್ನೆಲೆ ಇದೆ. ರಷ್ಯಾದಲ್ಲಿ ನಡೆದ ಇಂಟರ್‌ನ್ಯಾಷನಲ್ ಕಿಕ್‌ಬಾಕ್ಸಿಂಗ್ ಸ್ಪರ್ಧೆಯಲ್ಲಿ ಮೆಡಲ್ ಗೆದ್ದಿರುವ ಶರಣಪ್ಪ ಅವರು ವಕೀಲರು ಹಾಗೂ ರಿಯಲ್ ಎಸ್ಟೇಟ್ ಉದ್ಯಮಿಗಳಾಗಿದ್ದಾರೆ. ಮಗಳಿಗಾಗಿ ಒಳ್ಳೆಯ ಕಥೆಯನ್ನು ಆರಿಸಿ ಸಿನಿಮಾ ನಿರ್ಮಾಣಕ್ಕೆ ಕೈಹಾಕಿದ ಅವರು, ಹಲವು ಸವಾಲುಗಳ ನಡುವೆಯೂ ಚಿತ್ರವನ್ನು ಪೂರ್ಣಗೊಳಿಸಿದ್ದಾರೆ.

ಟ್ರೇಲರ್ ಬಿಡುಗಡೆ ಸಂದರ್ಭದಲ್ಲಿ ಮಾತನಾಡಿದ ಶರಣಪ್ಪ, “ಚಿತ್ರದಲ್ಲಿ ನಟಿಸಿದ್ದ ‘ರಾಕಿ’ ಎಂಬ ನಾಯಿ ಶೂಟಿಂಗ್ ಮಧ್ಯೆ ದುರಂತದಲ್ಲಿ ಸಾವನ್ನಪ್ಪಿದ್ದು ದೊಡ್ಡ ಆಘಾತವಾಯಿತು. ನಂತರ ‘ರಾಣಾ’ ಎಂಬ ನಾಯಿ ದೊಡ್ಡದಾಗುವವರೆಗೂ ಕಾಯ್ದು ಕ್ಲೈಮ್ಯಾಕ್ಸ್ ಚಿತ್ರೀಕರಿಸಿದ್ದೇವೆ. ಅದರಿಂದ ಸಿನಿಮಾ ತಡವಾಯಿತು. ನಾಯಿ ಪ್ರೇಮಿಗಳಿಗೆ ಇದು ತುಂಬಾ ಹತ್ತಿರವಾಗುವ ಸಿನಿಮಾ,” ಎಂದರು. ಮುಂದಿನ ದಿನಗಳಲ್ಲಿ ಕಿಕ್‌ಬಾಕ್ಸಿಂಗ್ ಹಿನ್ನೆಲೆಯಲ್ಲೂ ಸಿನಿಮಾ ಮಾಡುವ ಯೋಚನೆ ಇದೆ ಎಂದು ಹೇಳಿದರು.

ಚಿತ್ರದ ಕಥೆ, ಚಿತ್ರಕಥೆ ಮತ್ತು ನಿರ್ದೇಶನವನ್ನು ಮೊದಲ ಬಾರಿಗೆ ಮಾಡಿರುವ ವಿಶ್ವಾಸ್ ಕೃಷ್ಣ, “ಇದು ಎಮೋಷನಲ್ ಜರ್ನಿ ಹೊಂದಿದ ಸಿನಿಮಾ. ಪೆಟ್ ಲವರ್ಸ್‌ಗೂ ಫ್ಯಾಮಿಲಿ ಆಡಿಯನ್ಸ್‌ಗೂ ತುಂಬಾ ಇಷ್ಟವಾಗುವಂಥದ್ದು,” ಎಂದು ಹೇಳಿದರು.

ನಿರ್ಮಾಪಕರ ಮಗಳು ಕುಮಾರಿ ಪ್ರಕೃತಿ ಮುಖ್ಯಭೂಮಿಕೆಯಲ್ಲಿ ನಟಿಸಿದ್ದು, ಅವರು ಕೂಡ ಕಿಕ್‌ಬಾಕ್ಸಿಂಗ್‌ನಲ್ಲಿ ಎರಡು ಅಂತರರಾಷ್ಟ್ರೀಯ ಪದಕಗಳನ್ನು ಪಡೆದಿದ್ದಾರೆ. ಇನ್ನಿತರ ಪಾತ್ರಗಳಲ್ಲಿ ಮಾಧವ, ಸ್ವಪ್ನ ಶೆಟ್ಟಿಗಾರ ಹಾಗೂ ಪಟೇಲ್ ವರುಣ್ ರಾಜ್ ಅಭಿನಯಿಸಿದ್ದಾರೆ.

ಅನಿಲ್ ಸಿ.ಜೆ ಅವರ ಸಂಗೀತ ಮತ್ತು ಕೀರ್ತನ್ ಪೂಜಾರಿ ಅವರ ಛಾಯಾಗ್ರಹಣ ಚಿತ್ರಕ್ಕೆ ಮೆರುಗು ನೀಡಿದೆ. ವಿಶೇಷವಾಗಿ ರಾಣಾ ಮತ್ತು ರಾಕಿ ಎಂಬ ನಾಯಿಗಳ ಅಭಿನಯ ಈ ಚಿತ್ರದ ಹೃದಯವಾಗಿದ್ದು, ಟ್ರೇಲರ್ ಅನ್ನು ರಾಣಾ ಬಿಡುಗಡೆ ಮಾಡಿರುವುದು ವಿಶೇಷವಾಗಿ ಗಮನ ಸೆಳೆದಿದೆ.

ಒಟ್ಟಿನಲ್ಲಿ, ಸೆಂಟಿಮೆಂಟ್, ಸಸ್ಪೆನ್ಸ್ ಮತ್ತು ಥ್ರಿಲ್ಲರ್ ಮಿಶ್ರಣವಾಗಿರುವ ಈ ಸಿನಿಮಾ ಫ್ಯಾಮಿಲಿ ಪ್ರೇಕ್ಷಕರಿಗೆ ಹೊಸ ಅನುಭವ ನೀಡುವ ನಿರೀಕ್ಷೆಯಿದೆ.