
ಮಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಕೋಮು ಪ್ರಚೋದನಕಾರಿ ಪೋಸ್ಟ್ಗಳನ್ನು ಹಂಚಿಕೊಂಡ ಆರೋಪದ ಮೇಲೆ ಉಡುಪಿ ಮೂಲದ ಯುವಕನೊಬ್ಬನನ್ನು ಕಂಕನಾಡಿ ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಮೂಡುಬೆಳ್ಳೆ ಗ್ರಾಮದ ಪವನ್ ಆಚಾರ್ಯ (೨೨) ಬಂಧಿತ ಆರೋಪಿ. ಈತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಮಾನ್ಯ ನ್ಯಾಯಾಲಯವು ೧೪ ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ನೀಡಿದೆ.
೨೦೨೫ರಲ್ಲಿ ಮಂಗಳೂರು ನಗರದಲ್ಲಿ ನಡೆದ ಸುಹಾಸ್ ಶೆಟ್ಟಿ ಕೊಲೆ ಪ್ರಕರಣದ ನಂತರದ ದಿನಗಳಲ್ಲಿ, ಸಮಾಜದಲ್ಲಿ ಅಶಾಂತಿ ಮೂಡಿಸುವ ಮತ್ತು ಕೋಮು ಭಾವನೆಗಳನ್ನು ಕೆರಳಿಸುವಂತಹ ಪೋಸ್ಟ್ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿತ್ತು. ಈ ಕುರಿತು ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಬಿ.ಎನ್.ಎಸ್. ಕಾಯಿದೆಯ ವಿವಿಧ ಕಲಂ ಅಡಿ ಪ್ರಕರಣ ದಾಖಲಾಗಿತ್ತು.
ತನಿಖೆ ಮತ್ತು ಬಂಧನ:
ಪ್ರಕರಣದ ತನಿಖೆ ನಡೆಸಿದ ಪೊಲೀಸರು, ‘ಖಿಓ- ಒಂಆಆಙ’ ಎಂಬ ಹೆಸರಿನ ಸೋಷಿಯಲ್ ಮೀಡಿಯಾ ಖಾತೆಯಿಂದ ಈ ಪ್ರಚೋದನಾಕಾರಿ ಸಂದೇಶಗಳನ್ನು ಹಂಚಿಕೊಂಡಿರುವುದನ್ನು ಪತ್ತೆಹಚ್ಚಿದ್ದರು. ತಾಂತ್ರಿಕ ವಿಶ್ಲೇಷಣೆಯ ಮೂಲಕ ಈ ಖಾತೆಯು ಪವನ್ ಆಚಾರ್ಯ ಎಂಬಾತನಿಗೆ ಸೇರಿದ್ದೆಂದು ದೃಢಪಟ್ಟ ಹಿನ್ನೆಲೆಯಲ್ಲಿ, ಮಾರ್ಚ್ ೨೫ರಂದು ಪೊಲೀಸರು ಆತನನ್ನು ಬಂಧನ ಮಾಡಿದ್ದಾರೆ.
ವಿಶೇಷವೆಂದರೆ, ಇದೇ ಆರೋಪಿಯ ವಿರುದ್ಧ ಈಗಾಗಲೇ ಉಡುಪಿ ಜಿಲ್ಲೆಯ ಕಾಪು ಪೊಲೀಸ್ ಠಾಣೆಯಲ್ಲೂ ಕೋಮು ಪ್ರಚೋದನೆಯ ಪೋಸ್ಟ್ ಹಾಕಿದ ಸಂಬಂಧ ಮತ್ತೊಂದು ಪ್ರಕರಣ ದಾಖಲಾಗಿದ್ದು, ಅಲ್ಲಿಯೂ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.





























