
ಕಾಳಗಿ :ಮಾ.16: ತಾಲೂಕಿನ ವಿವಿಧ ಗ್ರಾಮಗಳ ರೈತರಿಗೆ ಬೆಳೆ ಪರಿಹಾರ ನೀಡುವಲ್ಲಿ ನೂರಾರು ರೈತರ ಹೆಸರು ಕೈಬಿಟ್ಟಿರುವದನ್ನು ತಂತ್ರಾಂಶದಲ್ಲಿ ನಮೂದಿಸಿ. ಪರಿಹಾರ ನೀಡಿ ಮತ್ತು ಬೆಳೆ ವಿಮೆ ಹಣ ಮಂಜೂರು ಮಾಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ವತಿಯಿಂದ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ರೈತ ಸೇನೆ ತಾಲೂಕು ಅಧ್ಯಕ್ಷ ವೀರಣ್ಣ ಗಂಗಾಣಿ ಮಾತನಾಡಿ ಕಾಳಗಿ ತಾಲೂಕಿನ ವ್ಯಾಪ್ತಿಗೆ ಬರುವ ಎಲ್ಲಾ ರೈತರು ಅತಿವೃಷ್ಟಿ ಮಳೆಯಿಂದ ಬೆಳೆಹಾನಿಯಾಗಿ ಸಂಕಷ್ಟದಲ್ಲಿದ್ದಾರೆ. ಇದನ್ನು ಪರಿಗಣಿಸಿದ ರಾಜ್ಯ ಮತ್ತು ಕೇಂದ್ರ ಸರ್ಕಾರವು ಪರಿಹಾರವನ್ನು ನೀಡುತ್ತಿದೆ. ಆದರೆ ನೂರಾರು ರೈತರ ಹೆಸರು ಕೈಬಿಟ್ಟಿರುವದನ್ನು ಕಂಡು ಬಂದಿರುತ್ತದೆ. ಇದರಿಂದ ರೈತರು ಪರಿಹಾರವನ್ನು ಪಡೆದುಕೊಳ್ಳದೇ ಕಂಗಾಲಾಗಿರುತ್ತಾರೆ. ಆದ್ದರಿಂದ ತಾವುಗಳು ಕೂಡಲೇ ಪರಿಶೀಲಿಸಿ, ಕೈಬಿಟ್ಟಿರುವ ರೈತರ ಹೆಸರನ್ನು ತಂತ್ರಾಂಶದಲ್ಲಿ ನಮೂದಿಸಿ ಪರಿಹಾರವನ್ನು ಕೂಡಲೇ ನೀಡಬೇಕು. ಮತ್ತು ಪ್ರಧಾನ ಮಂತ್ರಿ ಫಸಲ ಭೀಮಾ ಯೋಜನೆ ಅಡಿಯಲ್ಲಿ ಬೆಳೆವಿಮೆ ಹಣವನ್ನು ಕೂಡಲೇ ಮಂಜೂರು ಮಾಡಬೇಕು. ಈಗಾಗಲೇ ರೈತರಿಗೆ ಪರಿಹಾರದ ಹಣವನ್ನು ಹೆಚ್ಚು ಕಡಿಮೆಯಿಂದ ಗ್ರಾಮ ಆಡಳಿತಾಧಿಕಾರಿಗಳು ಹಣವನ್ನು ಹಾಕಲು ಎಂಟ್ರಿ ಮಾಡಿರುತ್ತಾರೆ. ಇದನ್ನು ತಾರತಮ್ಯ ರೀತಿಯಲ್ಲಿ ಮಾಡಿದ್ದು ಕಂಡುಬರುತ್ತಿದೆ. ರೈತರು ಈಗಾಗಲೇ ಬಹಳಷ್ಟು ಸಂಕಷ್ಟದಲ್ಲಿದ್ದು ರೈತರ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದರು.



























